ಆರ್. ಅಶೋಕ ಮತ್ತು ಸಿದ್ದರಾಮಯ್ಯ
ಹುಬ್ಬಳ್ಳಿ: ‘ಧರ್ಮಸ್ಥಳದ ಪ್ರಕರಣದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿದೆ. ಹಿಂದೂ ಧರ್ಮ ಹಾಗೂ ದೇವಾಲಯಗಳ ವಿರುದ್ಧ ಅಪಪ್ರಚಾರ ಮಾಡಲು ಕಮ್ಯೂನಿಸ್ಟ್ ಮನಸ್ಥಿತಿಯ ನಗರ ನಕ್ಸಲರಿಗೆ ಸರ್ಕಾರ ಬೆಂಬಲ ನೀಡುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದರು.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾವ್ಯಾರೂ ಸೌಜನ್ಯ ಪ್ರಕರಣ ಹಾಗೂ ಎಸ್‌ಟಿ ತನಿಖೆಯನ್ನು ವಿರೋಧಿಸಿಲ್ಲ. ಯಾರದ್ದೋ ಮಾತು ಕೇಳಿ ಎಸ್‌ಐಟಿ ತನಿಖೆಗೆ ಮುಖ್ಯಮಂತ್ರಿ ಕೊಡುತ್ತಾರೆ ಎನ್ನುವುದು ಆಕ್ಷೇಪ. ನಮಗೆ ವಿರೇಂದ್ರ ಹೆಗ್ಗಡೆ ಮುಖ್ಯ ಎನ್ನುವುದಕ್ಕಿಂತ, ಧರ್ಮಸ್ಥಳ–ಮಂಜುನಾಥ ಸ್ವಾಮಿ ಮುಖ್ಯ. ಪ್ರಕರಣದ ಹಿಂದೆ ಕಾಂಗ್ರೆಸ್ ಸರ್ಕಾರ ಇದೆ ಎನ್ನುವುದು ಸಾಬೀತಾಗುತ್ತಿದೆ. ಈ ಕುರಿತು ಅಧಿವೇಶನದಲ್ಲಿ ಹೋರಾಟ ನಡೆಸುತ್ತೇವೆ’ ಎಂದರು.
‘ಕೆಲವರು ಧರ್ಮಸ್ಥಳ ದೇವಸ್ಥಾನಕ್ಕೆ ಜೆಸಿಬಿ ನುಗ್ಗಿಸುತ್ತೇವೆ ಎನ್ನುತ್ತಿದ್ದಾರೆ. ಕಾಡಿನಲ್ಲಿದ್ದ ಮತಾಂಧ, ಕಮ್ಯೂನಿಸ್ಟ್ ನಕ್ಸಲ್‌ಗಳನ್ನು ರೆಡ್ ಕಾರ್ಪೆಟ್ ಹಾಸಿ ನಾಡಿಗೆ ಕರೆಸಿಕೊಂಡ ಸಿದ್ದರಾಮಯ್ಯರೇ ಇದಕ್ಕೆಲ್ಲ ಕಾರಣ . ಕಾಡಲ್ಲಾದರೆ ಊಟ, ಬಟ್ಟೆಗೆ ಅಲೆಯಬೇಕಾಗಿತ್ತು, ಈಗ ಅವರಿಗೆ ನಗರದಲ್ಲಿ ಎಲ್ಲವೂ ಸಿಗುತ್ತಿದೆ. ಮಾಡಲು ಕೆಲಸವಿಲ್ಲದ ಕಾರಣ ಹಿಂದೂ ದೇವಸ್ಥಾನಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪ್ರತಿದಿನ ನೂರಾರು ಪ್ರಕರಣಗಳು ಸಿಬಿಐಗೆ, ಎಸ್‌ಐಟಿಗೆ ವಹಿಸಿ ಎಂದು ಸಾರ್ವಜನಿಕರು, ಸಂಘ–ಸಂಸ್ಥೆಗಳು ಅರ್ಜಿ ಸಲ್ಲುತ್ತವೆ. ವಿಧಾನಸಭೆಯಲ್ಲೂ ವಿರೋಧ ಪಕ್ಷದವರು ಸರ್ಕಾರವನ್ನು ಆಗ್ರಹಿಸುತ್ತವೆ. ಅವೆಲ್ಲವನ್ನೂ ತನಿಖೆಗೆ ಕೊಟ್ಟು ಬಿಡುತ್ತಾರೆಯೇ? ಟಿಪ್ಪು ಸಿದ್ಧಾಂತ ಪ್ರೇರಿತ ಮತಾಂಧ ಮನಸ್ಥಿತಿಯ ಗ್ಯಾಂಗ್‌ಗೆ ಸಿದ್ದರಾಮಯ್ಯ ಬೆಂಬಲ ನೀಡುತ್ತಿದ್ದಾರೆ. ಕತರ್ನಾಕ್, ನಗರ ನಕ್ಸಲರ ದಂಡುಪಾಳ್ಯ ಗ್ಯಾಂಗ್ ಪ್ರಕರಣದ ಹಿಂದೆ ಇದೆ’ ಎಂದು ದೂರಿದರು.
ಪ್ರಕರಣದ ಹಿಂದೆ ಷಡ್ಯಂತ್ರ ನಡೆದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ, ಆಕುರಿತು ಮುಖ್ಯಮಂತ್ರಿ ಯಾವ ಹೇಳಿಕೆಯೂ ನೀಡುತ್ತಿಲ್ಲ. ಕಾಂಗ್ರೆಸ್‌ನಲ್ಲಿಯೇ ಹಿಂದೂ ವಿರೋಧಿ ಮತ್ತು ಹಿಂದೂ ಪರ ಗುಂಪುಗಳಿದ್ದು, ಪರಸ್ಪರರಲ್ಲಿ ಒಡಕು ಇದೆ. ದೇವಸ್ಥಾನದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ಗೆ ಜನರೇ ಪಾಠ ಕಲಿಸುತ್ತಾರೆ’ ಎಂದರು.
‘ಧರ್ಮಸ್ಥಳದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಆರೋಪ ಮಾಡಿರುವ ಸಮೀರ್ ಎಂಬಾತ, ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತನಾಗಿದ್ದಾನೆ. ಅವನ ಜೊತೆ ಮತ್ತೂ ಕೆಲವಷ್ಟು ಮಂದಿ ಯೂಟ್ಯೂಬ್ ಚಾನಲ್‌ನಲ್ಲಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ವಿದೇಶದಿಂದ ದುಡ್ಡು ಬರುತ್ತಿದೆ ಎನ್ನುವ ಅನುಮಾನವಿದೆ. ಈ ಕುರಿತು ತನಿಖೆ ನಡೆಸಲು ಎನ್‌ಐಎಗೆ ಒಪ್ಪಿಸಬೇಕು’ ಎಂದ ಅಶೋಕ, ‘ಮುಸುಕುಧಾರಿ ಹಿಂದೂ ಅಲ್ಲ, ಮತಾಂತರವಾದ ವ್ಯಕ್ತಿ’ ಎಂದು ಆರ್. ಅಶೋಕ ಹೇಳಿದರು.
ಪೊಲೀಸರೇ ಕೋರ್ಟ್‌ಗೆ ಅರ್ಜಿ ಹಾಕಿ ತನಿಖೆಗೆ ಅವಕಾಶ ಮಾಡಿಕೊಡಿ ಎಂದು ವಿನಂತಿಸಿದ್ದು, ದುರಾದೃಷ್ಟಕರ ಸಂಗತಿ. ಮುಖ್ಯಮಂತ್ರಿ ಪಾತ್ರ ಇರುವುದು ಸ್ಪಷ್ಟವಾಗಿದೆ..-ಆರ್. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.