ADVERTISEMENT

ಸೋಲುವ ಭೀತಿಯಿಂದ ಹೊರಟ್ಟಿ ಬಿಜೆಪಿ ಸೇರುವ ತಂತ್ರ: ಮೋಹನ್‌ ಲಿಂಬಿಕಾಯಿ

ಪರಿಷತ್‌ ಚುನಾವಣೆ: ಪ್ರಚಾರ ಆರಂಭಿಸಿರುವ ಮೋಹನ್‌ ಲಿಂಬಿಕಾಯಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2022, 14:49 IST
Last Updated 3 ಏಪ್ರಿಲ್ 2022, 14:49 IST
ಬಿಜೆಪಿ ಮುಖಂಡ ಮೋಹನ ಲಿಂಬಿಕಾಯಿ
ಬಿಜೆಪಿ ಮುಖಂಡ ಮೋಹನ ಲಿಂಬಿಕಾಯಿ    

ಹುಬ್ಬಳ್ಳಿ: ವಿಧಾನಪರಿಷತ್‌ ಚುನಾವಣೆಗೆ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಸೋಲುವ ಭೀತಿ ಇರುವ ಕಾರಣ ಬಸವರಾಜ ಹೊರಟ್ಟಿ ಅವರು ನಮ್ಮ ಪಕ್ಷ ಸೇರುವ ತಂತ್ರ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಮೋಹನ ಲಿಂಬಿಕಾಯಿ ಟೀಕಿಸಿದ್ದಾರೆ.

ಪರಿಷತ್‌ ಚುನಾವಣೆಗೆ ಮೂರು ತಿಂಗಳಿನಿಂದ ಪ್ರಚಾರ ಮಾಡುತ್ತಿರುವ ಲಿಂಬಿಕಾಯಿ ಅವರು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಕಾನೂನು ಸಲಹೆಗಾರರಾಗಿದ್ದರು.

ಭಾನುವಾರ ಮಧ್ಯಾಹ್ನ ಮಾಧ್ಯಮಗಳ ಮುಂದೆ ಹೊರಟ್ಟಿ ಅವರು ‘ಬಿಜೆಪಿಯಿಂದಲೇ ಚುನಾವಣೆ ಎದುರಿಸುವೆ’ ಎಂದು ಘೋಷಿಸಿದ್ದಾರೆ. ಇನ್ನೊಂದೆಡೆ ಲಿಂಬಿಕಾಯಿ ಕೂಡ ‘ನಾನೇ ಬಿಜೆಪಿ ಅಧಿಕೃತ ಅಭ್ಯರ್ಥಿ’ ಎಂದಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಲಿಂಬಿಕಾಯಿ ‘ವಿಧಾನ ಪರಿಷತ್‌ ಚುನಾವಣೆಗೆ ನಿಮ್ಮ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸಲಾಗಿದೆ ಎಂದು ಜಗದೀಶ ಶೆಟ್ಟರ್‌ ಹಾಗೂ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಆದ್ದರಿಂದ ಪ್ರಚಾರ ನಡೆಸುತ್ತಿದ್ದೇನೆ. ಹೊರಟ್ಟಿ ಅವರನ್ನು ಯಾರೂ ಬಿಜೆಪಿಗೆ ಕರೆದಿಲ್ಲ. ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡುತ್ತೇವೆ ಎಂದು ಯಾರೂ ಹೇಳಿಲ್ಲ’ ಎಂದರು.

‘ಹೊರಟ್ಟಿ ಬಿಜೆಪಿಗೆ ಬರುತ್ತಿದ್ದಾರೆ ಎಂದು ನಮ್ಮ ಪಕ್ಷದ ನಾಯಕರು ಹೇಳಬೇಕು. ಆದರೆ, ಹೊರಟ್ಟಿ ಅವರೇ ಬಿಜೆಪಿಗೆ ಹೋಗುತ್ತಿದ್ದೇನೆ ಎನ್ನುತ್ತಿದ್ದಾರೆ. ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಯಾರಾದರೂ ಮಾತನಾಡಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಹೊರಟ್ಟಿ ಅವರಿಗೆ ಜೆಡಿಎಸ್‌ನಲ್ಲಿ ಅಭದ್ರತೆ ಕಾಡುತ್ತಿದೆ. ಸ್ವತಂತ್ರವಾಗಿ ಸ್ಪರ್ಧಿಸಿದರೆ ಗೆಲ್ಲುವ ವಿಶ್ವಾಸವಿಲ್ಲ. ಅದಕ್ಕಾಗಿ ಬಿಜೆಪಿ ಸೇರುವ ತಂತ್ರ ಮಾಡುತ್ತಿದ್ದಾರೆ. ವಿಧಾನಪರಿಷತ್‌ನಲ್ಲಿ ನಮ್ಮ ಪಕ್ಷ ಈಗಾಗಲೇ ಬಹುಮತ ಹೊಂದಿದ್ದು, ಅವರ ಅವಶ್ಯಕತೆಯೂ ನಮಗಿಲ್ಲ’ ಎಂದರು.

‘ಯಾರು ಏನೇ ಹೇಳಿದರೂ ನಾನು ಪ್ರಚಾರ ಮುಂದುವರಿಸುತ್ತೇನೆ. ಕೆಲವು ತಿಂಗಳುಗಳ ಹಿಂದೆ ನಡೆದಿದ್ದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ನನ್ನ ಹೆಸರನ್ನು ಅಂತಿಮಗೊಳಿಸಲಾಗಿದೆ. ಹೊರಟ್ಟಿಯವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿದ್ದರೆ ನನ್ನ ಹೆಸರು ಪ್ರಸ್ತಾಪಿಸುವ ಅಗತ್ಯವಿರಲಿಲ್ಲ. ಜಗದೀಶ ಶೆಟ್ಟರ್‌, ಪ್ರಲ್ಹಾದ ಜೋಶಿ ಹಾಗೂ ನಳೀನ್‌ ಕಟೀಲ್ ನನ್ನ ಪರವಾಗಿಯೇ ಇದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.