ADVERTISEMENT

16 ಸಾವಿರ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್: ಸಚಿವ ಮುನೇನಕೊಪ್ಪ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 7:10 IST
Last Updated 10 ಜನವರಿ 2022, 7:10 IST
ಆರೋಗ್ಯ ಕಾರ್ಯಕರ್ತರಿಗೆ, ಪೊಲೀಸ್ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ
ಆರೋಗ್ಯ ಕಾರ್ಯಕರ್ತರಿಗೆ, ಪೊಲೀಸ್ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ    

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 16 ಸಾವಿರ ಕೋವಿಡ್ ಮುಂಚೂಣಿ ಕಾರ್ಯಕರ್ತರಿದ್ದು, ಪ್ರಾಥಮಿಕ ಹಂತದಲ್ಲಿ ಅವರೆಲ್ಲರಿಗೂ ಕೋವಿಡ್ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಹೇಳಿದರು.

ನಗರದ ಕಾರವಾರ ರಸ್ತೆಯ ಹಳೇ ಸಿಎಆರ್ ಮೈದಾನದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಪೊಲೀಸ್ ಸಿಬ್ಬಂದಿಗೆ ಸೋಮವಾರ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಹಿಂದೆ ರೋಗ ಬಂದಾಗ ಅದಕ್ಕೆ ಲಸಿಕೆ ಕಂಡು ಹಿಡಿಯಲು ಐದು, ಆರು ವರ್ಷಗಳು ಬೇಕಾಗುತ್ತಿತ್ತು. ಆದರೆ, ಕೋವಿಡ್'ಗೆ ಭಾರತ ಒಂದು ವರ್ಷದಲ್ಲಿಯೇ ಲಸಿಕೆ ಕಂಡು ಹಿಡಿದು, ಎಲ್ಲರಿಗೂ ಉಚಿತವಾಗಿ ದೊರಕುವಂತೆ ಮಾಡಿತು. ಇದೀಗ ಮುಂಜಾಗ್ರತೆಯಾಗಿ ಬೂಸ್ಟರ್‌ ಡೋಸ್ ನೀಡಲಾಗುತ್ತಿದೆ. ಪ್ರತಿಯೊಬ್ಬರೂ‌ ಲಸಿಕೆ ಪಡೆದು, ಕೋವಿಡ್ ನಿಯಂತ್ರಿಸುವಲ್ಲಿ ಸಹಕರಿಸಬೇಕು ಎಂದರು.

ADVERTISEMENT

ಜಿಲ್ಲೆಯಲ್ಲಿ ವೆಂಟಿಲೇಟರ್, ಆಮ್ಲಜನಕ, ಹಾಸಿಗೆ ಇದ್ಯಾವುದರ ಕೊರತೆಯೂ ಇಲ್ಲ. ಈಗಾಗಲೇ ಜಿಲ್ಲಾಡಳಿತ ಕೊರೊನಾ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.

ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ದೇಶದಾದ್ಯಂತ ಉಚಿತ ಲಸಿಕೆ ನೀಡುವ ಅಭಿಯಾನ ಆರಂಭವಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 150 ಕೋಟಿ ಲಸಿಕೆ ನೀಡಲಾಗಿದ್ದು, ಇದೊಂದು ಐತಿಹಾಸಿಕ ದಾಖಲೆಯಾಗಿದೆ. ಕೊರೊನಾ ಮೂರನೇ ಅಲೆ ಆರಂಭವಾಗಿದೆ. ಆದರೆ, ಜನರಲ್ಲಿ ಹಿಂದೆ ಇದ್ದ ಭಯ ಈಗಿಲ್ಲ. ವಾರಾಂತ್ಯ ಕರ್ಫ್ಯೂಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯ ಎಂದರು.

ಮೊದಲ ಹಾಗೂ ಎರಡನೇ ಲಸಿಕೆಯ ಹಾಗೆ, ಬೂಸ್ಟರ್ ಡೋಸ್ ಇರಲಿದೆ. ಎರಡನೇ ಲಸಿಕೆ ಪಡೆದ ಒಂಬತ್ತು ತಿಂಗಳ ನಂತರ ಇದನ್ನು ನೀಡಲಾಗುತ್ತದೆ. ಧಾರವಾಡ-ಹುಬ್ಬಳ್ಳಿ ಎರಡೂ ಕಡೆಯಲ್ಲಿ‌ 1,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಕಮಿಷನರ್ ಲಾಭೂರಾಮ್, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್, ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ್ ಮದೀನಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.