
ರಾಜಶೇಖರ ಬಿಜಾಪೂರ ಅವರ ಮನೆಯ ಕಮೊಡ್ ಭಾಗದಲ್ಲಿ ಸಿಕ್ಕಿದ ಹರಿದ ನೋಟುಗಳು
ಧಾರವಾಡ: ಬೆಳಗಾವಿ ವಿಭಾಗದ ಕೃಷಿ ಜಾಗೃತ ಕೋಶದ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪೂರ ಅವರ ಮನೆಗೆ ಲೋಕಾಯುಕ್ತ ತಂಡ ಮಂಗಳವಾರ ದಾಳಿ ನಡೆಸಿದ್ದು, ಶೌಚಾಲಯದ ಕಮೊಡ್ ಭಾಗದಲ್ಲಿ ₹ 500 ಮೌಲ್ಯದ ಕೆಲ ಹರಿದ ನೋಟುಗಳು ಸಿಕ್ಕಿವೆ.
ಅಕ್ರಮ ಆಸ್ತಿ ಸಂಪಾದನೆ ದೂರಿನಡಿ ಅಧಿಕಾರಿಗಳು ನಗರದ ಆರ್ಚಿಡ್ ಸಿಲ್ವರ್ ಬಡವಾಣೆಯಲ್ಲಿ ಇರುವ ರಾಜಶೇಖರ ಅವರ ‘ಅಂಜನಾದ್ರಿ’ ಮನೆಗೆ ತೆರಳಿ, ದಾಳಿ ಮಾಡಿದರು. ನೋಟುಗಳನ್ನು ತುಂಡು ಮಾಡಿ ಕಮೊಡ್‌ಗೆ ಹಾಕಿ ಪ್ಲಶ್ ಮಾಡಿದ್ದು ಪರಿಶೀಲನೆ ನಡೆಸಿದಾಗ ಲೋಕಾಯುಕ್ತ ಅಧಿಕಾರಿಗಳಿಗೆ ಗೊತ್ತಾಗಿದೆ.
‘ರಾಜಶೇಖರ ಅವರು ಮನೆಯಲ್ಲಿ ಇದ್ದರು. ಕೋಣೆಯ ಬಾಗಿಲು ತೆರೆಯಲು ಅರ್ಧ ಗಂಟೆ ತಡ ಮಾಡಿದರು. ₹ 500 ಮೌಲ್ಯದ ನೋಟುಗಳನ್ನು ಹರಿದು ಕಮೊಡ್‌ಗೆ ಹಾಕಿ ಫ್ಲಶ್ ಮಾಡಿದ್ದಾರೆ. ಹರಿದ ಕೆಲ ನೋಟುಗಳು ಸಿಕ್ಕಿವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಧಾರವಾಡದ ಆರ್ಚಿಡ್ ಸಿಲ್ವರ್ ಬಡಾವಣೆ ಮತ್ತು ರಾಣಿಚನ್ನಮ್ಮ ನಗರದ ಮನೆಗಳು, ಯರ್ರಿಕೊಪ್ಪದ ಫಾರಂ ಹೌಸ್, ಹಾವೇರಿಯ ಜಿಲ್ಲೆಯ ಶಿಗ್ಗಾಂವಿಯ ಮೋಜಿನ ಉದ್ಯಾನ ಹಾಗೂ ಬೆಳಗಾವಿಯ ಕಚೇರಿಯಲ್ಲೂ ನಡೆದಿದೆ. ಬ್ಯಾಂಕ್ ಪಾಸ್ ಬುಕ್‌ಗಳು, ಆಸ್ತಿ ದಾಖಲೆಗಳು, ಒಡವೆ ಇತ್ಯಾದಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.
‘ಮೂರು ಮನೆ (ಫಾರಂ ಹೌಸ್ ಸಹಿತ), 3 ನಿವೇಶನ ಮತ್ತು, 6.5 ಎಕರೆ ಜಮೀನು ಮೌಲ್ಯ (₹ 5.34 ಕೋಟಿ), ₹ 18 ಲಕ್ಷ ಮೌಲ್ಯದ ಚಿನ್ನಾಭರಣ, 3 ದಿಚಕ್ರವಾಹನ ಮತ್ತು 1 ಕಾರು ಒಟ್ಟು 4 ವಾಹನಗಳು (ಮೌಲ್ಯ ₹ 39 ಲಕ್ಷ), ನಗದು ₹ 80 ಸಾವಿರ, ಇತರ ವಸ್ತುಗಳು (ಮೌಲ್ಯ 15 ಲಕ್ಷ) ಇವೆ. ಪತ್ತೆಯಾಗಿರುವ ಒಟ್ಟು ಆಸ್ತಿ ಮೌಲ್ಯ ₹ 6.07 ಕೋಟಿ, ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅಧಿಕಾರಿಗಳು ತಿಳಿಸಿದ್ಧಾರೆ. ಲೋಕಾಯಕ್ತ ಎಸ್ಪಿ ಸಿದ್ದಲಿಂಗಪ‍್ಪ, ಡಿವೈಎಸ್ಪಿ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ತಂಡಗಳು ದಾಳಿ ನಡೆಸಿವೆ.
ಧಾರವಾಡದ ಆರ್ಚಿಡ್ ಸಿಲ್ವರ್ ಬಡಾವಣೆಯ ರಾಜಶೇಖರ ಅವರ ಮನೆಯಲ್ಲಿ ಲೋಕಾಯುಕ್ತ ತಂಡದವರು ದಾಖಲೆಗಳನ್ನು ಪರಿಶೀಲಿಸಿದರು
ಡಿಎಚ್‌ಒ ಬಳಿ ₹4.89 ಕೋಟಿ ಅಕ್ರಮ ಆಸ್ತಿ
ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್‌ಒ) ಡಾ.ಎಲ್.ಆರ್.ಶಂಕರ್ ನಾಯ್ಕ್ ಅವರ ಬಳಿ ನಿಗದಿತ ಆಸ್ತಿಗಿಂತ ಹೆಚ್ಚುವರಿಯಾಗಿ ₹4.89 ಕೋಟಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ ಎಂದು ಲೋಕಯುಕ್ತ ಪ್ರಕಟಣೆ ತಿಳಿಸಿದೆ. ಡಿಎಚ್‌ಒ ಅವರಿಗೆ ಸಂಬಂಧಿಸಿದ 4 ಕಡೆಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿತ್ತು. ಆಗ ₹4.20 ಕೋಟಿ ಮೌಲ್ಯದ 11 ನಿವೇಶನಗಳು ಐದು ವಾಸದ ಮನೆಗಳು (ಸ್ಥಿರಾಸ್ತಿ) ಪತ್ತೆಯಾಗಿವೆ. ₹69.82 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಇದರಲ್ಲಿ ₹15.56 ಲಕ್ಷ ನಗದು ₹16.75 ಲಕ್ಷ ಮೌಲ್ಯದ ಚಿನ್ನಾಭರಣ ₹9.60 ಲಕ್ಷ ಮೌಲ್ಯದ ವಾಹನಗಳು ₹31.90 ಲಕ್ಷ ಮೌಲ್ಯದ ಪೀಠೋಪಕರಣ ಮತ್ತು ಇತರ ವಸ್ತುಗಳು ಸೇರಿವೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.