ಸುರಂಗ ಮಾರ್ಗ
ಹುಬ್ಬಳ್ಳಿ: ಇಲ್ಲಿನ ಹೊಸೂರಿನ ಪಾರಿಜಾತ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಶುಕ್ರವಾರ ಪೊಲೀಸರು ಮೈಸೂರಿನ ಒಡನಾಡಿ ಸಂಸ್ಥೆ ಸಹಯೋಗದಲ್ಲಿ ದಾಳಿ ನಡೆಸಿ, ಐವರು ವಿದೇಶಿ ಮಹಿಳೆಯರನ್ನು ರಕ್ಷಿಸಿದ್ದಾರೆ. ಹೋಟೆಲ್ ವ್ಯವಸ್ಥಾಪಕ, ಸಿಬ್ಬಂದಿ ಹಾಗೂ ಗ್ರಾಹಕ ಸೇರಿ ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್ ಜಯಂತ ಗೌಳಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
‘ನೆಲಮಹಡಿ ಮತ್ತು ಮೊದಲನೇ ಮಹಡಿ ಗ್ರಾಹಕರಿಗೆ ಮೀಸಲಿಟ್ಟಿದ್ದು, ಎರಡನೇ ಮಹಡಿಯಲ್ಲಿನ ಕೊಠಡಿಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ತಮಿಳುನಾಡಿನ ಆರೋಗ್ಯ ಇಲಾಖೆಯಿಂದ ವಿತರಿಸುವ ಸಾವಿರಾರು ಕಾಂಡೋಮ್‌ಗಳು ಕೊಠಡಿಯಲ್ಲಿ ಕಂಡುಬಂದಿವೆ. ತಪ್ಪಿಸಿಕೊಳ್ಳಲು ಶೌಚಾಲಯದ ಒಳಗೆ ಸುರಂಗ ಮಾರ್ಗದ ಅಡಗುತಾಣ ಪತ್ತೆಯಾಗಿದೆ. ದಾಳಿ ವೇಳೆ, ಗ್ರಾಹಕರೊಬ್ಬರು ಅದರಲ್ಲಿ ಅಡಗಿಕೊಂಡಿದ್ದರು’ ಎಂದು ಒಡನಾಡಿ ಸಂಸ್ಥೆ ಸಂಸ್ಥಾಪಕ ಸ್ಟ್ಯಾನಿ ತಿಳಿಸಿದರು.
‘ಶಾಲೆ, ಆಸ್ಪತ್ರೆ ಸಮೀಪವೇ ವೇಶ್ಯಾವಾಟಿಕೆ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ತಿಳಿಸಲಾಗಿದೆ. ಮಕ್ಕಳ ಹಕ್ಕು ಆಯೋಗದ ಜಿಲ್ಲಾ ಅಧಿಕಾರಿಗಳಿಗೂ ದೂರು ನೀಡಿದ್ದೇವೆ’ ಎಂದು ತಿಳಿಸಿದರು.
ಒಡನಾಡಿ ಸಂಸ್ಥೆ ಮಾಹಿತಿ ಮೇರೆಗೆ ರೆಸಿಡೆನ್ಸಿ ಮೇಲೆ ದಾಳಿ ನಡೆಸಲಾಗಿದೆ. ರಕ್ಷಿಸಲ್ಪಟ್ಟ ಮಹಿಳೆಯರು ಪಶ್ಟಿಮಬಂಗಾಳದವರು ಎನ್ನಲಾಗುತ್ತಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು, ತನಿಖೆ ನಡೆಸಲಾಗುವುದು’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.