ಕೆಎಂಸಿ–ಆರ್‌ಐ ಆವರಣದ ಎದುರು ಪ್ರತಿಭಟನಕಾರರು ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆದು, ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿ: ನಗರದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ಮಾಡಿದ ಆರೋಪದಡಿ ಬಂಧಿತನಾಗಿದ್ದ ವ್ಯಕ್ತಿಯು ಪೊಲೀಸರು ಭಾನುವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ.
ಬಿಹಾರ ಮೂಲದ ರಿತೇಶಕುಮಾರ (35) ಮೃತ. ಭಾನುವಾರ ಸಂಜೆ ಇಲ್ಲಿನ ತಾರಿಹಾಳ ಕೆಳಸೇತುವೆ ಬಳಿ ಎನ್‌ಕೌಂಟರ್ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಬಾಲಕಿಯನ್ನು ಪುಸಲಾಯಿಸಿ ಕೃತ್ಯ: ವಿಜಯನಗರದಲ್ಲಿ ಆರೋಪಿ ರಿತೀಶ ಕುಮಾರ ತಿನಿಸು ನೀಡುವುದಾಗಿ ಪುಸಲಾಯಿಸಿ ಬಾಲಕಿಯನ್ನು ಹೊತ್ತೊಯ್ದಿದ್ದ. ಎದುರಿನ ಮನೆಯಲ್ಲಿರುವ ಶೆಡ್‌ನಲ್ಲಿರಿಸಿ ಅಸಭ್ಯವಾಗಿ ವರ್ತಿಸಿದ್ದ. ಬಳಿಕ, ಬಾಲಕಿಯನ್ನು ಕೊಲೆ ಮಾಡಿದ್ದ. ಬಾಲಕಿ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆತನನ್ನು ಹಿಡಿದು ಅಶೋಕ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದರು.
ಏನಿದು ಘಟನೆ: ‘ಭಾನುವಾರ ಬೆಳಿಗ್ಗೆ ವಿಜಯನಗರದಲ್ಲಿ ಐದು ವರ್ಷದ ಮಗು ನಾಪತ್ತೆಯಾದ ಕುರಿತು ಪ್ರಕರಣ ದಾಖಲಾಗಿತ್ತು. ನಂತರ, ಮಗು ನಾಪತ್ತೆಯಾದ ಸ್ಥಳದ ಎದುರಿರುವ ಸ್ನಾನಗೃಹದಲ್ಲಿ ಮೃತದೇಹ ಪತ್ತೆಯಾಗಿತ್ತು’ ಎಂದರು.
‘ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಸ್ಥಳೀಯರ ಮಾಹಿತಿ ಆಧರಿಸಿ ಆರೋಪಿಯನ್ನು ಪೊಲೀರು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದಾಗ, ಕೃತ್ಯದ ಕುರಿತು ಮಾಹಿತಿ ನೀಡಿದ್ದ. ಆದರೆ, ತನ್ನ ವಿಳಾಸ ಹಾಗೂ ಗುರುತಿನ ಬಗ್ಗೆ ಯಾವುದೇ ಸ್ಲಷ್ಟ ಮಾಹಿತಿ ನೀಡಿರಲಿಲ್ಲ’ ಎಂದು ಹೇಳಿದರು.
‘ಬಿಹಾರ ಮೂಲದ ಅವನು, ವಿವಿಧ ಊರುಗಳಲ್ಲಿ ಕೆಲಸ ಮಾಡಿದ್ದ. ಹುಬ್ಬಳ್ಳಿಯಲ್ಲೂ ಕೆಲಸ ಮಾಡುತ್ತ, ತಾರಿಹಾಳ ಸೇತುವೆ ಬಳಿಯ ಹಳೇ ಶೆಡ್‌ನಲ್ಲಿ ವಾಸಿಸುತ್ತಿದ್ದಾಗಿ ತಿಳಿಸಿದ್ದ. ಅವನ ಜೊತೆ ಯಾರಿದ್ದಾರೆಂದು ತಿಳಿದುಕೊಳ್ಳಲು, ಅವನನ್ನು ಸ್ಥಳಕ್ಕೆ ಕರೆದುಕೊಂಡು ಹೋದಾಗ ಎನ್‌ಕೌಂಟರ್ ನಡೆದಿದೆ’ ಎಂದರು.
ಶವಾಗಾರದ ಮುಂದೆ ಧರಣಿ: ಮೃತ ಬಾಲಕಿ ಶವವನ್ನು ಒಪ್ಪಿಸಬೇಕೆಂದು ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಯವರು ಕೆಎಂಸಿ–ಆರ್‌ಐನ ಶವಾಗಾರದ ಎದುರು ಪ್ರತಿಭಟನೆ ನಡೆಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
‘ನನ್ನ ಮಗಳನ್ನು ನೀಡಿ ಕರೆದುಕೊಂಡು ಹೋಗುವೆ’ ಎಂದು ಬಾಲಕಿ ತಂದೆ ಕಣ್ಣೀರು ಹಾಕಿದರು.
ಪ್ರತಿಭಟನೆ: ಕೆಎಂಸಿ–ಆರ್‌ಐ ಆವರಣದ ಎದುರು ಪ್ರತಿಭಟನಕಾರರು ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆದು, ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು. ಚನ್ನಮ್ಮ ವೃತ್ತದಲ್ಲೂ ಪ್ರತಿಭಟನೆ ನಡೆಯಿತು. ಇದರಿಂದಾಗಿ ಹುಬ್ಬಳ್ಳಿ–ಧಾರವಾಡ ಸೇರಿದಂತೆ ವಿವಿಧೆಡೆ ವಾಹನ ಸಂಚಾರ ಒಂದು ತಾಸು ಸ್ತಬ್ಧಗೊಂಡಿತು.
ಠಾಣೆ ಎದುರು ಪ್ರತಿಭಟನೆ: ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕು ಇಲ್ಲವೇ, ಗುಂಡು ಹಾರಿಸಿ ಹತ್ಯೆ ಮಾಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಅಶೋಕನಗರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.