ADVERTISEMENT

ಹುಬ್ಬಳ್ಳಿ: ಕ್ರೀಡಾ ಸಂಕೀರ್ಣ ಉದ್ಘಾಟನೆಗೆ ಸಿದ್ಧ; 22 ಕ್ರೀಡೆಗಳಿಗೆ ಅಂಕಣ

ಸ್ಮಾರ್ಟ್‌ ಸಿಟಿ ಯೋಜನೆ ಅನುದಾನದಲ್ಲಿ ನಿರ್ಮಾಣ; 22 ಕ್ರೀಡೆಗಳಿಗೆ ಅಂಕಣ

ಸತೀಶ ಬಿ.
Published 13 ಫೆಬ್ರುವರಿ 2026, 0:30 IST
Last Updated 13 ಫೆಬ್ರುವರಿ 2026, 0:30 IST
<div class="paragraphs"><p>ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಾಣವಾದ ಕ್ರೀಡಾ ಸಂಕೀರ್ಣ </p></div>

ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಾಣವಾದ ಕ್ರೀಡಾ ಸಂಕೀರ್ಣ

   

ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ಇಲ್ಲಿನ ಲೋಹಿಯಾ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೃಹತ್ ಕ್ರೀಡಾ ಸಂಕೀರ್ಣ ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯ ₹175 ಕೋಟಿ ಮತ್ತು ಖೇಲೊ ಇಂಡಿಯಾ ಯೋಜನೆಯ ₹8 ಕೋಟಿ ಸೇರಿ ಒಟ್ಟು ₹183 ಕೋಟಿ ಅನುದಾನದಲ್ಲಿ ಒಟ್ಟು 16 ಎಕರೆ ಜಾಗದಲ್ಲಿ ಈ ಸಂಕೀರ್ಣವನ್ನು ಅಭಿವೃದ್ಧಿಪಡಿಸಲಾಗಿದೆ. 

ADVERTISEMENT

2022ರ ಏಪ್ರಿಲ್‌ನಲ್ಲಿ ಆರಂಭಗೊಂಡ ಕಾಮಗಾರಿಯನ್ನು ಹೈದರಾಬಾದ್‌ನ ಕೆಎಂವಿ ಕಂಪನಿ ನಿರ್ವಹಿಸಿದೆ. ನಾಮಫಲಕ ಅಳವಡಿಕೆ, ಲಾನ್‌, ಲ್ಯಾಂಡ್‌ಸ್ಕೇಪ್‌ ಕಾಮಗಾರಿ ಮಾತ್ರ ಬಾಕಿ ಇದೆ. ಇದರ ಒಟ್ಟಾರೆ ನಿರ್ವಹಣೆಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು.

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ನಿಯಮಗಳಿಗೆ ಅನುಗುಣವಾಗಿ ಹಾಕಿ ಟರ್ಫ್‌ ಮತ್ತು ಫಿಫಾ ನಿಯಮದಂತೆ ಫುಟ್‌ಬಾಲ್‌ ಮೈದಾನಗಳನ್ನು ನಿರ್ಮಿಸಲಾಗಿದೆ.

400 ಮೀಟರ್ ದೂರದ ನಾಲ್ಕು ಲೇನ್‌ಗಳ ಸಿಂಥೆಟಿಕ್‌ ಅಥ್ಲೆಟಿಕ್‌ ಟ್ರ್ಯಾಕ್‌, 100 ಮೀಟರ್‌ ದೂರದ ಆರು ಲೇನ್‌ಗಳ ಸಿಂಥೆಟಿಕ್‌ ಟ್ರ್ಯಾಕ್‌, ಬ್ಯಾಡ್ಮಿಂಟನ್‌, ಸ್ಕ್ವಾಷ್‌, ಕೊಕ್ಕೊ, ಟೆನಿಸ್,  ವಾಲಿಬಾಲ್, ಟೇಬಲ್ ಟೆನಿಸ್, ಆರ್ಚರಿ, ಶೂಟಿಂಗ್, ಈಜು, ಬ್ಯಾಸ್ಕೆಟ್‌ಬಾಲ್‌, ಕುಸ್ತಿ, ಜೂಡೊ ಸೇರಿ ಒಟ್ಟು 22 ಕ್ರೀಡೆಗಳಿಗೆ ವೈಜ್ಞಾನಿಕವಾಗಿ, ಅಂತರರಾಷ್ಟ್ರೀಯ ಗುಣಮಟ್ಟದ ಅಂಕಣಗಳನ್ನು ನಿರ್ಮಿಸಲಾಗಿದೆ.

ಎರಡು ಸಾವಿರ ಆಸನಗಳ ಸಾಮರ್ಥ್ಯದ ಒಳಾಂಗಣ ಕ್ರೀಡಾಂಗಣ, ಸಭಾಂಗಣ, ಆಡಳಿತ ಸೌಧ, ರೆಸ್ಟೊರೆಂಟ್‌ ಮತ್ತು ಆರು ವಾಣಿಜ್ಯ ಮಳಿಗೆಗಳು ಸಹ ಇಲ್ಲಿವೆ. 40 ಕೆಎಲ್‌ಡಿ ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಣಾ ಘಟಕವೂ ತಲೆಯೆತ್ತಿದೆ. ಇಲ್ಲಿ ಶುದ್ಧೀಕರಣವಾದ ನೀರನ್ನು ಮೈದಾನ ನಿರ್ವಹಣೆ ಮತ್ತು ಇನ್ನಿತರ ಕಾರ್ಯಗಳಿಗೆ ಬಳಸಲು ಯೋಜನೆ ರೂಪಿಸಲಾಗಿದೆ.

ನಿರ್ವಹಣೆಗೆ ₹3.50 ಕೋಟಿ ವೆಚ್ಚ:

‘ಸ್ವಚ್ಛತೆ, ವಿದ್ಯುತ್ ಶುಲ್ಕ, ತರಬೇತುದಾರರ ನೇಮಕ ಸೇರಿ  ಕ್ರೀಡಾ ಸಂಕೀರ್ಣದ ನಿರ್ವಹಣೆಗೆ ವಾರ್ಷಿಕ ₹3.50 ಕೋಟಿಗೂ ಹೆಚ್ಚು ವೆಚ್ಚವಾಗುತ್ತದೆ. ಕ್ರೀಡಾ ಸಂಕೀರ್ಣ ನಿರ್ವಹಣೆ ಮಾಡಿ ಅನುಭವವುಳ್ಳ ಸಂಸ್ಥೆಗೆ ಈ ಸಂಕೀರ್ಣದ ಕಾರ್ಯಾಚರಣೆ ಮತ್ತು ನಿರ್ವಹಣೆೆಗೆ  ಟೆಂಡರ್‌ ನೀಡಲಾಗುವುದು. ಬೆಂಗಳೂರು, ಪುಣೆ, ಮುಂಬೈ ಸೇರಿ ವಿವಿಧ ನಗರಗಳ ಸಂಸ್ಥೆಗಳು ಸಂಪರ್ಕದಲ್ಲಿವೆ’’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

‘ಜಿಮ್‌ ಸಲಕರಣೆ, ಪೀಠೋಪಕರಣ ಸೇರಿ ಇನ್ನಿತರ ಸೌಲಭ್ಯಕ್ಕೆ ಇನ್ನೂ ₹4 ಕೋಟಿ ಹಣವನ್ನು ಟೆಂಡರ್ ಪಡೆದ ಸಂಸ್ಥೆ ಹೂಡಬೇಕು. ಕೆಲ ಸಂಸ್ಥೆಗಳು ಒಂದೊಂದೇ ಅಂಕಣವನ್ನು ಮಾತ್ರ ಟೆಂಡರ್‌ ನೀಡುವಂತೆ ಕೇಳುತ್ತಿವೆ. ಕ್ರೀಡಾ ಸಂಕೀರ್ಣದ ಸಮಗ್ರ ನಿರ್ವಹಣೆ ಜವಾಬ್ದಾರಿಯನ್ನು ಒಂದೇ ಕಂಪನಿಗೆ ಟೆಂಡರ್ ಮೂಲಕ ನೀಡಲಾಗುವುದು’ ಎಂದರು.

ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಾಣವಾದ ಕ್ರೀಡಾ ಸಂಕೀರ್ಣದಲ್ಲಿನ ಈಜುಕೊಳ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ದೇಶದಲ್ಲೇ ಮಾದರಿ ಕ್ರೀಡಾ ಸಂಕೀರ್ಣ ನಿರ್ಮಾಣವಾಗಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ನಿರ್ವಹಣೆಗೆ ಖಾಸಗಿಯವರನ್ನು ನೇಮಕ ಮಾಡುವ ಕುರಿತು ರಾಜ್ಯ ಉನ್ನತಾಧಿಕಾರ ಸಮಿತಿಯಲ್ಲಿ ಚರ್ಚೆಯಾಗಿದೆ 
ರುದ್ರೇಶ ಘಾಳಿ ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಕ್ರೀಡಾ ಸಂಕೀರ್ಣದಿಂದ ಉತ್ತರ ಕರ್ನಾಟಕ ಭಾಗದ ಕ್ರೀಡಾಪಟುಗಳಿವೆ ಅನುಕೂಲವಾಗಲಿದೆ. ಬೇಗ ಉದ್ಘಾಟಿಸಿ ತರಬೇತುದಾರರನ್ನು ನೇಮಿಸಬೇಕು
ಹರೀಶ್‌ ಎಸ್.ಗೌಡ ಅಂತರರಾಷ್ಟ್ರೀಯ ಅಥ್ಲೀಟ್‌ 

‘ಎಂಟು ಲೇನ್‌ ಟ್ರ್ಯಾಕ್ ನಿರ್ಮಿಸಿ’

‘ಕ್ರೀಡಾ ಸಂಕೀರ್ಣವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಆದರೆ 400 ಮೀಟರ್ ದೂರದ ನಾಲ್ಕು ಲೇನ್‌ಗಳ ಸಿಂಥೆಟಿಕ್‌ ಟ್ರ್ಯಾಕ್‌ 100 ಮೀ. ದೂರದ ಆರು ಲೇನ್‌ಗಳ ಟ್ರ್ಯಾಕ್‌ ಮಾತ್ರ ನಿರ್ಮಿಸಲಾಗಿದೆ. ಇದರಿಂದ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆ ಆಯೋಜಿಸಲು ಆಗುವುದಿಲ್ಲ. ಕೇವಲ ಅಭ್ಯಾಸಕ್ಕಾಗಿ ಮಾತ್ರ ಇದು ಬಳಕೆಯಾಗಲಿದೆ. ಎಂಟು ಲೇನ್ ಟ್ರ್ಯಾಕ್ ನಿರ್ಮಿಸಿದರೆ ಉಪಯುಕ್ತವಾಗುತ್ತದೆ. –ವೀಲಾಸ ನೀಲಗುಂದ ಕಾರ್ಯದರ್ಶಿ ಧಾರವಾಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.