ADVERTISEMENT

ಹೊನ್ನಾಳಿ: ಸರ್ಕಾರಿ ಕಾಲೇಜುಗಳಿವೆ.. ಹೋಗಲು ಸರ್ಕಾರಿ ಬಸ್‌ಗಳಿಲ್ಲ..!

ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಿಗೆ ನಡಿಗೆಯೇ ಗತಿ

ಎನ್.ಕೆ.ಆಂಜನೇಯ
Published 31 ಜನವರಿ 2025, 7:49 IST
Last Updated 31 ಜನವರಿ 2025, 7:49 IST
ಹೊನ್ನಾಳಿ ತಾಲ್ಲೂಕಿನ ಸುಂಕದಕಟ್ಟೆ ಸಮೀಪದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು
ಹೊನ್ನಾಳಿ ತಾಲ್ಲೂಕಿನ ಸುಂಕದಕಟ್ಟೆ ಸಮೀಪದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು   

ಹೊನ್ನಾಳಿ: ತಾಲ್ಲೂಕಿನ ಸುಂಕದಕಟ್ಟೆ ಸಮೀಪದಲ್ಲಿನ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿಗೆ ಬಸ್ ಸೌಲಭ್ಯವೇ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ನಿತ್ಯ 4.5 ಕಿ.ಮೀ ನಡೆದುಕೊಂಡು ಹೋಗಿ ಬರುವುದು ಅನಿವಾರ್ಯವಾಗಿದೆ.

ಹೊನ್ನಾಳಿಯಿಂದ ಸುಂಕದಕಟ್ಟೆ 3 ಕಿ.ಮೀ. ದೂರದಲ್ಲಿದೆ. ಸುಂಕದಕಟ್ಟೆಯಿಂದ 1.5 ಕಿ.ಮೀ ದೂರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ (ಆಟೋಮೊಬೈಲ್ ಎಂಜಿನಿಯರಿಂಗ್ ಮತ್ತು ಆಲ್ಟರನೇಟಿವ್ ಎನರ್ಜಿ ಟೆಕ್ನಾಲಜಿ) ಕಾಲೇಜು ಇದೆ. ಸಮೀಪದಲ್ಲೇ ಸರ್ಕಾರಿ ಐಟಿಐ ಕಾಲೇಜು ಕೂಡ ಇದೆ.

ಪ್ರತಿದಿನ ಎರಡೂ ಕಾಲೇಜಿಗೆನೂರಾರು ವಿದ್ಯಾರ್ಥಿಗಳು ನಡೆದುಕೊಂಡೇ ಸಾಗಬೇಕು. ಹೊನ್ನಾಳಿಯಿಂದ ಸುಂಕದಕಟ್ಟೆಗೆ ಕೆಲ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಆದರೆ, ಅವು ಕಾಲೇಜಿನ ಸಮಯಕ್ಕೆ ಬರುವುದಿಲ್ಲ. ಇದರಿಂದ ಹೊನ್ನಾಳಿಗೆ 4.5 ಕಿ.ಮೀ. ನಡೆದುಕೊಂಡು ಹೋಗಬೇಕು. ಸುಂಕದಕಟ್ಟೆಯಿಂದ ಬಸ್ ಸಿಕ್ಕರೆ ವಿದ್ಯಾರ್ಥಿಗಳು ಕೊಂಚ ನಿರಾಳರಾಗುತ್ತಾರೆ.

ADVERTISEMENT

2021-22ರಲ್ಲಿ ಆರಂಭವಾದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ 190ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸಮೀಪದ ಐಟಿಐ ಕಾಲೇಜಿನಲ್ಲಿ 70 ವಿದ್ಯಾರ್ಥಿಗಳು ಇದ್ದಾರೆ. ಇವರಿಗೆ ಸಾರಿಗೆ ವ್ಯವಸ್ಥೆಯೇ ಇಲ್ಲ. ಕೆಲವು ಉಳ್ಳವರು ಬೈಕ್‌ನಲ್ಲಿ ಬರುತ್ತಾರೆ. ಉಳಿದವರಿಗೆ ನಡಿಗೆ ಅನಿವಾರ್ಯ. ರಸ್ತೆ ಹಾಳಾದ ಕಾರಣ ಇಲ್ಲಿಗೆ ಯಾವುದೇ ಬಸ್‌ ಸೌಲಭ್ಯ ಇಲ್ಲ. ಜತೆಗೆ ಆಟೊಗಳ ಸಂಚಾರವೂ ಕಡಿಮೆ.

ಕಾಲೇಜಿಗೆ ಹರಿಹರ, ಮಲೇಬೆನ್ನೂರು, ಚನ್ನಗಿರಿ, ಬಸವಾಪಟ್ಟಣ, ಶಿಕಾರಿಪುರ, ಸವಳಂಗ, ನ್ಯಾಮತಿ ಭಾಗಗಳಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ಆಟೋಮೊಬೈಲ್ ಎಂಜಿನಿಯರಿಂಗ್ ಕೋರ್ಸ್ ಮುಗಿಸಿದವರಿಗೆ ತಯಾರಿಕಾ ಕಂಪನಿಗಳಲ್ಲಿ ಉದ್ಯೋಗಾವಕಾಶಗಳು ಸಿಗುತ್ತವೆ. ಕೆಎಸ್‍ಆರ್‌ಟಿಸಿ, ಆರ್‌ಟಿಒ ಕಚೇರಿಯಲ್ಲಿ ಮತ್ತು ರೈಲ್ವೆಯಲ್ಲಿ ಉದ್ಯೋಗಾವಕಾಶಗಳು ಇವೆ. ಆಲ್ಟರನೇಟಿವ್ ಎನರ್ಜಿ ಟೆಕ್ನಾಲಜಿ ಕೋರ್ಸ್ ಮುಗಿಸಿದವರಿಗೆ ಕೆಪಿಟಿಸಿಎಲ್‌ನಲ್ಲಿ ಉದ್ಯೋಗಗಳು ಸಿಗುತ್ತವೆ. ಈ ಕಾರಣ ಈ ಕೋರ್ಸ್‌ಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು. ಆದರೆ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್‌ ಸೌಲಭ್ಯ ಇಲ್ಲ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲ ಟಾಕಪ್ಪ ಚೌಹಾಣ್.

‘ಕಾಲೇಜಿನ ಆರಂಭದ ದಿನಗಳಲ್ಲಿ ಎಂ.ಪಿ. ರೇಣುಕಾಚಾರ್ಯ ಅವರು ಶಾಸಕರಾಗಿದ್ದಾಗ ಒಂದು ಬಸ್‌ ಸೌಲಭ್ಯ ಇತ್ತು. ಬಳಿಕ ಅದೂ ಸ್ಥಗಿತಗೊಂಡಿತು’ ಎಂದು ವಿದ್ಯಾರ್ಥಿ ಸಿ.ರೇವಣಸಿದ್ದೇಶ್ ಹೇಳಿದರು.

‘ಬೆಳಿಗ್ಗೆ 9.30ಕ್ಕೆ ಮತ್ತು ಸಂಜೆ 4ಕ್ಕೆ ಬಸ್ ಸೌಲಭ್ಯ ಕಲ್ಪಿಸಿಕೊಟ್ಟರೆ ಅನುಕೂಲವಾಗಲಿದೆ. ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ಮಲೇಬೆನ್ನೂರಿನ ವಿದ್ಯಾರ್ಥಿ ಮನೋಜ್ ಮನವಿ ಮಾಡಿದರು.

‘ಸುಂಕದಕಟ್ಟೆಯವರೆಗೆ ಕಾಲೇಜು ಬಿಟ್ಟರೆ ಬೇರೆ ಮನೆಗಳು ಇಲ್ಲ. ಒಂದು ರೀತಿಯ ನಿರ್ಜನ ಪ್ರದೇಶದಂತಿದೆ. ಇಲ್ಲಿ ಓಡಾಡಲು ಭಯಪಡುವಂತಾಗಿದೆ. ಬಸ್‌ ಸೌಲಭ್ಯ ಕಲ್ಪಿಸಬೇಕು’ ಎಂದು ವಿದ್ಯಾರ್ಥಿನಿ ಕೆ.ಎನ್. ವಿನುತಾ ಒತ್ತಾಯಿಸಿದರು.

‘ಕಾಲೇಜು ಉತ್ತಮ ಸೌಲಭ್ಯವನ್ನು ಹೊಂದಿದೆ. ಸುತ್ತಲಿನ ನೂರಾರು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಬಸ್ ಸೌಲಭ್ಯ ಕಲ್ಪಿಸಿದರೆ ಅನುಕೂಲವಾಗಲಿದೆ’ ಎಂದು ರೈತ ಕರಿಬಸಪ್ಪ ಹಾಗೂ ಉಪನ್ಯಾಸಕ ತಿಪ್ಪೇಸ್ವಾಮಿ ಹೇಳಿದರು.

ಸುಂಕದಕಟ್ಟೆ ಸಮೀಪದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ನಿಂತಿರುವುದು
ಕಾಲೇಜಿನ ರಸ್ತೆ ಹಾಳಾಗಿದೆ. ಮಳೆಗಾಲದಲ್ಲಿ ಈ ದಾರಿಯಲ್ಲಿ ಓಡಾಡಲು ಆಗದು. ಆ ಕಾರಣ ಬಸ್‌ಗಳು ಸಂಚರಿಸುತ್ತಿಲ್ಲ
ಮನೋಜ್ ವಿದ್ಯಾರ್ಥಿ
ಕಾಲೇಜಿಗೆ ಬಸ್ ಸೌಲಭ್ಯ ಕಲ್ಪಿಸಿಕೊಡಿ ಎಂದು ಇದೂವರೆಗೂ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಮನವಿ ಮಾಡಿದರೆ ಕ್ರಮ ಕೈಗೊಳ್ಳುತ್ತೇನೆ
ಡಿ.ಜಿ. ಶಾಂತನಗೌಡ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.