ADVERTISEMENT

ಹುಬ್ಬಳ್ಳಿ: ಕವಳಾ ಗುಹೆಯೊಳಗೆ ಗಣೇಶ ದರ್ಶನ

ಭೈರಿದೇವಕೊಪ್ಪ ಈಶ್ವರ ನಗರದಲ್ಲಿ ಮಾದರಿ ಗಣೇಶೋತ್ಸವ: ಭಕ್ತರ ಮೆಚ್ಚುಗೆ

ಶಿವರಾಯ ಪೂಜಾರಿ
Published 2 ಸೆಪ್ಟೆಂಬರ್ 2025, 4:04 IST
Last Updated 2 ಸೆಪ್ಟೆಂಬರ್ 2025, 4:04 IST
ಭೈರಿದೇವಕೊಪ್ಪ ಈಶ್ವರ ನಗರದ ಗಣೇಶ ಕಾಲೊನಿಯಲ್ಲಿ ಗಜಪಡೆ ಯುವ ಬಳಗದಿಂದ ಕವಳಾ ಗುಹೆ ಮಾದರಿ ಮಂಟಪ ನಿರ್ಮಿಸಿ ಪ್ರತಿಷ್ಠಾಪಿಸಿರುವ ಗಣೇಶ
ಭೈರಿದೇವಕೊಪ್ಪ ಈಶ್ವರ ನಗರದ ಗಣೇಶ ಕಾಲೊನಿಯಲ್ಲಿ ಗಜಪಡೆ ಯುವ ಬಳಗದಿಂದ ಕವಳಾ ಗುಹೆ ಮಾದರಿ ಮಂಟಪ ನಿರ್ಮಿಸಿ ಪ್ರತಿಷ್ಠಾಪಿಸಿರುವ ಗಣೇಶ   
ಹುಬ್ಬಳ್ಳಿಯಲ್ಲೇ ಕವಳಾ ಗುಹೆ ನಿರ್ಮಾಣ ದರ್ಶನಕ್ಕೆ ಹರಿದುಬರುತ್ತಿದೆ ಭಕ್ತಸಾಗರ | ಬೆಳಿಗ್ಗೆ 5 ಗಂಟೆವರೆಗೂ ಸರದಿಸಾಲು

ಹುಬ್ಬಳ್ಳಿ: ಕಿರಿದಾದ ಗುಹೆ, ಸುತ್ತಲೂ ಬೆಟ್ಟ, ಗುಡ್ಡಗಳ ಸಾಲು, ಗಿರಿ ಶಿಖರ, ಈಶ್ವರಲಿಂಗ ಪೂಜಿಸುವ ಗಣೇಶ, ಅದ್ದೂರಿ ಮಂಟಪ...

ಭೈರಿದೇವಕೊಪ್ಪ ಈಶ್ವರ ನಗರದ ಗಣೇಶ ಕಾಲೊನಿಯಲ್ಲಿ ಸೃಷ್ಟಿಸಲಾದ ವಿಸ್ಮಯಕಾರಿ ದೃಶ್ಯವಿದು.

ದಟ್ಟ ಅರಣ್ಯದ ನಡುವೆ ನಿಸರ್ಗದಿಂದಲೇ ನಿರ್ಮಾಣಗೊಂಡಿರುವ ಉತ್ತರಕನ್ನಡ ಜಿಲ್ಲೆ ದಾಂಡೇಲಿ ಬಳಿಯ ಕವಳಾ ಗುಹೆ ಮಾದರಿಯನ್ನು ಗಣೇಶೋತ್ಸವ ಅಂಗವಾಗಿ ಗಜಪಡೆ ಯುವ ಬಳಗದಿಂದ ಇಲ್ಲಿ ನಿರ್ಮಿಸಲಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ.

ADVERTISEMENT

ಮಹಾಶಿವರಾತ್ರಿ ದಿನ ಮಾತ್ರ ದರ್ಶನ ಭಾಗ್ಯ ನೀಡುವ ಕವಳೇಶ್ವರನ ಪ್ರತಿರೂಪವಾಗಿ ಗಣೇಶನು ಇಲ್ಲಿ ಭಕ್ತರನ್ನು ಹರಸುತ್ತಿದ್ದಾನೆ. ಪ್ರವೇಶ ದ್ವಾರದಲ್ಲಿ ಬಸವಣ್ಣ, ಸಿದ್ದಾರೂಢರು, ಗುರುನಾಥಾರೂಢರ ಚಿತ್ರ ಇರಿಸಿ ಮಂಟಪ ನಿರ್ಮಿಸಲಾಗಿದೆ. ಯಾವುದೇ ಕಲಾವಿದರ ಸಹಾಯ ಇಲ್ಲದೆ ಎರಡು ತಿಂಗಳ ಕಾಲ ಗಜಪಡೆ ಯುವ ಬಳಗವೇ ಗುಹೆ ಮಾದರಿ ನಿರ್ಮಿಸಿರುವುದು ವಿಶೇಷ.

₹2 ಲಕ್ಷ ವೆಚ್ಚದಲ್ಲಿ ಕವಳೇಶ್ವರ ಗುಹೆ ನಿರ್ಮಿಸಿ ಒಳಭಾಗದಲ್ಲಿ ಈಶ್ವರನ ಪ್ರತಿಮೆ ಹಾಗೂ ಅದಕ್ಕೆ ಪೂಜೆ ಸಲ್ಲಿಸುತ್ತಿರುವ ಗಣೇಶನ ಮೂರ್ತಿ ಇರಿಸಲಾಗಿದೆ. ಹುಬ್ಬಳ್ಳಿ, ಧಾರವಾಡ ನಗರ ಮಾತ್ರವಲ್ಲದೆ, ಸುತ್ತಲಿನ ಗ್ರಾಮಗಳ ಜನರು ತಂಡೋಪತಂಡವಾಗಿ ಬಂದು, ಬೆಳಿಗ್ಗೆ 5 ಗಂಟೆವರೆಗೂ ಸರದಿ ಸಾಲಿನಲ್ಲಿ ನಿಂತು ಈ ದೃಶ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ.

ಗಣೇಶನ ದರ್ಶನ ಪಡೆಯಲು ಮಂಟಪದ ಹೊರಗಿನಿಂದ ಕವಳೇಶ್ವರ ಗುಹೆಯೊಳಗೆ ಬಗ್ಗಿಕೊಂಡೇ ಹೋಗಬೇಕು. ವೃದ್ಧರು, ಅಂಗವಿಲಕರ ಅನುಕೂಲಕ್ಕಾಗಿ ಹಿಂಭಾಗದಿಂದ ಒಳ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

‘ದಾಂಡೇಲಿಯಿಂದ 25 ಕಿ.ಮೀ. ದೂರ ಇರುವ ಕವಳೇಶ್ವರ ದೇವರ ದರ್ಶನ ಪಡೆಯಲು ದಟ್ಟ ಅರಣ್ಯದ ನಡುವೆ ಸುಮಾರು 350ಕ್ಕೂ ಹೆಚ್ಚು ಮೆಟ್ಟಿಲು ಹತ್ತಬೇಕು. ಅಲ್ಲಿಂದ ಗುಹೆಯೊಳಗೆ ಕಡಿದಾದ ದಾರಿಯಲ್ಲಿ ಸಾಗಬೇಕು. ಶಿವರಾತ್ರಿ ದಿನ ಮಾತ್ರ ದರ್ಶನಕ್ಕೆ ಅವಕಾಶ ಇರುವುದರಿಂದ ಬಹಳಷ್ಟು ಜನರಿಗೆ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಕವಳಾ ಗುಹೆ ಮಾದರಿಯಲ್ಲಿ ಮಂಟಪ ನಿರ್ಮಿಸಲಾಗಿದೆ’ ಎಂದು ಗಜಪಡೆ ಯುವ ಬಳಗದ ಅಧ್ಯಕ್ಷ ಮುತ್ತು ಹೆಬ್ಬಳ್ಳಿ ಹೇಳಿದರು.

‘14 ವರ್ಷಗಳಿಂದ ಬಳಗದಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದ್ದು, ನಾಲ್ಕು ವರ್ಷಗಳಿಂದ ಈ ರೀತಿ ವಿನೂತನ ಪ್ರಯೋಗ ಮಾಡಲಾಗುತ್ತಿದೆ. ಮೊದಲ ವರ್ಷ ಹುತ್ತದೊಳಗೆ ಹೋಗಿ ಗಣೇಶ ಮೂರ್ತಿ ದರ್ಶನ ಪಡೆಯುವುದು, 2ನೇ ವರ್ಷ ಕೇದಾರನಾಥ ಮಾದರಿ ಹಾಗೂ ಕಳೆದ ಬಾರಿ ರೋಬೊಟಿಕ್ ಮಾದರಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು’ ಎನ್ನುತ್ತಾರೆ ಅವರು.

13 ದಿನ ಗಣೇಶೋತ್ಸವ ಆಚರಿಸಲಾಗುತ್ತದೆ. ದರ್ಶನಕ್ಕೆ ಬರುವವರ ಸಂಖ್ಯೆ ಹೆಚ್ಚಾದರೆ ಇನ್ನೂ ಹೆಚ್ಚುದಿನ ಪ್ರತಿಷ್ಠಾಪನೆಯ ಚಿಂತನೆ ಇದೆ
ಮುತ್ತು ಹೆಬ್ಬಳ್ಳಿ ಅಧ್ಯಕ್ಷ ಗಜಪಡೆ ಯುವ ಬಳಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.