ADVERTISEMENT

ಹುಬ್ಬಳ್ಳಿ: ಎಂಜಿನಿಯರ್‌ ಈಗ ಬಿಸಿಸಿಐ ಅಂಪೈರ್‌

ಬಿಸಿಸಿಐ ಅಂಪೈರ್‌ ಆಗಿ ಹುಬ್ಬಳ್ಳಿಯ ಶ್ರೀನಾಥ್‌

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 4:13 IST
Last Updated 7 ಜುಲೈ 2025, 4:13 IST
ಶ್ರೀನಾಥ ಕುಲಕರ್ಣಿ
ಶ್ರೀನಾಥ ಕುಲಕರ್ಣಿ   

ಹುಬ್ಬಳ್ಳಿ: ‘ಕ್ರಿಕೆಟ್ ಆಟಗಾರನಾಗಿ ಸಾಧನೆ ಮಾಡುವ ಕನಸಿತ್ತು. ಅದು ಸಾಧ್ಯವಾಗಲಿಲ್ಲ. ಈಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂಪೈರ್ ಆಗಿ ಅರ್ಹತೆ ಗಳಿಸಿದ್ದಕ್ಕೆ ಖುಷಿಯಾಗಿದೆ’ ಎಂದು ಹುಬ್ಬಳ್ಳಿಯ ಶ್ರೀನಾಥ ಕುಲಕರ್ಣಿ ಸಂತಸ ವ್ಯಕ್ತಪಡಿಸಿದರು.

ಇಲ್ಲಿನ ಸಿದ್ಧಾರೂಡ ಮಠದ ಬಳಿಯ ಶ್ರೀನಿವಾಸ ನಗರದ ಶ್ರೀನಾಥ ಅವರು, ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರ ತಂದೆ ರೈಲ್ವೆ ಇಲಾಖೆಯ ನಿವೃತ್ತ ಉದ್ಯೋಗಿ. ತಂದೆ, ತಾಯಿ ಹುಬ್ಬಳ್ಳಿಯಲ್ಲೇ ನೆಲೆಸಿದ್ದಾರೆ.

‘ಅಹಮದಾಬಾದ್‌ನಲ್ಲಿ ಜೂನ್‌ನಲ್ಲಿ ಬಿಸಿಸಿಐ ಅಂಪೈರಿಂಗ್‌ ಪರೀಕ್ಷೆ ಬರೆದಿದ್ದೆ. ಜುಲೈ 3ರಂದು ಫಲಿತಾಂಶ ಬಂದಿದೆ. ಉತ್ತಮ ಅವಕಾಶ ಸಿಕ್ಕಿದ್ದು, ಬಿಸಿಸಿಐ ಪಂದ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ, ಕ್ರಿಕೆಟ್‌ಗೆ ಕೊಡುಗೆ ನೀಡಬೇಕು ಎಂಬ ಗುರಿ ಇದೆ’ ಎಂದರು.   

ADVERTISEMENT

ಕ್ರಿಕೆಟ್ ಆಟಗಾರನಾಗಬೇಕು ಎಂಬ ಆಸೆಯನ್ನು ತಂದೆಯ ಬಳಿ ಹೇಳಿದಾಗ ಇಲ್ಲಿನ ಹುಬ್ಬಳ್ಳಿ ಕ್ರಿಕೆಟ್ ಆಕಾಡೆಮಿಗೆ ಸೇರಿಸಿದರು. ಅಕಾಡೆಮಿಯ ವಿಜಯ್‌ ಕಾಮತ್‌ ಅವರ ಬಳಿ ತರಬೇತಿ ಪಡೆದೆ. ಬಿಡಿಕೆ ಸ್ಪೋರ್ಟ್ಸ್‌ ಕ್ಲಬ್‌ ಪರವೂ ಆಡಿದ್ದೆನೆ ಎಂದರು.

ಎಂಜಿನಿಯರಿಂಗ್ ಮುಗಿದ ನಂತರ ಕ್ರಿಕೆಟ್ ಮುಂದುವರಿಸಲು ಆಗಲಿಲ್ಲ. ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದೆ. ನಂತರ 2014ರಲ್ಲಿ ಕೆಎಸ್‌ಸಿಎ ಅಂಪೈರ್ ಆಗಿ ಆಯ್ಕೆಯಾದೆ. ಉದ್ಯೋಗದ ಜತೆಗೆ ಅಂಪೈರಿಂಗ್ ಸಹ ಮಾಡುತ್ತಿದ್ದೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.