ADVERTISEMENT

ವಿದ್ಯಾಕಾಶಿಯಲ್ಲಿ ಹೋಳಿ ರಂಗು ಇಂದು

ಗಡಿಗೆ ಒಡೆಯುವ ಸ್ಪರ್ಧೆ, ನೃತ್ಯ ಸಂಭ್ರಮಕ್ಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:18 IST
Last Updated 4 ಮಾರ್ಚ್ 2026, 6:18 IST
ಧಾರವಾಡದ ಸುಭಾಷ ರಸ್ತೆಯಲ್ಲಿ ಮಂಗಳವಾರ ಜನರು ಹೋಳಿ ಹಬ್ಬಕೆ ಬಣ್ಣ ಖರೀದಿಸಿದರು
ಧಾರವಾಡದ ಸುಭಾಷ ರಸ್ತೆಯಲ್ಲಿ ಮಂಗಳವಾರ ಜನರು ಹೋಳಿ ಹಬ್ಬಕೆ ಬಣ್ಣ ಖರೀದಿಸಿದರು   

ಧಾರವಾಡ: ಹೋಳಿ ಹಬ್ಬದ ಬಣ್ಣದಾಟಕ್ಕೆ ವಿದ್ಯಾಕಾಶಿ ಸಜ್ಜಾಗಿದೆ, ಬಣ್ಣದೋಕುಳಿ ಆಡಲು ಮಂಗಳವಾರ ನಗರದ ಮಾರುಕಟ್ಟೆಗಳಲ್ಲಿ ಜನರು ತರತರಹದ ಬಣ್ಣದ ಪುಡಿ, ದ್ರವ, ಮುಖವಾಡಗಳು, ಹಲಗೆಗಳನ್ನು ಖರೀದಿಸಿದರು. 

ಸುಭಾಷ ರಸ್ತೆ, ಗಾಂಧಿ ಚೌಕ, ಸಿಬಿಟಿ, ಟಿಕಾರೆ ರಸ್ತೆ ಸಹಿತ ವಿವಿಧೆಡೆಗಳಲ್ಲಿ, ಹಲವು ನಮೂನೆಯ ಬಣ್ಣ, ಗುಲಾಲು, ವಾಟರ್ ಗನ್, ಹುಲಿ, ಸಿಂಹ, ಜೋಕರ್. ಕರಡಿ, ಆನೆ ಮುಖವಾಡಗಳು, ಬಣ್ಣ ತುಂಬಿ ತೂರುವ ಬಲೂನು, ದೊಡ್ಡ ಮೀಸೆ, ದಾಡಿ, ಬಣ್ಣದ ಟೊಪ್ಪಿಗಳು ಸಹಿತ ಇನ್ನಿತರ ವಸ್ತುಗಳನ್ನು ಖರೀದಿಸಿದರು.

ವಾಟರ್ ಗನ್ ₹20 ರಿಂದ ₹500, ಏರ್ ಗನ್ ₹30 ರಿಂದ ₹300, ಬಣ್ಣ ಪಾಕೆಟ್‍ಗೆ ₹20 ರಿಂದ ₹100, ಮುಖವಾಡಗಳು ₹80 ರಿಂದ ₹200, ಟೊಪ್ಪಿಗಳು ₹50, ಹಲಗೆಗಳಿಗೆ ₹100 ರಿಂದ ₹1500 ರವರೆಗೆ ದರ ಇತ್ತು.

ADVERTISEMENT

ಕಾಮಣ್ಣನ ಮೂರ್ತಿಗೆ ಪೂಜೆ: ಹೋಳಿ ಅಂಗವಾಗಿ ನಗರದ ವಿವಿಧೆಡೆಗಳಲ್ಲಿ ಕಾಮಣ್ಣನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಗಾಂಧಿ ಚೌಕ, ಭೂಸಪ್ಪ ಚೌಕ, ಕಾಮನಕಟ್ಟಿ ರವಿವಾರಪೇಟೆ, ಹೆಬ್ಬಳ್ಳಿ ಅಗಸಿ, ಸಪ್ತಾಪೂರ ಬಾವಿ, ಶ್ರೀನಗರ ಮಾಳಮಡ್ಡಿ, ರಾಮನಗರದಲ್ಲಿ ಮಹಿಳೆಯರು ಮಕ್ಕಳು ಕಾಮದೇವನ ದರ್ಶನ ಪಡೆದು, ನೈವೇದ್ಯ ಅರ್ಪಿಸಿದರು. ಯುವಜನರು ಹಾಗೂ ಮಕ್ಕಳು ಹಲಗೆ ಬಡಿದು ಸಂಭ್ರಮಿಸಿದರು.

‘20 ವರ್ಷಗಳಿಂದ ಹೋಳಿಗೆ ತರ ತರಹದ ಬಣ್ಣಗಳು, ಮಕ್ಕಳನ್ನು ಆಕರ್ಷಿಸುವ ಪಿಚಕಾರಿಗಳನ್ನು ಮಾರಾಟ ಮಾಡುತ್ತಿದ್ದೇನೆ. ಈ ಹಿಂದೆ ಕಡಿಮೆ ದರದಲ್ಲಿ ಎಲ್ಲವೂ ದೊರೆಯುತ್ತಿದ್ದವು. ಸದ್ಯ ದರ ಹೆಚ್ಚಳವಾಗಿದ್ದರೂ, ಆಕರ್ಷಣೀಯವಾದ ಪಿಚಕಾರಿಗಳು ಮಾರುಕಟ್ಟೆಗೆ ಬಂದಿರುವುದರಿಂದ ವ್ಯಾಪಾರ ಕಡಿಮೆ ಆಗಿಲ್ಲ. ಕ್ರಿಕೆಟಿಗರ ಭಾವಚಿತ್ರವಿರುವ ಪಿಚಕಾರಿ ಹೆಚ್ಚು ಮಾರಾಟವಾಗಿವೆ' ಎಂದು ವ್ಯಾಪಾರಿ ಮಹಮ್ಮದ ಅಕ್ತಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಚರ್ಮದ ಹಲಗೆ ತಯಾರಿಸಿ ಮಾರಾಟ ಮಾಡಯತ್ತೇನೆ. ಇತ್ತೀಚಿನ ವರ್ಷಗಳಲ್ಲಿ ಫೈಬರ್ ಹಲಗೆ ಬಳಕೆ ಹೆಚ್ಚಾಗಿದ್ದು ಚರ್ಮದ ಹಲಗೆ ಯಾರು ಕೇಳುತ್ತಿಲ್ಲ. ದಿನಕ್ಕೆ ಮೂರ್ನಾಲ್ಕು ಹಲಗೆ ಮಾರಾಟವಾಗುವುದು ಕಷ್ಟ.
ಅಣ್ಣಪ್ಪ ಶೆಟ್ಟಣ್ಣವರ, ವ್ಯಾಪಾರಿ
ಹೋಳಿ ಹಬ್ಬ ಆಚರಣೆಗೆ ಹಲಗೆ ಬಣ್ಣ ಖರೀದಿ ಮಾಡಿದ್ದೇನೆ. ಹಲಗೆ ದರ ಕಳೆದ ವರ್ಷಕ್ಕಿಂತ ಸ್ವಲ್ಪ ದುಬಾರಿಯಾಗಿದೆ.
ಪ್ರವೀಣ ಪಾಟೀಲ, ಸ್ಥಳೀಯ

ಗಡಿಗೆ ಒಡೆಯುವ ಸ್ವರ್ಧೆ ಇಂದು ಬಣ್ಣದ ಹಬ್ಬದ ಪ್ರಯುಕ್ತ ಮಾರ್ಚ್ 4 ರಂದು ಎಲ್‍ಐಸಿ ಕಚೇರಿ ಬಳಿಯ ಎಸ್‍ಬಿಐ ವೃತ್ತದಲ್ಲಿ ಹಾಗೂ ಸವದತ್ತಿ ರಸ್ತೆಯ ಶಿವಾಜಿ ವೃತ್ತದಲ್ಲಿ ಗಾಂಧೀ ಚೌಕದಲ್ಲಿ ಗಡಿಗೆ ಒಡೆಯುವ ಸ್ಪರ್ಧೆ ನಡೆಯಲಿದೆ. ರೇನ್‌ ಡಾನ್ಸ್‌ನಲ್ಲಿ ಯುವಜನರು ಹೆಜ್ಜೆ ಹಾಕುವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.