ADVERTISEMENT

ಸಂತೇಬೆನ್ನೂರು: ಐತಿಹಾಸಿಕ ವಾಸ್ತುಶಿಲ್ಪಗಳು ವಿಶ್ವಕರ್ಮ ಸಮಾಜದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 7:23 IST
Last Updated 5 ಡಿಸೆಂಬರ್ 2025, 7:23 IST
ಸಂತೇಬೆನ್ನೂರಿನ ಕಾಳಿಕಾಂಬ ದೇಗುಲದಲ್ಲಿ ಗುರುವಾರ ಆಯೋಜಿಸಿದ್ದ ಲಕ್ಷ ದೀಪೋತ್ಸವ ಧಾರ್ಮಿಕ ಸಭೆಯಲ್ಲಿ ಅರೇಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶಿವಸುಜ್ಞಾನ ಸ್ವಾಮೀಜಿ ಮಾತನಾಡಿದರು 
ಸಂತೇಬೆನ್ನೂರಿನ ಕಾಳಿಕಾಂಬ ದೇಗುಲದಲ್ಲಿ ಗುರುವಾರ ಆಯೋಜಿಸಿದ್ದ ಲಕ್ಷ ದೀಪೋತ್ಸವ ಧಾರ್ಮಿಕ ಸಭೆಯಲ್ಲಿ ಅರೇಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶಿವಸುಜ್ಞಾನ ಸ್ವಾಮೀಜಿ ಮಾತನಾಡಿದರು    

ಸಂತೇಬೆನ್ನೂರು: ‘ದೇಶದ ಸರ್ವಧರ್ಮಗಳ ವಾಸ್ತುಶಿಲ್ಪಗಳಿಗೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ’ ಎಂದು ಅರೇಮಾದನಹಳ್ಳಿ ವಿಶ್ವಕರ್ಮ ಪೀಠದ ಶಿವಸುಜ್ಞಾನ ಸ್ವಾಮೀಜಿ ಪ್ರತಿಪಾದಿಸಿದರು.

ಇಲ್ಲಿನ ಕಾಳಿಕಾಂಬ ದೇಗುಲದಲ್ಲಿ ಗುರುವಾರ ವೀರಭದ್ರೇಶ್ವರ ಚಾರಿಟಬಲ್ ಟ್ರಸ್ಟ್, ವಿಶ್ವಕರ್ಮ ಸಮಾಜ ಹಾಗೂ ಕಾಳಿಕಾಂಬ ದೇಗುಲ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದೂ ದೇಗುಲಗಳು, ಗೊಮ್ಮಟೇಶ್ವರ, ತಾಜ್‌ಮಹಲ್, ಬಸದಿಗಳು, ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚ್ ಹಾಗೂ ಟಿಪ್ಪು ಸುಲ್ತಾನ್ ದರ್ಗಾ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜದ ಶಿಲ್ಪಿಗಳ ಕೈ ಚಳಕ ಇಂದಿಗೂ ಅಜರಾಮರ. ಆದರೂ ವಿಶ್ವಕರ್ಮ ಸಮಾಜ ನಿರ್ಲಕ್ಷ್ಯಕ್ಕೊಳಗಾಗಿದೆ. ಕಬ್ಬಿಣ, ಕಾಷ್ಠಶಿಲ್ಪ, ತಾಮ್ರ, ಶಿಲಾಶಿಲ್ಪ ಹಾಗೂ ಸ್ವರ್ಣ ಈ ಪಂಚಶಿಲ್ಪಗಳಲ್ಲಿ ವಿಶ್ವಕರ್ಮ ಸಮಾಜ ಪರಿಣತಿ ಹೊಂದಿದೆ’ ಎಂದು ಹೇಳಿದರು.

ADVERTISEMENT

‘ತತ್ವರಹಿತ ರಾಜಕಾರಣ ಜಾಲಿ ಮರದ ನೆರಳಿನಂತೆ. ತತ್ವ ಸಹಿತ ರಾಜಕಾರಣ ಹೊಂಗೆ ನೆರಳಿನಂತೆ. ಸಂಸ್ಕಾರಗಳೊಂದಿಗೆ ಹೆಜ್ಜೆ ಹಾಕಬೇಕು’ ಎಂದು ತಿಳಿಸಿದರು.

‘ಗ್ರಾಮದ ನಾಗಲಿಂಗಾಚಾರ್ ವೈದಿಕ ಶಾಸ್ತ್ರದಲ್ಲಿ ಪರಿಣತಿ ಪಡೆದು ಹುಟ್ಟೂರಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಗ್ರಾಮದಲ್ಲಿ ವೇದಾಧ್ಯಯನ ಶಾಲೆ ತೆರೆದಿರುವುದು ಅಪರೂಪದ ವಿದ್ಯಮಾನ. ಬಡ ಮಕ್ಕಳಿಗೆ ಲಕ್ಷಾಂತರ ರೂಪಾಯಿ ಸಹಾಯ ಹಾಗೂ ಉಚಿತ ಕಾಶಿಯಾತ್ರೆ ಏರ್ಪಡಿಸಿ ಮಾದರಿ ಆಗಿದ್ದಾರೆ’ ಎಂದು ಶ್ಲಾಘಿಸಿದರು.

‘ಕಾಳಿಕಾಂಬ ದೇಗುಲದ ಸಮುದಾಯ ಭವನ ಹಾಗೂ ಚನ್ನಗಿರಿ ವಿಶ್ವಕರ್ಮ ಸಮಾಜಕ್ಕೆ ತಲಾ ₹ 10 ಲಕ್ಷ ಸಹಾಯ ಧನ ಮಂಜೂರಾಗಿದೆ. ವೈಯುಕ್ತಿಕವಾಗಿ ₹ 2 ಲಕ್ಷ ದೇಣಿಗೆ ನೀಡುತ್ತೇನೆ’ ಎಂದು ಶಾಸಕ ಬಸವರಾಜು ಶಿವಗಂಗಾ ಹೇಳಿದರು.

ವಡ್ನಾಳ್ ಕಾಶಿಮಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ಹಾಲಸ್ವಾಮಿ ವಿರಕ್ತ ಮಠದ ಬಸವ ಜಯಚಂದ್ರ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಷ್ಮಾಖಾನಂ ಅಮ್ಜದ್ ಅಲಿ, ಉಪಾಧ್ಯಕ್ಷೆ ಮೀನಾಕ್ಷಿ ಕರಿಯಪ್ಪ, ನಿಕಟ ಪೂರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ, ದಿಶಾ ಸಮಿತಿ ಸದಸ್ಯ ಮೂರ್ತ್ಯಪ್ಪ, ನಿವೃತ್ತ ಶಿಕ್ಷಕ ಕೆ.ಸಿದ್ದಲಿಂಗಪ್ಪ, ಎಸ್.ಆರ್.ವಿದ್ಯಾರಣ್ಯ, ನಾಗಲಿಂಗಾಚಾರ್, ಕೆ.ಎನ್.ಮಲ್ಲೇಶ್, ಬಿ.ಜೆ.ಸ್ವಾಮಿ, ಶಂಕರಾಚಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.