ADVERTISEMENT

ಅನುಕಂಪದ ಮೊರೆ ಹೋದ ಕಾಂಗ್ರೆಸ್‌, ಬಿಜೆಪಿ

ಕುಂದಗೋಳ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್, ಬಿಜೆಪಿಯಲ್ಲಿ ಅಸಮಾಧಾನ

ಬಸವರಾಜ ಹವಾಲ್ದಾರ
Published 27 ಏಪ್ರಿಲ್ 2019, 20:30 IST
Last Updated 27 ಏಪ್ರಿಲ್ 2019, 20:30 IST
   

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅನುಕಂಪದ ಲಾಭ ಪಡೆಯಲು ಮುಂದಾಗಿವೆ.

ಕಾಂಗ್ರೆಸ್‌ ಸಚಿವರಾಗಿದ್ದ ಸಿ.ಎಸ್‌. ಶಿವಳ್ಳಿ ಅವರ ನಿಧನದ ಅನುಕಂಪದ ಅಲೆಯಲ್ಲಿ ಗೆಲುವಿನ ದಡ ಮುಟ್ಟಲು ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿಗೆ ಟಿಕೆಟ್‌ ನೀಡಿದೆ. ಸತತವಾಗಿ ಎರಡು ಬಾರಿ ಸೋತಿರುವ, ಅದರಲ್ಲೂ 2018ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 600 ಮತಗಳಿಂದ ಸೋತಿದ್ದರ ಅನುಕಂಪ ಪಡೆಯಲು ಬಿಜೆಪಿ ಎಸ್‌.ಐ. ಚಿಕ್ಕನಗೌಡರಿಗೆ ಟಿಕೆಟ್‌ ನೀಡಿದೆ.

1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದಿವಂಗತ ಸಿ.ಎಸ್‌. ಶಿವಳ್ಳಿ ಅವರು ಕರ್ನಾಟಕ ಕಾಂಗ್ರೆಸ್‌ ಪಕ್ಷದಿಂದ (ಕೆಸಿಪಿ) ಸ್ಪರ್ಧಿಸಿ ಜನತಾ ದಳದಿಂದ ಎಂ.ಎಸ್‌. ಅಕ್ಕಿ ವಿರುದ್ಧ ಸೋತಿದ್ದರು. 1999ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಯು ದಿಂದ ಸ್ಪರ್ಧಿಸಿದ್ದ ಎಂ.ಎಸ್‌. ಅಕ್ಕಿ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶಿವಳ್ಳಿ ಗೆಲುವಿನ ನಗೆ ಬೀರಿದ್ದರು.

ADVERTISEMENT

2004ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಶಿವಳ್ಳಿ ಹಾಗೂ ಅಕ್ಕಿಯವರ ನಡುವೆಯೇ ನಡೆದಿತ್ತು. ಈ ಬಾರಿ ಅಕ್ಕಿ ಅವರು ಗೆಲುವು ಸಾಧಿಸಿದ್ದರು.

2008ರಲ್ಲಿ ನಡೆದ ಚುನಾವಣೆ ವೇಳೆಗೆ ಜಿಲ್ಲೆಯಲ್ಲಿ ಸಂಘಟನೆ ಬೆಳೆಸಿಕೊಂಡಿದ್ದ ಬಿಜೆಪಿಯಿಂದ ಎಸ್‌.ಐ. ಚಿಕ್ಕನಗೌಡರ ಸ್ಪರ್ಧಿಸಿದ್ದರು. ಅವರ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಿ.ಎಸ್‌. ಶಿವಳ್ಳಿ ಅವರು 9 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತರು.

2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಿ.ಎಸ್‌. ಶಿವಳ್ಳಿ ಮತ್ತೆ ಕಣಕ್ಕಿಳಿದರು. ಆದರೆ, ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಬಿಟ್ಟು ಕೆಜೆಪಿ ಸೇರಿದ್ದ ಎಸ್‌.ಐ. ಚಿಕ್ಕನಗೌಡ ಅವರೇ ಎದುರಾಳಿಯಾಗಿದ್ದರು. ಬಿಜೆಪಿಯಿಂದ ಎಂ.ಆರ್. ಪಾಟೀಲ ಸ್ಪರ್ಧಿಸಿದ್ದರು. ಬಿಜೆಪಿ, ಕೆಜೆಪಿ ನಡುವಿನ ಗುದ್ದಾಟದ ಲಾಭ ಪಡೆದ ಶಿವಳ್ಳಿ ಅವರು 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು.

2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶಿವಳ್ಳಿ ಸ್ಪರ್ಧಿಸಿದರೆ, ಕೆಜೆಪಿಯಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಎಸ್‌.ಐ. ಚಿಕ್ಕನಗೌಡರ ಅವರೇ ಎದುರಾಳಿಯಾಗಿದ್ದರು. ಬಿಜೆಪಿಯಲ್ಲಿನ ಭಿನ್ನಮತದಿಂದಾಗಿ ಶಿವಳ್ಳಿ ಅವರು ಕೇವಲ 600ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿ ಸಚಿವರೂ ಆಗಿದ್ದರು.

ಶಿವಳ್ಳಿ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಕುಸುಮಾ ಅವರು ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಎಸ್‌.ಐ. ಚಿಕ್ಕನಗೌಡರೇ ಎದುರಾಳಿಯಾಗಿದ್ದಾರೆ.

ದಿ. ಸಿ.ಎಸ್. ಶಿವಳ್ಳಿ ಅವರು ಎದುರು ನಾಲ್ಕು ಬಾರಿ ಜನತಾ ದಳ, ಜೆಡಿಯು ಹಾಗೂ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಂ.ಎಸ್‌. ಅಕ್ಕಿ ಅವರು ಜೆಡಿಎಸ್‌ ಮೈತ್ರಿ ಧರ್ಮ ಪಾಲಿಸುವುದು ಹೆಚ್ಚು ಕಡಿಮೆ ಖಚಿತವಾಗಿರುವುದರಿಂದ ಅವರು ಕಣಕ್ಕಿಳಿಯದೇ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕಾಗಬಹುದು.

ಕಾಂಗ್ರೆಸ್‌ ಹಾಗೂ ಬಿಜಪಿ ಪಡಸಾಲೆಯಲ್ಲಿ ಆಕಾಂಕ್ಷಿತರು ಅಸಮಾಧಾನಗೊಂಡಿರುವ ಮಾತುಗಳು ಕೇಳಿ ಬರುತ್ತಿವೆ. ಅವರನ್ನು ಸಮಾಧಾನ ಪಡಿಸುವ ಹೊಣೆ ನಾಯಕರ ಮೇಲೆ ಬಿದ್ದಿದೆ. ಒಟ್ಟಿನಲ್ಲಿ ಚುನಾವಣೆಗೆ ಕಣ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.