ADVERTISEMENT

ಹುಬ್ಬಳ್ಳಿ: ರೌಡಿಗಳ ಗಡಿಪಾರಿಗೆ ಕಮಿಷನರೇಟ್‌ ನಿರ್ಧಾರ

ರೌಡಿಗಳ ಮಾಹಿತಿ ಕೇಳಿದ ಕಮಿಷನರ್; ಚುನಾವಣೆಗೆ ಸ್ಪರ್ಧಿಸಲು ರೌಡಿಗಳ ಸಿದ್ಧತೆ

ನಾಗರಾಜ್ ಬಿ.ಎನ್‌.
Published 20 ಜುಲೈ 2021, 19:30 IST
Last Updated 20 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಅಪರಾಧ ಪ್ರಕರಣ ಹೆಚ್ಚುತ್ತಿರುವ ಹಾಗೂ ಮಹಾನಗರ ಪಾಲಿಕೆ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು, ಅಪರಾಧ ಪ್ರಕರಣಗಳಲ್ಲಿ ಸಕ್ರಿಯರಾಗಿರುವ ರೌಡಿಗಳ ಗಡಿಪಾರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಕಮಿಷನರೇಟ್ ನಿರ್ಧರಿಸಿದೆ. ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡುವ ಚಿಂತನೆ ನಡೆಸಿದೆ.

‘ಠಾಣಾ ವ್ಯಾಪ್ತಿಯ ಎಲ್ಲ ರೌಡಿಗಳ ಮಾಹಿತಿ ಹಾಗೂ ಅವರ ಮೇಲಿರುವ ಪ್ರಕರಣಗಳ ಸಂಪೂರ್ಣ ವಿವರಗಳನ್ನು ಕಚೇರಿಗೆ ತಲುಪಿಸಬೇಕು. ಅಲ್ಲದೆ, ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ರೌಡಿಗಳ ಮಾಹಿತಿ ಹಾಗೂ ಅವರ ಹಿನ್ನೆಲೆ ಪ್ರತ್ಯೇಕವಾಗಿ ತಿಳಿಸಬೇಕು’ ಎಂದು ಕಮಿಷನರ್ ಲಾಬೂ ರಾಮ್ ಎಲ್ಲ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಿದ್ದಾರೆ.

ಕಮಿಷನರೇಟ್‌ನಲ್ಲಿ 1,300ಕ್ಕೂ ಹೆಚ್ಚು ರೌಡಿಗಳಿದ್ದು, ಅವರಲ್ಲಿ 50ಕ್ಕೂ ಹೆಚ್ಚು ರೌಡಿಗಳು ಅಪರಾಧ ಪ್ರಕರಣಗಳಲ್ಲಿ ಮೇಲಿಂದ ಮೇಲೆ ತೊಡಗಿಕೊಳ್ಳುತ್ತಿದ್ದಾರೆ. ಇಂತಹ ಒಬ್ಬೊಬ್ಬ ರೌಡಿ ಮೇಲೆ ಕನಿಷ್ಠ 8-15 ಪ್ರಕರಣಗಳು ದಾಖಲಾಗಿವೆ. ಐದಾರು ರೌಡಿಗಳ ಮೇಲೆ 30ಕ್ಕೂ ಹೆಚ್ಚು ಪ್ರಕರಣಗಳಿವೆ. ಕೊಲೆ, ಕೊಲೆ ಯತ್ನ, ಜೀವ ಬೆದರಿಕೆ, ಆಸ್ತಿ ಕಬಳಿಕೆ, ಮೀಟರ್ ಬಡ್ಡಿ ದಂಧೆ, ಮಾದಕ ವಸ್ತು ಸಂಗ್ರಹ ಮತ್ತು ಮಾರಾಟ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, ಗುಂಪು ಘರ್ಷಣೆಯಂಥ ಗಂಭೀರ ಪ್ರಕರಣಗಳು ಅವರ ಮೇಲಿವೆ. ಸದ್ಯ 5–6 ರೌಡಿಗಳನ್ನು ಮಾತ್ರ ಕಮಿಷನರೇಟ್‌ನಿಂದ ಗಡಿಪಾರು ಮಾಡಲಾಗಿದೆ.

ADVERTISEMENT

ಹುಬ್ಬಳ್ಳಿ ಉಪನಗರ, ಶಹರ ಠಾಣೆ, ಕೇಶ್ವಾಪುರ, ಹಳೇಹುಬ್ಬಳ್ಳಿ, ಧಾರವಾಡ ಶಹರ ಠಾಣೆಗಳಲ್ಲಿ ಅತಿ ಹೆಚ್ಚು ರೌಡಿಗಳಿದ್ದಾರೆ. ಹುಬ್ಬಳ್ಳಿಯ ಸೆಟ್ಲಮೆಂಟ್, ಆರ್‌ಜಿಎಸ್, ಬೆಂಗೇರಿ, ಉಣಕಲ್ ಭಾಗದಲ್ಲಿರುವ ಕೆಲವು ರೌಡಿಗಳು ತೀರಾ ಅಪಾಯಕಾರಿಯಾಗಿದ್ದು, ರಾಜಕೀಯ ನಂಟು ಹೊಂದಿದ್ದಾರೆ. ನಗರ ಹಾಗೂಗ್ರಾಮೀಣ ಭಾಗದಲ್ಲೂ ಹಿಡಿತ ಸಾಧಿಸಿದ್ದಾರೆ. ಅಮಾಯಕ ರೈತರನ್ನು ಬೆದರಿಸಿ, ಅವರ ಆಸ್ತಿಯನ್ನು ತಮ್ಮ ಹಾಗೂ ಸಂಬಂಧಿಗಳ ಹೆಸರಿಗೆ ಮಾಡಿಕೊಂಡಿದ್ದಾರೆ. ಒಂದಿಬ್ಬರು, ಮುಂಬರುವ ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುವ ತಯಾರಿ ಸಹ ಮಾಡಿಕೊಂಡಿರುವುದಾಗಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

‘ವಾರದ ಹಿಂದೆಯಷ್ಟೇಪೊಲೀಸರು 600ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಕೆಲವರ ಮೇಲೆ ಪ್ರಕರಣ ದಾಖಲಿಸಿದ್ದರು. ಒಂದಷ್ಟು ರೌಡಿಗಳನ್ನು ಠಾಣೆಗೆ ಕರೆಸಿ ಪರೇಡ್ ನಡೆಸಿದ್ದರು. ಇದರ ಮುಂದುವರಿದ ಭಾಗವೇ ಗಡಿಪಾರು ಮಾಡುವ ಯೋಜನೆ. ಕನಿಷ್ಠ 15 ರೌಡಿಗಳಾದರೂ ಚುನಾವಣೆ ಪೂರ್ವ ಕಮಿಷನರೇಟ್‌ನಿಂದ ಗಡಿಪಾರು ಆಗಲಿದ್ದಾರೆ’ ಎಂದು ಪೊಲೀಸರು ಹೇಳುತ್ತಾರೆ.

‘ರೌಡಿಗಳ ಆಸ್ತಿ ಮಾಹಿತಿ ಸಂಗ್ರಹವಾಗಲಿ’: ‘ಸಮಾಜ ಘಾತುಕ ಶಕ್ತಿಯಾಗಿರುವ ಕೆಲವು ರೌಡಿಗಳಿಗೆ ರಾಜಕೀಯ ಆಶ್ರಯವಿದೆ. ಅವರಲ್ಲಿ ಕೆಲವರು ರಾಜಕೀಯವಾಗಿಯೂ ಸಕ್ರಿಯರಾಗಿದ್ದಾರೆ. ಹತ್ತು ವರ್ಷಗಳ ಹಿಂದೆ ಅವರ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ? ಎನ್ನುವ ಮಾಹಿತಿ ಕಲೆ ಹಾಕಬೇಕು. ಐಷಾರಾಮಿ ಕಾರು ಹಾಗೂ ಹತ್ತಿಪ್ಪಿತ್ತು ಎಕರೆ ಜಮೀನು ಖರೀದಿಗೆ ಮತ್ತು ಬಂಗಲೆ ಕಟ್ಟಿಸಿಕೊಳ್ಳಲು ಅವರಿಗೆ ಹಣ ಎಲ್ಲಿಂದ ಬಂದಿದೆ? ಅವರ ದುಡಿಮೆಯೇನು? ಎನ್ನುವ ಮಾಹಿತಿ ಸಂಬಂಧ ಪಟ್ಟ ಇಲಾಖೆ ಸಂಗ್ರಹಿಸಬೇಕು. ಕೆಲವು ರೌಡಿಗಳು ನಕಲಿ ಕಾಗದ ಪತ್ರಗಳನ್ನು ತಯಾರಿಸಿ ಅಮಾಯಕರನ್ನು ವಂಚಿಸುತ್ತಿದ್ದಾರೆ. ಸಮಾಜದ ಶಾಂತಿ ಕದಡುವ ಇವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜಾಮೀನು ಸಿಗದ ಹಾಗೆ ಮಾಡಬೇಕು’ ಎನ್ನುವುದು ಪ್ರಜ್ಞಾವಂತರ ಆಗ್ರಹ.

***

ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಹೀಗಿದ್ದಾಗಲೂ ಅಪರಾಧ ಪ್ರಕರಣದಲ್ಲಿ ಅವರು ಭಾಗಿಯಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ.
-ಲಾಬೂ ರಾಮ್, ಕಮಿಷನರ್
ಹುಬ್ಬಳ್ಳಿ-ಧಾರವಾಡ ಮಹಾನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.