
ಹುಬ್ಬಳ್ಳಿ: ‘ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ದೇಶದ ಕ್ರೀಡಾಪಟುಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿರುವ ಸಂಸದ ಕ್ರೀಡಾ ಮಹೋತ್ಸವಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿಯವರು 2047ಕ್ಕೆ ವಿಕಸಿತ ಭಾರತ ನಿರ್ಮಾಣದ ಗುರಿ ಹೊಂದಿದ್ದಾರೆ. ಅದಕ್ಕೆ ಎಲ್ಲರೂ ಕೈಜೋಡಿಸಬೇಕು. ಸಂಸದ ಕ್ರೀಡಾ ಮಹೋತ್ಸವದ ಮೂಲಕ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರದಿಪ ಶೆಟ್ಟರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅನೇಕ ಕ್ರೀಡಾ ಪ್ರತಿಭೆಗಳಿವೆ. ಅವರಿಗೆ ಸೂಕ್ತ ವೇದಿಕೆ, ಸೌಲಭ್ಯ ಇರುವುದಿಲ್ಲ. ಈ ಕ್ರೀಡಾ ಮಹೋತ್ಸವದ ಮೂಲಕ ಅವರಿಗೆ ಅವಕಾಶ, ಸೂಕ್ತ ವೇದಿಕೆ ಸಿಗುತ್ತದೆ ಎಂದು ಹೇಳಿದರು.
ಮಕ್ಕಳು ಮೊಬೈಲ್, ಟಿ.ವಿ ಬಿಟ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪಾಲಕರು ಪ್ರೋತ್ಸಾಹ ನೀಡಬೇಕು. ಸರ್ವತೋಮುಖ ಬೆಳವಣಿಗೆಗೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಮೇಯರ್ ಜ್ಯೋತಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡೆಯಲ್ಲಿ ಸೋಲು, ಗೆಲುವಿಗಿಂತ ಭಾಗವಹಿಸುವುದು ಮುಖ್ಯ. ಎಲ್ಲರಲ್ಲಿಯೂ ಕ್ರೀಡಾಸ್ಫೂರ್ತಿ ಇರಬೇಕು ಎಂದು ಹೇಳಿದರು.
ಉಪಮೇಯರ್ ಸಂತೋಷ ಚವ್ಹಾಣ್ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಹುಬ್ಬಳ್ಳಿ ಶಹರ ತಹಶೀಲ್ದಾರ್ ಮಹೇಶ ಗಸ್ತೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡರಾದ ಲಿಂಗರಾಜ ಪಾಟೀಲ, ಭರತ್ ಬೊಮ್ಮಾಯಿ, ಮಹೇಂದ್ರ ಕೌತಾಳ, ರಂಗಾ ಬದ್ದಿ, ಮಂಜು ಕಾಟ್ಕರ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ, ರೂಪಾ ಶೆಟ್ಟಿ, ಮೀನಾಕ್ಷಿ ವಂಟಮೂರಿ, ತಾ.ಪಂ ಇಒ ಎಂ.ವೈ.ಹೊಸಮನಿ, ಸದಾನಂದ ಅಮರಾಪುರ ಇದ್ದರು.
ಕ್ರೀಡಾ ಮಹೋತ್ಸವದಲ್ಲಿ ಕಬಡ್ಡಿ, ಕೊಕ್ಕೊ, ವಾಲಿಬಾಲ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.