ADVERTISEMENT

IPL ಬೆಟ್ಟಿಂಗ್‌ ದಂಧೆ ವಿರುದ್ಧ ಹುಬ್ಬಳ್ಳಿ–ಧಾರವಾಡ ಪೊಲೀಸರ ವಿಶೇಷ ಕಾರ್ಯಾಚರಣೆ

ಕಮಿಷನರ್‌ ಸಭೆ; ಮೀಮ್ಸ್‌ನಲ್ಲಿ ಎಚ್ಚರಿಕೆ ಸಂದೇಶ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 16:25 IST
Last Updated 1 ಏಪ್ರಿಲ್ 2023, 16:25 IST
––
––   

ಹುಬ್ಬಳ್ಳಿ: ಐಪಿಎಲ್‌ ಕ್ರಿಕೆಟ್‌ ಟೂರ್ನಿ ಏ. 2ರಿಂದ ಆರಂಭವಾಗಲಿದ್ದು, ಬೆಟ್ಟಿಂಗ್‌ ದಂಧೆ ನಡೆಸುವವರ ವಿರುದ್ಧ ಹು–ಧಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಪೊಲೀಸ್‌ ಕಮಿಷನರ್‌ ರಮನ್‌ ಗುಪ್ತಾ ಪೊಲೀಸ್‌ ಅಧಿಕಾರಿಗಳ ಹಾಗೂ ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್‌ಗಳ ಜೊತೆ ಸಭೆ ನಡೆಸಿ, ಅವಳಿನಗರದಲ್ಲಿ ನಡೆಯುವ ಬೆಟ್ಟಿಂಗ್‌ ದಂಧೆ ಕುರಿತು ಚರ್ಚಿಸಿದ್ದಾರೆ. ಈ ಹಿಂದೆ ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡವರ ಹಾಗೂ ಅವರ ವಿರುದ್ಧ ದಾಖಲಾದ ಪ್ರಕರಣಗಳ ಕುರಿತು ಮಾಹಿತಿ ಪಡೆದಿರುವ ಕಮಿಷನರ್‌, ಅವರ ಚಲನವಲನದ ಮೇಲೆ ವಿಶೇಷ ನಿಗಾ ಇಡಲು ಸೂಚಿಸಿದ್ದಾರೆ. ನಗರದ ಯಾವ್ಯಾವ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಬೆಟ್ಟಿಂಗ್‌ ನಡೆಯುತ್ತಿದೆ ಎನ್ನುವ ಕುರಿತು ಸಮಗ್ರ ಮಾಹಿತಿ ಪಡೆದಿದ್ದಾರೆ.

ಪಂದ್ಯಾವಳಿ ಸಂದರ್ಭದಲ್ಲಿ ಹೇಗೆ ಕಾರ್ಯಾಚರಣೆ ನಡೆಸಬೇಕು, ಯಾವೆಲ್ಲ ಮುನ್ನೆಚ್ಚರಿಕೆ ಅನುಸರಿಸಬೇಕು, ತಂತ್ರಜ್ಞಾನಗಳನ್ನು ಹೇಗೆ ಬಳಸಬೇಕು ಎನ್ನುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಸಿಸಿಬಿ ಪೊಲೀಸರ ನೆರವಿನಿಂದ ಕಾರ್ಯಾಚರಣೆಗಾಗಿಯೇ ವಿಶೇಷ ತಂಡ ರಚಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಈ ನಡುವೆಯೇ, ಹು–ಧಾ ಪೊಲೀಸ್‌ ಕಮಿಷನರೇಟ್‌ ಘಟಕವು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ ರೂಪದಲ್ಲಿ ಎಚ್ಚರಿಕೆ ಸಂದೇಶಗಳನ್ನು ಪೋಸ್ಟ್‌ ಮಾಡಿ, ಸಾರ್ವಜನಿಕರನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಿದೆ. ಬೆಟ್ಟಿಂಗ್‌ ವ್ಯವಹಾರ ನಡೆಸಿದ ವ್ಯಕ್ತಿ, ಹು–ಧಾ ಪೊಲೀಸರ ಕಾರ್ಯಾಚರಣೆಯಿಂದ ಹಣ ಕಳೆದುಕೊಂಡು, ಬಂಧನವಾಗಿರುವಂತಹ ಹಾಗೂ ಹಾಗೂ ಪ್ರಕರಣ ದಾಖಲಿಸುವಂಥ ಮೀಮ್ಸ್‌ ಸಿದ್ಧಪಡಿಸಿ ಎಚ್ಚರಿಕೆ ನೀಡಲಾಗಿದೆ.

‘ಈ ಬಾರಿ ಹು–ಧಾ ಪೊಲೀಸರು ಭರ್ಜರಿ ಬ್ಯಾಟಿಂಗ್‌ ಮಾಡಲು ಕಣಕ್ಕೆ ಇಳಿಯಲಿದ್ದಾರೆ; ಬೆಟ್ಟಿಂಗ್‌ ಆಡುವವರ ವಿರುದ್ಧ’ ಎಂದು ಬರೆದು, ಪೋಸ್ಟ್‌ ಮಾಡಿದ್ದಾರೆ. ಸುತ್ತಮುತ್ತ ಯಾರಾದರೂ ಬೆಟ್ಟಿಂಗ್‌ನಲ್ಲಿ ತೊಡಗಿರುವುದು ಕಂಡು ಬಂದರೆ 112 ತುರ್ತು ಸ್ಪಂದನಕ್ಕೆ ಕರೆ ಮಾಡಿ ತಿಳಿಸಲು ವಿನಂತಿಸಿಕೊಂಡಿರುವ ಅವರು, ಮಾಹಿತಿ ನೀಡಿದವರ ವಿವರ ಗೋಪ್ಯವಾಗಿ ಇಡುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.