ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ
ದಾವಣಗೆರೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಬಸವಣ್ಣನವರ ಕುರಿತು ನೀಡಿದ ಹೇಳಿಕೆಯನ್ನು ಖಂಡಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ‘ಕೀಳುಮಟ್ಟದ ಹೇಳಿಕೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ, ನಿಮ್ಮನ್ನು ಹಾಳು ಬಾವಿಗೆ ನೂಕುವುದು ಸಮಾಜಕ್ಕೆ ಗೊತ್ತಿದೆ’ ಎಂದು ಎಚ್ಚರಿಕೆ ನೀಡಿದೆ.
‘ಸಮುದಾಯ ಬಾಂಧವರು ಎಂಬ ಕಾರಣಕ್ಕೆ ನಿಮ್ಮ ಹುಚ್ಚಾಟಗಳನ್ನು ಸಹಿಸಿಕೊಂಡಿದ್ದೆವು. ಇಂತಹ ಹುಚ್ಚಾಟಗಳಿಗೆ ಇತಿಶ್ರೀ ಹಾಡುತ್ತೀರೆಂದು ಭಾವಿಸುತ್ತೇವೆ. ಇಲ್ಲವಾದರೆ, ಸಮಾಜವೇ ಇದಕ್ಕೆ ಕಡಿವಾಣ ಹಾಕುತ್ತದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಯತ್ನಾಳ್ ಅವರ ಹೇಳಿಕೆ ಮತ್ತು ನಡವಳಿಕೆ ಗಮನಿಸಿದರೆ ಅವರು ವೀರಶೈವ ಲಿಂಗಾಯತರೇ ಎಂಬ ಅನುಮಾನ ಮೂಡುತ್ತದೆ. ವೀರಶೈವ ಲಿಂಗಾಯತರಿಗೆ ಇರಬೇಕಾದ ಆಚಾರ, ಸಂಸ್ಕಾರ ಅವರಲ್ಲಿ ಕಾಣದಿರುವುದು ದುರದೃಷ್ಟಕರ. ಅಗ್ಗದ ಪ್ರಚಾರ ಮತ್ತು ರಾಜಕೀಯ ತೆವಲಿಗಾಗಿ ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
‘ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಕೃತ್ಯವನ್ನು ಸಹಿಸುವುದಿಲ್ಲ. ಮಹಾಸಭೆಯ ಗೌರವಾಧ್ಯಕ್ಷ ಭೀಮಣ್ಣ ಖಂಡ್ರೆ, ಜನನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ನಾನು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಅರಿತುಕೊಳ್ಳದೆ ಟೀಕೆ ಮಾಡುವುದು ಸರಿಯಲ್ಲ. ಮಹಾಸಭಾ ಟೀಕಿಸುವ ಮೊದಲು ನೀವು ಸಮಾಜಕ್ಕೆ ನೀಡಿರುವ ಕೊಡುಗೆ ಏನು’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.