ಸಾವು (ಪ್ರಾತಿನಿಧಿಕ ಚಿತ್ರ)
ಹುಬ್ಬಳ್ಳಿ: ಗರ್ಭಿಣಿ ಪತ್ನಿ ಸಾವಿನಿಂದ ಮನನೊಂದು ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ಕೆಎಂಸಿ–ಆರ್‌ಐ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮೇಲಮಟ್ಟಿಯ ಮಲ್ಲೇಶ ಗಡ್ಡಿಹೊಳಿ ಆತ್ಮಹತ್ಯೆಗೆ ಯತ್ನಿಸಿದವರು. ತಕ್ಷಣ ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಡೆದದ್ದೇನು?: ‘ಗರ್ಭಿಣಿ ರಾಧಿಕಾ ಅವರು ಹೆರಿಗೆ ನೋವೆಂದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಹೋಗಿದ್ದರು. ವೈದ್ಯರು ಅಲ್ಲಿ ಅವರನ್ನು ದಾಖಲಿಸಿಕೊಳ್ಳದ ಕಾರಣ, ಬೆಳಗಾವಿ ಜಿಲ್ಲಾಸ್ಪತ್ರೆಗೆ ಹೋಗಿದ್ದರು. ಅಲ್ಲಿ ಹೃದ್ರೋಗ ತಜ್ಞರು ಮತ್ತು ನರರೋಗ ತಜ್ಞರು ಇಲ್ಲದ ಕಾರಣ ಕೆಎಂಸಿ–ಆರ್‌ಐಗೆ ಕಳುಹಿಸಿದ್ದರು. ಸೋಮವಾರ ಮಧ್ಯಾಹ್ನ 3ಕ್ಕೆ ಇಲ್ಲಿ ದಾಖಲಾಗಿದ್ದರು. ಅಷ್ಟರಲ್ಲಿಯೇ ಅವರ ನಾಡಿಬಡಿತ ನಿಂತು ಪ್ರಜ್ಞಾಹೀನರಾಗಿದ್ದರು. ಮಂಗಳವಾರ ಬೆಳಿಗ್ಗೆ 11ಕ್ಕೆ ಮೃತಪಟ್ಟಿದ್ದಾರೆ. ವಿಷಯ ತಿಳಿದ ಅವರ ಪತಿ ಮಲ್ಲೇಶ ಅವರು ವಿಷ ಸೇವನೆ ಮಾಡಿದ್ದರು. ಅವರ ಸ್ಥಿತಿ ಸಹ ಗಂಭೀರವಾಗಿದೆ’ ಎಂದು ಕೆಎಂಸಿ–ಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.