ADVERTISEMENT

ಬಿತ್ತನೆ ಬೀಜ, ಗೊಬ್ಬರ ಕೊರತೆ ಇಲ್ಲ: ಶಾಸಕ ಪ್ರೊ. ಲಿಂಗಣ್ಣ

ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 3:01 IST
Last Updated 1 ಜೂನ್ 2021, 3:01 IST
ಮಾಯಕೊಂಡ ಸಮೀಪದ ಆನಗೋಡಿನ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆಗೆ ಶಾಸಕ ಪ್ರೊ. ಲಿಂಗಣ್ಣ ಚಾಲನೆ ನೀಡಿದರು.
ಮಾಯಕೊಂಡ ಸಮೀಪದ ಆನಗೋಡಿನ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆಗೆ ಶಾಸಕ ಪ್ರೊ. ಲಿಂಗಣ್ಣ ಚಾಲನೆ ನೀಡಿದರು.   

ಆನಗೋಡು (ಮಾಯಕೊಂಡ): ಈ ವರ್ಷ ಮುಂಗಾರಿನಲ್ಲಿ ರೈತರ ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ಗೊಬ್ಬರ, ಬಿತ್ತನೆ‌ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಪ್ರೊ. ಲಿಂಗಣ್ಣ ಹೇಳಿದರು.

ಮಾಯಕೊಂಡ ಸಮೀಪದ ಆನಗೋಡು ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದಡಿ ಬಿತ್ತನೆ ಬೀಜ ವಿತರಿಸಿ ಅವರು ಮಾತನಾಡಿದರು.

ಈಗಾಗಲೇ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಪ್ರಾರಂಭಿಸಲಾಗಿದೆ. ಜಿಲ್ಲೆಗೆ ಅಗತ್ಯ ರಸಗೊಬ್ಬರ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರೈತರು ಗೊಬ್ಬರ ಖರೀದಿಸಲು ಮುಗಿ
ಬೀಳಬೇಕಿಲ್ಲ. ಸಂಯಮದಿಂದ ಅವಶ್ಯವಿರುವಷ್ಟು ಗೊಬ್ಬರ ಮಾತ್ರ ಖರೀದಿಸಬೇಕು ಎಂದರು.

ADVERTISEMENT

ಕ್ಷೇತ್ರದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ಡಿಎಪಿ ಗೊಬ್ಬರದ ಬೆಲೆ ಹೆಚ್ಚಾಗಿದ್ದರೂ, ಕೋವಿಡ್ ಸಂಕಷ್ಟ ಸಮಯದಲ್ಲಿ ರೈತರಿಗೆ ಸ್ಪಂದಿಸಲು ಪ್ರಧಾನಿಯವರು ಏರಿಕೆಯಾಗಿದ್ದ ಡಿಎಪಿ ಗೊಬ್ಬರದ ಬೆಲೆಯನ್ನು ₹ 1200ಗಳಿಗೆ ಇಳಿಸಿದ್ದಾರೆ. ರೈತರು ಅನಗತ್ಯ ಗೊಬ್ಬರ ಖರೀದಿಗೆ ಮುಂದಾಗದೇ ಅವಶ್ಯವಿರುವಷ್ಟು ಗೊಬ್ಬರವನ್ನು ಮಾತ್ರ ಖರೀದಿಸಬೇಕು ಎಂದು ಹೇಳಿದರು.

ಉಪ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ, ‘ಮೆಕ್ಕೆಜೋಳಕ್ಕೆ ಸಾಮಾನ್ಯ ವರ್ಗದ ರೈತರಿಗೆ ಕೆ.ಜಿ.ಗೆ ₹ 20, ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ಕೆ.ಜಿ.ಗೆ ₹ 30 ಸಹಾಯಧನ ಲಭ್ಯವಿದೆ. ತಾಲ್ಲೂಕಿನಲ್ಲಿ ಸುಮಾರು 29 ಸಾವಿರದಿಂದ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗುತ್ತಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು 2 ಕೆಜಿ ತೊಗರಿ ಪ್ಯಾಕೆಟ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ’ ಎಂದರು.

ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ, ಕೃಷಿ ಅಧಿಕಾರಿ ರವಿಕುಮಾರ್, ಸಹಾಯಕ ಕೃಷಿ ಅಧಿಕಾರಿ ಬಿ.ಕೆ. ಚಂದ್ರಪ್ಪ, ವಸಂತಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.