ಚನ್ನಗಿರಿ: ಇಬ್ಬರು ಮಹಿಳೆಯರನ್ನು ಮಸೀದಿಯ ಎದುರು ಸಾರ್ವಜನಿಕವಾಗಿ ಥಳಿಸಿದ ತಾಲ್ಲೂಕಿನ ತಾವರೆಕೆರೆ ಗ್ರಾಮಕ್ಕೆ ಭೇಟಿ ನೀಡಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡಾ.ಅರ್ಚನಾ ಮುಜುಂದಾರ್ ಅವರ ಕಾರು ತಡೆದು ಮುಸ್ಲಿಂ ಸಮುದಾಯದ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು.
ಅಮಾನವೀಯ ಕೃತ್ಯವನ್ನು ಸಮರ್ಥಿಸಿಕೊಂಡ ಪ್ರತಿಭಟನಕಾರರು, ಪೊಲೀಸರು ಬಂಧಿಸಿರುವ ಆರೋಪಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಸಂತ್ರಸ್ತ ಮಹಿಳೆಯರಿಗೆ ಸಾಂತ್ವನ ಹೇಳಿ ಚನ್ನಗಿರಿಯತ್ತ ಪ್ರಯಾಣ ಬೆಳೆಸಲು ಮುಂದಾದ ಅರ್ಚನಾ ಅವರ ಕಾರನ್ನು ಗುಂಪೊಂದು ತಡೆಯಿತು. ಇದರಲ್ಲಿ ಆರೋಪಿಗಳ ಕುಟುಂಬದ ಸದಸ್ಯರು ಹೆಚ್ಚಾಗಿದ್ದರು. ಆರೋಪಿ ಪುರುಷರು ಮಾಡಿದ್ದು ತಪ್ಪಲ್ಲ, ಪ್ರಕರಣದಲ್ಲಿ ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರದ್ದೇ ತಪ್ಪಿದೆ. ಅವರ ಗಂಡಂದಿರು ದೂರು ನೀಡಿದ್ದರಿಂದ ಮಸೀದಿ ಕ್ರಮ ಕೈಗೊಂಡಿದೆ. ಅಮಾಯಕರ ಬಂಧನದಿಂದ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದರಿಂದ ಗ್ರಾಮದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
‘ಮಹಿಳೆಯರಿಬ್ಬರ ಮೇಲೆ ಪುರುಷರು ಸಾರ್ವಜನಿಕವಾಗಿ ಹಲ್ಲೆ ನಡೆಸಿರುವುದು ವಿಡಿಯೊದಲ್ಲಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ’ ಎಂದು ಡಾ.ಅರ್ಚನಾ ಮುಜುಂದಾರ್ ಪ್ರತಿಭಟನಕಾರರಿಗೆ ಹೇಳಿದರು.
ಪರ ಪುರುಷನೊಂದಿಗೆ ಸಲುಗೆಯಿಂದ ವರ್ತಿಸಿದ ಹಾಗೂ ಇದಕ್ಕೆ ಸಹಕಾರಿಸಿದ ಇಬ್ಬರು ಮಹಿಳೆಯರ ಮೇಲೆ ಮುಸ್ಲಿಂ ಸಮುದಾಯದ ಗುಂಪೊಂದು ಜಾಮೀಯಾ ಮಸೀದಿಯ ಎದುರು ಏ.9ರಂದು ಅಮಾನುಷವಾಗಿ ಹಲ್ಲೆ ನಡೆಸಿತ್ತು. ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.