ADVERTISEMENT

ಧಾರವಾಡ | ಅಬ್ಬರದ ಮಳೆ, ಮನೆಗಳಿಗೆ ನುಗ್ಗಿದ ನೀರು

ಗುಡುಗು ಸಹಿತ ತಡರಾತ್ರಿವರೆಗೂ ಸುರಿದ ಮಳೆ; ರಸ್ತೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 4:39 IST
Last Updated 12 ಜೂನ್ 2025, 4:39 IST
ಬುಧವಾರ ರಾತ್ರಿ ಸುರಿದ ಮಳೆಗೆ ಹಳೇಹುಬ್ಬಳ್ಳಿಯ ಗಣೇಶನಗರದ ಮನೆಯೊಳಗೆ ನೀರು ನುಗ್ಗಿತ್ತು
ಪ್ರಜಾವಾಣಿ ಚಿತ್ರ: ಗುರು ಹಬೀಬ
ಬುಧವಾರ ರಾತ್ರಿ ಸುರಿದ ಮಳೆಗೆ ಹಳೇಹುಬ್ಬಳ್ಳಿಯ ಗಣೇಶನಗರದ ಮನೆಯೊಳಗೆ ನೀರು ನುಗ್ಗಿತ್ತು ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ನಗರ ಹಾಗೂ ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಗುಡುಗು ಸಹಿತ ಭರ್ಜರಿ ಮಳೆ ಸುರಿಯಿತು. ರಾತ್ರಿ 9.30ರ ಸುಮಾರಿಗೆ ಆರಂಭವಾದ ಮಳೆ, ತಡರಾತ್ರಿವರೆಗೂ ಮುಂದುವರಿಯಿತು. ನಗರ ಪ್ರದೇಶದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೆಲವೆಡೆ ಮರ, ಗಿಡಗಳು ಉರುಳಿವೆ.

ಲಿಂಗರಾಜ ನಗರದ ಸಮುದಾಯ ಭವನದ ಬಳಿಯಿರುವ ಎರಡು ಮನೆಗಳಿಗೆ, ಉಣಕಲ್ ಸಾಯಿನಗರದ ಓಂನಗರದಲ್ಲಿನ ಎಂಟು ಮನೆಗಳಿಗೆ, ಸಿದ್ಧಾರೂಢನಗರದ ಎರಡನೇ ಕ್ರಾಸ್‌ ಬಳಿಯ ನಾಲ್ಕು ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ. ತಡರಾತ್ರಿವರೆಗೂ ನಿವಾಸಿಗಳು ಪರದಾಡಿದರು. ರಾಜಕಾಲುವೆ ತುಂಬಿ ಹರಿದ ಪರಿಣಾಮ, ಹಳೇಹುಬ್ಬಳ್ಳಿಯ ಪಾಂಡುರಂಗ ಕಾಲೊನಿ, ನಾರಾಯಣ ಸೋಫಾದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಶಿರೂರು ಪಾರ್ಕ್‌ನಲ್ಲಿ ಗಿಡವೊಂದು ಉರುಳಿ ಬಿದ್ದಿದೆ.

ನಗರದ ಉಣಕಲ್‌ ಉದ್ಯಾನದ ಎದುರಿನ ಇಂಡಿಯನ್‌ ಪೆಟ್ರೋಲ್‌ ಬಂಕ್‌ ಎದುರಿನ ಹುಬ್ಬಳ್ಳಿ–ಧಾರವಾಡ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿತ್ತು. ದೇಶಪಾಂಡೆನಗರದ ರೈಲ್ವೆ ಕೆಳಸೇತುವೆ ರಸ್ತೆ, ಲ್ಯಾಮಿಂಗ್ಟನ್‌ ಶಾಲೆ ಎದುರು, ವಿದ್ಯಾನಗರ ಗುರುದತ್ತ ಭವನ, ಕೆಎಂಸಿ–ಆರ್‌ಐ  ಆಸ್ಪತ್ರೆಯ ಎದುರಿನ ರಸಿತೆಯಲ್ಲೂ ನೀರ ನಿಂತ ಪರಿಣಾಮ ವಾಹನ ಸವಾರರು ತೀವ್ರ ಪರದಾಡಿದರು.

ADVERTISEMENT

ದಾಜೀಬಾನ್‌ ಪೇಟೆ, ಕೋಯಿನ್‌ ರಸ್ತೆಯಲ್ಲಿ ಗಟಾರ ಹಾಗೂ ಚರಂಡಿ ನೀರು ರಸ್ತೆ ಮೇಲೆ ಹರಿಯಿತು. ದಾಜೀಬಾನಪೇಟೆ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿರುವ ವಾಣಿಜ್ಯ ಮಳಿಗೆಯ ನೆಲಮಹಡಿಗೆ ನೀರು ನುಗ್ಗಿ, ವಾಹನಗಳು ಮುಳುಗಿದ್ದವು. ಚನ್ನಮ್ಮ ವೃತ್ತ, ಕೋರ್ಟ್‌ ವೃತ್ತ, ಬಸವ ವನ ಹಾಗೂ ಹಳೇ ಬಸ್‌ ನಿಲ್ದಾಣದ ಎದುರು ಮೇಲ್ಸೇತುವೆ ಕಾಮಗಾರಿಗೆ ತೆಗ್ಗು ತೋಡಿರುವುದರಿಂದ, ಸುತ್ತಲಿನ ವಾತಾವರಣ ಕೆಸರುಗದ್ದೆಯಂತಾಗಿತ್ತು.

ಮಳೆ ನೀರು ಸರಾಗವಾಗಿ ಹರಿಯದೆ ತೋಳನಕೆರೆ ಉದ್ಯಾನ, ನೆಹರೂ ಮೈದಾನದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಕೆಲವೆಡೆ ವಿದ್ಯುತ್‌ ವ್ಯತ್ಯಯವಾಗತ್ತು. ಟೆಂಡರ್‌ಶ್ಯೂರ್‌ ರಸ್ತೆ ಸಂಪೂರ್ಣ ನೀರಿನಿಂದ ಆವೃತ್ತವಾಗಿತ್ತು. ನಗರದ ಬಹುತೇಕ ಕಡೆ ಮ್ಯಾನ್‌ಹೋಲ್‌ಗಳು ತುಂಬಿ, ರಸ್ತೆ ಮೇಲೆ ನೀರು ಹರಿಯಿತು.

ತಾಲ್ಲೂಕಿನ ಕುಸಗಲ್‌, ಬ್ಯಾಹಟ್ಟಿ, ಉಣಕಲ್‌, ಛಬ್ಬಿ ಹಾಗೂ ಸುತ್ತಮುತ್ತಲಿನ ಹೊಲ–ಗದ್ದೆಗಳಲ್ಲಿ ನೀರು ನಿಂತಿತ್ತು. ಗಾಮನಗಟ್ಟಿಯ ಕೆಲವು ಹೊಲಗಳಲ್ಲಿ ಮೆಕ್ಕೆ ಜೋಳ ಬಿತ್ತನೆ ಮಾಡಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.

ಹುಬ್ಬಳ್ಳಿ ದೇಶಪಾಂಡೆನಗರದ ರೋಟರಿ ಶಾಲೆ ಎದುರಿನ ರಸ್ತೆಯಲ್ಲಿ ನೀರು ಅಪಾರ ಪ್ರಮಾಣದಲ್ಲಿ ನಿಂತಿತ್ತು
ಹುಬ್ಬಳ್ಳಿ ವಿದ್ಯಾನಗರದ ಕೆಎಂಸಿ–ಆರ್‌ಐ ಆಸ್ಪತ್ರೆಯ ಎದುರಿನ ಹುಬ್ಬಳ್ಳಿ–ಧಾರವಾಡ ಮುಖ್ಯರಸ್ತೆ ಜಲಾವೃತವಾಗಿತ್ತು
ಹುಬ್ಬಳ್ಳಿಯ ದೇಶಪಾಂಡೆನಗರದ ರೋಟರಿ ಸ್ಕೂಲ್‌ ಎದುರಿನ ರಸ್ತೆ ಜಲಾವೃತ್ತವಾಗಿತ್ತು

ನವಲಗುಂದ: 12.5ಸೆಂ.ಮೀ ಮಳೆ

ನವಲಗುಂದ: ತಾಲ್ಲೂಕಿನಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಹಾಳಕುಸುಗಲ್‌ ಗ್ರಾಮ ಸಮೀಪದ ಗೌರಿ ಹಳ್ಳ ತುಂಬಿ ಹರಿಯಿತು. ಹಳ್ಳ ತುಂಬಿದ್ದರಿಂದ ಗ್ರಾಮದಿಂದ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳಿದ್ದ ಗ್ರಾಮಸ್ಥರು ವಾಪಸ್ ಮನೆಗೆ ಹೋಗಲು ಹರಸಾಹಸಪಟ್ಟರು.

ಗೌರಿ ಹಳ್ಳ ತುಂಬಿದಾಗ ಪ್ರತಿ ವರ್ಷ ಜಮೀನುಗಳಿಗೆ ನೀರು ನುಗ್ಗುವುದರಿಂದ ಫಸಲು ಹಾಳಾಗುತ್ತದೆ. ಸಮಸ್ಯೆ ಬಗೆಹರಿಸುವಂತೆ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಿಸಿದವರು ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಣ್ಣ ಶೇಕಪ್ಪ ನೀಡವಣಿ ಆಗ್ರಹಿಸಿದರು. ಯಮನೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತಾಲ್ಲೂಕಿನಲ್ಲಿ ರಾತ್ರಿ 11ರವರೆಗೆ ಒಟ್ಟು 12.5ಸೆಂ.ಮೀ ಮಳೆ ಸುರಿದಿದೆ.

ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿರುವ ಬೀಜ ಹಾನಿಯಾಗುವ ಆತಂಕ ಕಾಡುತ್ತಿದೆ.

ರಸ್ತೆಗಳು ಜಲಾವೃತ:  ಗುಡುಗು, ಸಿಡಿಲು ಸಹಿತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದೆ. ಪಟ್ಟಣದಲ್ಲಿ ಹಾಯ್ದು ಹೋಗಿರುವ ಹುಬ್ಬಳ್ಳಿ –ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶೆಟ್ಟರ್‌ ಕೆರೆ ಬಳಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಪಟ್ಟಣದ ಹಲವೆಡೆ ಮರದ ಕೊಂಬೆಗಳು ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ತಾಲ್ಲೂಕಿನ ಗುಡಿಸಾಗರ ಸಮೀಪದ ಹಳ್ಳ ತುಂಬಿ ಹರಿಯುತ್ತಿದ್ದು, ನಾಗನೂರ್, ಅರಹಟ್ಟಿ, ಕಡದಳ್ಳಿ, ತಡಹಾಳ ರಸ್ತೆ ಸಂಪರ್ಕ ಕಡಿತಗೊಂಡಿದೆ.ಪುರಸಭೆ ಸಿಬ್ಬಂದಿ ಜೆಸಿಬಿ ಮೂಲಕ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.