ಧಾರವಾಡ: ‘ಬೆಳೆಗೆ ತಗಲುಬಹುದಾದ ರೋಗವನ್ನು ಮುಂಚಿತವಾಗಿಯೇ ಪತ್ತೆ ಹಚ್ಚುವ ಹಾಗೂ ಮಾನಸಿಕ ಆರೋಗ್ಯ ಪರೀಕ್ಷಿಸುವ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಭಿವೃದ್ಧಿಪಡಿಸಲು ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) ತಂಡವು ಪ್ರಯೋಗ ನಡೆಸುತ್ತಿದೆ’ ಎಂದು ಐಐಐಟಿ ನಿರ್ದೇಸಕ ಪ್ರೊ.ಮಹದೇವ ಪ್ರಸನ್ನ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಐಐಐಟಿಯ ರೀಸರ್ಚ್ ಪಾರ್ಕ್ ವತಿಯಿಂದ ಪ್ರಯೋಗಗಳನ್ನು ಕೈಗೊಳ್ಳಲಾಗುತ್ತಿದೆ. ಬೆಳೆಯ ಎಲೆ, ಬಣ್ಣ, ಕಾಂಡ, ಹೂವು, ಕಾಯಿ ಮೊದಲಾದವುಗಳನ್ನು ಆಧರಿಸಿ ಬೆಳೆ ಸ್ವಾಸ್ಥ್ಯ ಪರೀಕ್ಷಿಸಿ ಮಾಹಿತಿ ನೀಡುವ ಎಐ ತಂತ್ರಜ್ಞಾನ ಅಭಿವೃದ್ಧಿ ಪ್ರಯೋಗದಲ್ಲಿ ತಂಡವು ನಿರತವಾಗಿದೆ. ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದರೆ ಬೆಳೆಗಳನ್ನು ಕಾಪಾಡಿಕೊಳ್ಳವುದಕ್ಕೆ ರೈತರಿಗೆ ಸಹಕಾರಿಯಾಗಲಿದೆ’ ಎಂದರು.
‘ಮಾನಸಿಕ ಆರೋಗ್ಯ ಪರೀಕ್ಷೆಗೆ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ಧಿಪಡಿಸಿದರೆ ವ್ಯಕ್ತಿಯ ಮಾನಸಿಕ ಸ್ಥಿತಿ (ಭಾರಿ ಜನದಟ್ಟಣೆ, ಜಲ ಆರ್ಭಟ, ಭೀಕರ ಬೆಂಕಿ ಮೊದಲಾದವನ್ನು ಕಂಡಾಗ ಆಘಾತಕ್ಕೊಳಗಾಗುವುದು) ತಿಳಿಯಲು ಅನುಕೂಲವಾಗಲಿದೆ’ ಎಂದು ಮಾಹಿತಿ ನೀಡಿದರು.
‘ಐಐಐಟಿಯಲ್ಲಿ ‘ಜನ್ ಎಐ’ ಸಮಾವೇಶದಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿನ ನವಾನ್ವೇಷಣೆ ಬೆಳವಣಿಗೆಗಳ ಕುರಿತು ವಿವಿಧೆಡೆ ತಂತ್ರಜ್ಞರು ಮಾಹಿತಿ ನೀಡಿದ್ದಾರೆ. ‘ಎಐ’ ಅತ್ಯಂತ ವೇಗದ ತಂತ್ರಜ್ಞಾನವಾಗಿದೆ. ರೈತರು, ಮಹಿಳೆಯರು, ಯುವಜನರು, ಸ್ಸಸಹಾಯ ಗುಂಪುಗಳು, ವ್ಯಾಪಾರಿಗಳು, ಇತರರ ದೈನಂದಿನ ಕಾರ್ಯಗಳಲ್ಲಿ ಯಾವ ರೀತಿಯಲ್ಲಿ ಎಐ ಉಪಯೋಗಿಸಿಕೊಳ್ಳಬೇಕು, ಆದಾಯ ಹೆಚ್ಚಿಸಿಕೊಳ್ಳಬೇಕು ಎಂಬುದು ‘ಜನ್ ಎಐ’ ಉದ್ದೇಶ’ ಎಂದು ವಿವರಿಸಿದರು.
ಹೆಡ್ ಹೆಲ್ಡ್ ಹೈ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಮದನ್ ಪದಕಿ ಮಾತನಾಡಿ, ‘ಜನ್ ಎಐ’ ಪರಿಕಲ್ಪನೆಯಡಿ ನಾಲ್ಕು ಹಂತದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮೊದಲ ಹಂತದಲ್ಲಿ ಜನರಿಗೆ ‘ಕೃತಕ ಬುದ್ಧಿಮತ್ತೆ’ ಅರಿವು ತರಬೇತಿ ಕಾರ್ಯಕ್ರಮ ನಡೆಸಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ 500 ಮಂದಿಗೆ ತರಬೇತಿ ನೀಡಲಾಗಿದೆ’ ಎಂದು ತಿಳಿಸಿದರು.
ಎರಡನೇ ಹಂತದಲ್ಲಿ ಎಐ ಬಳಕೆ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಐಐಐಟಿಯ 100 ವಿದ್ಯಾರ್ಥಿಗಳನ್ನು ತಂಡ ಮಾಡಿ ಈ ಕಾರ್ಯದಲ್ಲಿ ತೊಡಗಿಸಲಾಗಿದೆ. ಮೂರನೇ ಹಂತದಲ್ಲಿ ‘ಎಐ ಎಂಟರ್‌ಪ್ರುನರ್’ ಕಾರ್ಯಕ್ರಮ ರೂಪಿಸಿ ವಿವರಿಸಲಾಗುತ್ತಿದೆ. ಜನ್ ಎಐ ಕೇಂದ್ರ ವ್ಯವಸ್ಥೆ ಮಾಡಿ ಮಾಹಿತಿ ನೀಡಲಾಗುತ್ತಿದೆ. ನಾಲ್ಕನೇ ಹಂತದಲ್ಲಿ ಎಐ ಗ್ರಾಮದ ಸ್ವರೂಪ ಹೇಗಿರಬೇಕು ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ’ ಎಂದರು.
ಕಿಟ್ಸ್ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಸಂಕನೂರ ಮಾತನಾಡಿ, ‘ನವೋದ್ಯಮ ಸ್ಥಾಪನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಸರ್ಕಾರವು ‘ಲೀಪ್’ (ಲೋಕಲ್ ಎಕಾನಾಮಿಕ್ ಅಕ್ಸಿಲರೇಷನ್ ಪ್ರೋಗ್ರಾಮ್) ಜಾರಿಗೊಳಿಸಿ ನೆರವು ನೀಡುತ್ತಿದೆ’ ಎಂದು ತಿಳಿಸಿದರು.
ಪ್ರೊ.ವಾಸುದೇವ ಪರ್ವತಿ ಇದ್ದರು.
’ಕೃಷಿ ಆರೋಗ್ಯ ಮಾರುಕಟ್ಟೆ: ಎಐ ಬಳಕೆಗೆ ಒತ್ತು’
‘ಕೃತಕ ಬುದ್ಧಿಮತ್ತೆಯಲ್ಲಿ (ಎಐ) ಕೃಷಿ ಆರೋಗ್ಯ ಮತ್ತು ಮಾರುಕಟ್ಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನವ ತಂತ್ರಜ್ಞಾನ ಅಭಿವೃದ್ಧಿಗೆ ಆದ್ಯತೆ ನಿಡಲಾಗಿದೆ’ ಎಂದು ಎಂಐಟಿ ಮೀಡಿಯಾ ಲ್ಯಾಬ್ಸ್‌ನ ಸಂತಾನು ಭಟ್ಟಾಚಾರ್ಯ ತಿಳಿಸಿದರು. ‘ಭೌಗೋಳಿಕತೆ ನೀರಿನ ಲಭ್ಯತೆ ಹವಾಮಾನ ಇತ್ಯಾದಿ ಆಧರಿಸಿ ಕೃಷಿಯಲ್ಲಿ ಉನ್ನತಿಗೆ ಪೂರಕ ಎಐ ತಂತ್ರಜ್ಞಾನ ಬೆಳವಣಿಗೆ ಪ್ರಯೋಗಗಳು ನಡೆಯುತ್ತಿವೆ. ಆರೋಗ್ಯ ಸಮಸ್ಯೆಗಳ ಪತ್ತೆಗೆ ಎಐ ಬಳಕೆಗೆ ಪ್ರಯೋಗ ನಡೆಯುತ್ತಿವೆ. ನೇತ್ರ ಸಮಸ್ಯೆ (ಗ್ಲುಕೊಮಾ ಪೊರೆ...) ಇತ್ಯಾದಿಗೆ ಸಂಬಂಧಿಸಿದಂತೆ ಪ್ರಯೋಗಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.