ADVERTISEMENT

ಹುಬ್ಬಳ್ಳಿ | ಕೊಲೆಯತ್ನ ಪ್ರಕರಣ; ಆರೋಪಿಗಳ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:38 IST
Last Updated 27 ನವೆಂಬರ್ 2025, 5:38 IST
ಹುಬ್ಬಳ್ಳಿಯ ಹಳೇ ಸಿಎಆರ್‌ ಮೈದಾನದಲ್ಲಿ  ಬುಧವಾರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಅವರು ಕೊಲೆಯತ್ನ ಪ್ರಕರಣದ ಆರೋಪಿಗಳ ಪರೇಡ್‌ ನಡೆಸಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಹಳೇ ಸಿಎಆರ್‌ ಮೈದಾನದಲ್ಲಿ  ಬುಧವಾರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಅವರು ಕೊಲೆಯತ್ನ ಪ್ರಕರಣದ ಆರೋಪಿಗಳ ಪರೇಡ್‌ ನಡೆಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್‌ ಘಟಕದ ವಿವಿಧ ಠಾಣೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ದಾಖಲಾದ ಕೊಲೆ ಯತ್ನ ಪ್ರಕರಣಗಳ ಆರೋಪಿಗಳನ್ನು ಬುಧವಾರ ನಗರದ ಕಾರವಾರ ರಸ್ತೆಯ ಸಿಎಆರ್‌ ಮೈದಾನದಲ್ಲಿ ಪರೇಡ್‌ ಮಾಡಲಾಯಿತು.

ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌, ಡಿಸಿಪಿಗಳಾದ ಮಹಾನಿಂಗ ನಂದಗಾವಿ ಮತ್ತು ರವೀಶ್‌ ಸಿ.ಆರ್‌ ನೇತೃತ್ವದಲ್ಲಿ ನಡೆದ ಪರೇಡ್‌ನಲ್ಲಿ, ಆರೋಪಿಯ ಮಾಹಿತಿ ಸಂಗ್ರಹಿಸಲಾಯಿತು. ಪ್ರಕರಣ ತನಿಖಾ ಹಂತ, ಸಾಕ್ಷ್ಯ ಸಂಗ್ರಹ, ಜಾಮೀನು, ಚಲನವಲನ, ಮೊಬೈಲ್‌ ಕರೆಗಳ ದಾಖಲೆ ಸೇರಿ ಇತರ ವಿವರ ಪಡೆಯಲಾಯಿತು. ಪ್ರಕರಣ ಇತ್ಯರ್ಥ ಆಗುವವರೆಗೆ ಕೋರ್ಟ್‌ ಸೂಚನೆ  ಪಾಲಿಸುವ ಜೊತೆಗೆ, ತನಿಖೆಗೆ ಸಂಪೂರ್ಣ ಸಹಕರಿಸಬೇಕು ಎಂದು ಕಮಿಷನರ್‌ ಸೂಚಿಸಿದರು.

‘ಎರಡು ವರ್ಷಗಳಲ್ಲಿ 230 ಕೊಲೆ ಯತ್ನ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. 350ಕ್ಕೂ ಹೆಚ್ಚು ಆರೋಪಿಗಳನ್ನು ಇಲ್ಲಿ ಕರೆಸಿದ್ದೇವೆ. ಕೃತ್ಯಗಳಲ್ಲಿ ಹೊಸಬರು ಭಾಗಿಯಾದಂತಿದೆ. ಅವರಲ್ಲಿ 20 ವರ್ಷದ ಒಳಗಿನವರೇ ಹೆಚ್ಚು. ಪದೇ ಪದೇ ಅಪರಾಧ ಕೃತ್ಯಗಳನ್ನು ಮಾಡುವವರೂ ಇದ್ದಾರೆ. ಮೊದಲ ಬಾರಿ ಭಾಗಿಯಾದವರ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಂಡು, ಉಳಿದವರನ್ನು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.

ADVERTISEMENT

‘ಹಣಕಾಸಿನ ವ್ಯವಹಾರ, ಪ್ರೇಮ ವೈಫಲ್ಯ ಮತ್ತು ಆಸ್ತಿಗೆ ಸಂಬಂಧಿಸಿ ನಡೆದ ಕೊಲೆ, ಕೊಲೆಯತ್ನ ಪ್ರಕರಣಗಳೇ ಹೆಚ್ಚಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 900 ಜನರನ್ನು ಗುರುತಿಸಿ, ಕೆಲ ಆರೋಪಿಗಳನ್ನಷ್ಟೇ ಬಂಧಿಸಿ ವಿಚಾರಣೆ ನಡೆಸಿದ್ದೇವೆ. ಮತ್ತಷ್ಟು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ’ ಎಂದರು.

11 ಮಂದಿ ಬಂಧನ: ‘ಮಂಟೂರ ರಸ್ತೆಯಲ್ಲಿ ನಡೆದ ಮಲ್ಲಿಕ್‌ ಜಾನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, 11 ಮಂದಿಯನ್ನು ಬಂಧಿಸಲಾಗಿದೆ. ಇಬ್ಬರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದರು.

ಮಹಾರಾಷ್ಟ್ರದ ಗ್ಯಾಂಗ್‌?: ‘ನಗರದಲ್ಲಿ ನಡೆದ ₹3.2 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ, ದೂರುದಾರರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ದೂರುದಾರರೇ ಆರೋಪಿಗಳಾದ ಉದಾಹರಣೆಗಳಿವೆ. ಮಹಾರಾಷ್ಟ್ರ ಮೂಲದ ಗ್ಯಾಂಗ್‌ ಈ ಕತ್ಯ ನಡೆಸಿರುವ ಅನುಮಾನವಿದ್ದು, ತನಿಖೆ ನಡೆದಿದೆ’ ಎಂದು ಹೇಳಿದರು.

132 ಮಂದಿ ಗಡಿಪಾರು
‘ಪ್ರಸಕ್ತ ವರ್ಷ ಆರು ಮಂದಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ರಾಜ್ಯದ ವಿವಿಧ ಜೈಲಿಗೆ ಕಳುಹಿಸಲಾಗಿದೆ. 132 ಜನರನ್ನು ಗಡಿಪಾರು ಮಾಡಲಾಗಿದೆ‘ ಎಂದು ಎನ್‌. ಶಶಿಕುಮಾರ್‌ ತಿಳಿಸಿದರು. ‘ರೌಡಿಗಳು ಸಂಘಟಿತ ಅಪರಾಧ ಡಕಾಯಿತಿ ವಸೂಲಿ ಮಾದಕ ವಸ್ತುಗಳ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. 1700 ರೌಡಿಗಳಲ್ಲಿ 500 ಮಂದಿ ಹೆಸರನ್ನು ಸನ್ನಡತೆ ಅನಾರೋಗ್ಯ ವಯಸ್ಸಿನ ಆಧಾರದ ಮೇಲೆ ರೌಡಿ ಪಟ್ಟಿಯಿಂದ ತೆಗೆಯಲಾಗಿದೆ. ಹೆಚ್ಚುವರಿಯಾಗಿ 108 ಮಂದಿಯನ್ನು ಸೇರ್ಪಡೆ ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.