ಧಾರವಾಡ: ‘ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ (ನರೇಗಾ) ಜಾಬ್ ಕಾರ್ಡ್‌ದಾರರು 1.7 ಲಕ್ಷ ಮಂದಿ ಇದ್ದಾರೆ. ಈ ಪೈಕಿ ಸಕ್ರಿಯರು 49 ಸಾವಿರ ಹಾಗೂ ನಿಷ್ಕ್ರಿಯರು 1.21 ಲಕ್ಷ ಇದ್ದಾರೆ. ಎಲ್ಲ ಇಲಾಖೆಗಳವರು (ಅರಣ್ಯ, ತೋಟಗಾರಿಕೆ...) ಒಟ್ಟಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ, ಖಾತ್ರಿ ಕಾರ್ಮಿಕರಿಗೆ ಕೆಲಸ ಗುರಿ ಸಾಧಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಉದ್ಯೋಗ ಖಾತ್ರಿ ಯೋಜನೆಯಡಿ ಸೃಜಿಸಿದ ಮಾನವ ದಿನಗಳ ಗುರಿ ಸಾಧಿಸದೆ ಅನುದಾನ ವಾಪಸಾದರೆ ಅದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಯನ್ನು ಹೊಣೆ ಮಾಡಲಾಗುವುದು. ವಾಪಸಾದ ಹಣವನ್ನು ಆ ಅಧಿಕಾರಿ ಸಂಬಳದಿಂದ ಭರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ನರೇಗಾ ಯೋಜನೆ ಗುರಿ ಸಾಧನೆಯಲ್ಲಿ ತೋಟಗಾರಿಕೆ ಇಲಾಖೆ ಕಳೆದ ವರ್ಷದ ಸಾಧನೆ ಕಡಿಮೆ ಇದೆ. ಈ ವರ್ಷ ಗುರಿ ಸಾಧಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಕಾಶಿನಾಥ ಭದ್ರಣ್ಣನವರ ಅವರಿಗೆ ಸಚಿವ ಲಾಡ್ ಎಚ್ಚರಿಕೆ ನೀಡಿದರು.
‘2025–26ನೇ ಸಾಲಿಗೆ ನರೇಗಾ ಕ್ರಿಯಾ ಯೋಜನೆ ಸಿದ್ಧಪಡಿಸಿ 28 ಲಕ್ಷ ಮಾನವ ದಿನ ಸೃಜಿಸಿ ಅನುಮೋದನೆ ಪಡೆಯಲಾಗಿದೆ. ಉದ್ಯೋಗ ಖಾತ್ರಿ ಕೆಲಸಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಡ್‌ದಾರರು ಬರುತ್ತಿಲ್ಲ. ಬಹಳಷ್ಟು ದೂರುಗಳು ಇವೆ. ಕೆಲವಾರು ತಾಂತ್ರಿಕ ಸಮಸ್ಯೆಗಳು ಇವೆ’ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಿ.ಎಸ್.ಮೂಗನೂರುಮಠ ತಿಳಿಸಿದರು.
‘ಜಿಲ್ಲೆಯಲ್ಲಿ 189 ಕಿ.ಮೀ ಹಸಿರು ನಿರ್ಮಾಣ ಗುರಿ ಇದೆ. ಈ ಪೈಕಿ 149 ಕಿ.ಮೀ ನಿರ್ಮಿಸಲಾಗಿದ್ದು, ಇನ್ನು 49 ಕಿ.ಮೀ ಬಾಕಿ ಇದೆ’ ಎಂದು ಸಾಮಾಜಿಕ ಅರಣ್ಯ ವಿಭಾಗದ ಶಿವಕುಮಾರ ಗಜ್ರೆ ತಿಳಿಸಿದರು.
‘ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬ ಕುರಿತು ಕೃಷಿ ವಿಶ್ವವಿದ್ಯಾಲಯದವರು ಜಿಲ್ಲೆಯ ರೈತರಿಗೆ ಮಾಹಿತಿ ನೀಡಬೇಕು. ಜಮೀನಿನ ಮಣ್ಣಿನ ಸಾರ (ಸಾಯಿಲ್ ಟೆಸ್ಟ್ ) ಪರೀಕ್ಷೆ ಕಾರ್ಡ್ ಆಧರಿಸಿ ರೈತರಿಗೆ ವಿವರಿಸಬೇಕು. ವಿಶ್ವವಿದ್ಯಾಲಯದ ಪರಿಣಿತರ ಜ್ಞಾನ, ಸಂಶೋಧನೆಗಳು ಕೃಷಿಕರಿಗೆ ತಲುಪಬೇಕು. ರೈತರಿಗೆ ಮಾಹಿತಿ ನೀಡದಿದ್ದರೆ ಜಿಲ್ಲೆಯಲ್ಲಿ ಕೃಷಿ ವಿ.ವಿ ಇದ್ದೇನು ಪ್ರಯೋಜನ’ ಎಂದು ಸಚಿವ ಲಾಡ್ ಪ್ರಶ್ನಿಸಿದರು.
‘ರೈತರಿಗೆ ನಿಯಮಿತವಾಗಿ ಮಾಹಿತಿ ನೀಡಲಾಗುತ್ತಿದೆ. ಬೆಳೆಗಳ ಸಮಗ್ರ ಮಾಹಿತಿಯ ವಿವರ ಸಿದ್ಧಪಡಿಸಿ ರೈತರಿಗೆ ನೀಡಲಾಗುವುದು’ ಎಂದು ಕೃಷಿ ವಿ.ವಿ.ಯ ಪ್ರೊ. ಬಿ.ಡಿ. ಬಿರಾದಾರ ತಿಳಿಸಿದರು.
‘ಮಳೆಯಿಂದ ಬೆಳೆ ಹಾನಿ ಸಮೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 12,977 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. ತಾಲ್ಲೂಕುವಾರು ನವಲಗುಂದ 10 ಸಾವಿರ, ಹುಬ್ಬಳ್ಳಿ 1,504, ಕುಂದಗೋಳ 764 ಹಾಗೂ ಅಣ್ಣಿಗೇರಿ 471 ಹೆಕ್ಟೇರ್ ಬೆಳೆ ಹಾನಿಯಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದರು.
‘ಬೆಣ್ಣಿಹಳ್ಳ ಮತ್ತು ತುಪ್ಪರಿ ಹಳ್ಳದ ಪಕ್ಕದಲ್ಲಿ ಮಾತ್ರ ಸಮೀಕ್ಷೆ ಮಾಡಿದ್ದಾರೆ. ನವಲಗುಂದ ತಾಲ್ಲೂಕಿನಲ್ಲಿ ನಾವು ಮಾಡಿರುವ ಸಮೀಕ್ಷೆ ಪ್ರಕಾರ 56 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ’ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
‘12 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ದೂರು ಇವೆ. ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ಧಾರೆ’ ಎಂದು ಕೋನರಡ್ಡಿ ತಿಳಿಸಿದರು.
‘ಕುಡಿಯುವ ನೀರಿನ ಕುರಿತು ದೂರುಗಳನ್ನು ಪರಿಹರಿಸಲಾಗಿದೆ. 467 ಶುದ್ಧ ಕುಡಿಯುವ ನೀರಿನ ಘಟಕ (ಆರ್‌ಒ) ಪೈಕಿ 112 ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಗ್ರಾಮೀಣ ನೀರು ಪೂರೈಕೆ ವಿಭಾಗದ ಎಂಜಿನಿಯರ್ ಜಗದೀಶ್ ಪಾಟೀಲ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಎನ್‌ಡಬ್ಲ್ಯುಕೆಆರ್‌ಟಿಸಿ ಎಂ.ಡಿ ಪ್ರಿಯಾಂಗಾ ಎಂ., ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಇದ್ದರು.
ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಯೋಜನೆಗಳಡಿ ₹1300 ಕೋಟಿ ಅನುದಾನ ಹಂಚಿಕೆಯಾಗಿದ್ದು ₹ 513 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ₹ 441 ಕೋಟಿ ಬಳಕೆಯಾಗಿದೆ. ಭೌತಿಕ ಸಾಧನೆ ಶೇ 91 ಹಾಗೂ ಹಣಕಾಸು ಸಾಧನೆ ಶೇ 86 ಇದೆಸಂತೋಷ್ ಲಾಡ್ ಜಿಲ್ಲಾ ಉಸ್ತುವಾರಿ ಸಚಿವ
ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಮೇಳ ಆಯೋಜಿಸಬೇಕು. ಕಾರ್ಡ್‌ದಾರರಿಗೆ ಕೆಲಸದ ಮಾಹಿತಿ ನೀಡಬೇಕು. ಅವರನ್ನು ಕೆಲಸದಲ್ಲಿ ತೊಡಗಿಸಬೇಕುದಿವ್ಯಪ್ರಭು ಜಿಲ್ಲಾಧಿಕಾರಿ
‘ಜಿಲ್ಲೆಯಲ್ಲಿ ಶೂನ್ಯ ದಾಖಲಾತಿ ಶಾಲೆಗಳು 20 ಇವೆ. ಈ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಕಳೆದ ವರ್ಷ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಸಂಖ್ಯೆ 3.41 ಲಕ್ಷ ಇತ್ತು. 25–26ನೇ ಸಾಲಿನಲ್ಲಿ 3.13 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ದಾಖಲಾತಿ ಪ್ರಕ್ರಿಯೆ ಜುಲೈ ಅಂತ್ಯದವರೆಗೆ ನಡೆಯಲಿದೆ’ ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ತಿಳಿಸಿದರು. ‘ಶೂನ್ಯ ದಾಖಲಾತಿ ಶಾಲೆಗಳ ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜನೆಗೆ ಕ್ರಮ ವಹಿಸಬೇಕು. ಸಮೀಕ್ಷೆ ನಡೆಸಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಕಾರಣ ತಿಳಿಯಬೇಕು’ ಎಂದು ಲಾಡ್ ನಿರ್ದೇಶನ ನೀಡಿದರು.
‘ರಸಗೊಬ್ಬರ ಇಲ್ಲ ಎಂದು ಹಳ್ಳಿಗಳಲ್ಲಿ (ಹೆಬ್ಬಾಳ ಶಿರೂರು ಬಳ್ಳೂರು ಹಾಳಕುಸುಗಲ್..) ರೈತರು ದೂರುತ್ತಿದ್ದಾರೆ. ಗೊಬ್ಬರ ಒದಗಿಸಲು ಕ್ರಮ ವಹಿಸಬೇಕು. ನಾನೇ ಫೋನ್ ಮಾಡಿದರೂ ಗೊಬ್ಬರ ನೀಡಿಲ್ಲ’ ಎಂದು ಶಾಸಕ ಕೋನರಡ್ಡಿ ತಿಳಿಸಿದರು. ‘ಯೂರಿಯಾ ಗೊಬ್ಬರಕ್ಕೆ ಹೆಚ್ಚು ಬೇಡಿಕೆ ಇದೆ. ಜಿಲ್ಲೆಗೆ ಜುಲೈ ಅಂತ್ಯಕ್ಕೆ ಬೇಡಿಕೆ 17 ಸಾವಿರ ಮೆಟ್ರಿಕ್ ಟನ್ ಇತ್ತು. ಈವರೆಗೆ 21 ಸಾವಿರ ಮೆಟ್ರಿಕ್ ಟನ್ ಪೂರೈಕೆಯಾಗಿದೆ. ನ್ಯಾನೊ ಯೂರಿಯಾ ಲಭ್ಯ ಇದೆ ಈ ಗೊಬ್ಬರ ಬಳಸುವಂತೆ ರೈತರನ್ನು ಪ್ರೇರಪಿಸಲಾಗುತ್ತಿದೆ. ಶೀಘ್ರದಲ್ಲಿ ಇನ್ನಷ್ಟು ಗೊಬ್ಬರ ಜಿಲ್ಲೆಗೆ ಪೂರೈಕೆಯಾಗಲಿದೆ’ ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.