ADVERTISEMENT

ಹುಬ್ಬಳ್ಳಿ: ವೈದ್ಯ ವಿದ್ಯಾರ್ಥಿಗಳ ಕನ್ನಡ ಡಿಂಡಿಮ

ಅದ್ದೂರಿ ಕನ್ನಡ ಹಬ್ಬ ಆಚರಿಸುವ ಕೆಂಎಸಿಆರ್‌ಐ (ಕಿಮ್ಸ್‌) ವೈದ್ಯಕೀಯ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 6:59 IST
Last Updated 1 ನವೆಂಬರ್ 2024, 6:59 IST
ಹುಬ್ಬಳ್ಳಿಯ ಕೆಎಂಸಿಆರ್‌ಐನ(ಕಿಮ್ಸ್‌) ಕನ್ನಡ ಸಂಘದ ‘ಡಿಂಡಿಮ’ ಕನ್ನಡ ಹಬ್ಬ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ನಿರ್ಮಿಸಿದ್ದ ಸ್ವಾಗತ ದ್ವಾರ
ಹುಬ್ಬಳ್ಳಿಯ ಕೆಎಂಸಿಆರ್‌ಐನ(ಕಿಮ್ಸ್‌) ಕನ್ನಡ ಸಂಘದ ‘ಡಿಂಡಿಮ’ ಕನ್ನಡ ಹಬ್ಬ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ನಿರ್ಮಿಸಿದ್ದ ಸ್ವಾಗತ ದ್ವಾರ   

ಹುಬ್ಬಳ್ಳಿ: ವೈದ್ಯಕೀಯ ಕ್ಷೇತ್ರ ಎಂದರೆ ಇಂಗ್ಲಿಷ್ ಲೋಕ, ವೈದ್ಯಕೀಯ ವಿದ್ಯಾರ್ಥಿಗಳು ಯಾವಾಗಲೂ ಇಂಗ್ಲಿಷ್ ನಲ್ಲಿಯೇ ವ್ಯವಹರಿಸುತ್ತಾರೆ, ಕನ್ನಡ ಅಷ್ಟಕ್ಕಷ್ಟೆ ಎನ್ನುವ ಮನೋಭಾವ ಜನಸಾಮಾನ್ಯರಲ್ಲಿದೆ. ಕನ್ನಡದ ಹೆಸರಿನಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿಸುವ ವಿದ್ಯಾರ್ಥಿಗಳ ಸಂಘವೊಂದು ಇಲ್ಲಿನ ಕೆಂಎಸಿಆರ್‌ಐ(ಕಿಮ್ಸ್) ವೈದ್ಯಕೀಯ ಸಂಸ್ಥೆಯಲ್ಲಿದೆ. 

ಹೌದು, ಇಲ್ಲಿನ ಕೆಂಎಸಿಆರ್‌ಐ ಕನ್ನಡ ಸಂಘ ಪ್ರತಿವರ್ಷ ಒಂದೊಂದು ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ‘ಕನ್ನಡ ಹಬ್ಬ’ ಎಂಬ ಆಶಯದಡಿ ಕಾರ್ಯಕ್ರಮ ನಡೆಯುತ್ತದೆ. ಕೆಲ ವರ್ಷಗಳಿಂದ ಪ್ರತಿ ಬಾರಿಯ ಕಾರ್ಯಕ್ರಮಕ್ಕೂ ಒಂದೊಂದು ಹೆಸರಿಡಲಾಗುತ್ತದೆ. ಈ ವರ್ಷದ ಕಾರ್ಯಕ್ರಮ ‘ಡಿಂಡಿಮ’ ಹೆಸರಿನಲ್ಲಿ ಜುಲೈನಲ್ಲಿ ನಡೆದಿತ್ತು. ಆ ದಿನ ಸಂಸ್ಥೆಯ ಇಡೀ ವಾತಾವರಣ ಕನ್ನಡದ ಕಂಪಿನಿಂದ ಕಂಗೊಳಿಸುತ್ತಿತ್ತು. ಅಕ್ಷರಶಃ ಹಬ್ಬದ ಅನುಭವ ನೀಡುವಂತೆ ಇಡೀ ವಾತಾವರಣವನ್ನು ವಿದ್ಯಾರ್ಥಿಗಳು ಅಲಂಕರಿಸಿದ್ದರು.

ಕೆಂಎಸಿಆರ್‌ಐ ಕನ್ನಡ ಸಂಘಕ್ಕೆ ದೀರ್ಘ ಇತಿಹಾಸವೇ ಇದೆ. 1957ರಲ್ಲಿ ಸಂಸ್ಥೆ ಆರಂಭವಾಗಿದ್ದು, ಆಗಲೇ ವಿದ್ಯಾರ್ಥಿ ಸಂಘ ರಚನೆಯಾಗಿತ್ತು. ಕನ್ನಡ ಸಂಘವು ವಿದ್ಯಾರ್ಥಿ ಸಂಘದ ಒಂದು ಭಾಗ ಎನ್ನುತ್ತಾರೆ ಕೆಂಎಸಿಆರ್‌ಐ ನೇತ್ರತಜ್ಞ ಡಾ.ರಾಜಶೇಖರ ದ್ಯಾಬೇರಿ.

ADVERTISEMENT

ಕನ್ನಡ ಸಾಹಿತ್ಯದ ಮೈಲಿಗಲ್ಲು, ಹೆಸರಾಂತ ಲೇಖಕರು, ನಾಡು, ನುಡಿ, ಭಾಷೆಗೆ ಸಂಬಂಧಪಟ್ಟ ಕಲಾಕೃತಿ, ಭಿತ್ತಿಪತ್ರ, ಚಿತ್ರಗಳನ್ನು ರಚಿಸಿ ಸಂಸ್ಥೆಯ ಗೋಡೆಗಳಲ್ಲಿ ಅಂಟಿಸಲಾಗುತ್ತದೆ. ಕರಕುಶಲ ವಸ್ತುಗಳನ್ನು ತಯಾರಿಸಿ ಅದಕ್ಕೆ ಬಣ್ಣ ಹಚ್ಚಿ ಚಂದ ಕಾಣುವಂತೆ ಜೋಡಿಸಿಡುತ್ತಾರೆ. ಸಂಸ್ಥೆಯೊಳಗೆ ಕಾಲಿಟ್ಟಂತೆ ಗಮನ ಸೆಳೆಯುವ ಹಾಗೆ, ತಮ್ಮ ಕಾರ್ಯಕ್ರಮದೆಡೆಗೆ ಸೆಳೆಯುವಂತೆ ಮಾಡುವ ಎಲ್ಲ ಪ್ರಯತ್ನಗಳನ್ನು ಅಲ್ಲಿ ಕಾಣಲು ಸಾಧ್ಯ. 

ಕಲೆ, ಸಂಸ್ಕೃತಿಗೆ ಆದ್ಯತೆ: ಕರ್ನಾಟಕದ ಕಲಾ ಪರಂಪರೆ ಬೃಹತ್ತಾದುದು. ಕನ್ನಡ ಹಬ್ಬದ ಮೆರವಣಿಗೆಯಲ್ಲಿ ಪ್ರಮುಖವಾದ, ಅದರಲ್ಲೂ ಉತ್ತರ ಕರ್ನಾಟಕ ಭಾಗದ ಹಲವು ಕಲಾ ಪ್ರದರ್ಶನಗಳನ್ನು ಕಣ್ತುಂಬಿಕೊಳ್ಳಬಹುದು. ಡೊಳ್ಳು ಕುಣಿತ, ಜಗ್ಗಲಗಿ ಮೇಳ, ಕುದುರೆ ಕುಣಿತ, ಬೊಂಬೆ ಆಟ ಮೆರವಣಿಗೆಗೆ ಮೆರುಗು ನೀಡಿದರೆ, ಗೀಗೀ ಪದ, ಸೋಬಾನೆ ಪದ, ಸಾಮೂಹಿಕ ನೃತ್ಯ, ತಿಳಿಹಾಸ್ಯ, ಶಹನಾಯಿ ವಾದನ, ಕೊಳಲು ವಾದನ, ಜಾನಪದ ಗೀತೆ, ತತ್ವಪದ, ಡೊಳ್ಳಿನ ಪದ ಭಾವಗೀತೆ, ವಾದ್ಯ ಸಂಗೀತ ವೇದಿಕೆಯ ರಂಗೇರಿಸುತ್ತವೆ.

30ಕ್ಕೂ ಅಧಿಕ ಸ್ಪರ್ಧೆ: ಈ ಕಾರ್ಯಕ್ರಮಕ್ಕೆ ಸಂಬಂಧಿಸಿ 30ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯುತ್ತವೆ ಎಂಬುದೇ ವಿಶೇಷ. ಪ್ರತಿ ಸ್ಪರ್ಧೆಗೂ ಒಂದೊಂದು ಸುಂದರ ಹೆಸರು ನೀಡಲಾಗುತ್ತದೆ. ಪದಬಂಧ, ಆಶುಭಾಷಣ, ಪ್ರಬಂಧ ಸ್ಪರ್ಧೆ, ಕತೆ, ಕಾವ್ಯ ಸ್ಪರ್ಧೆ, ಚರ್ಚೆ, ಪ್ರೇಮಪತ್ರ ಬರಹ, ರಂಗೋಲಿ, ಭಿತ್ತಿಚಿತ್ರ ರಚನೆ, ಘೋಷಣೆ ಬರಹ, ಮದರಂಗಿ, ರಸಪ್ರಶ್ನೆ, ಮುಖವರ್ಣ ಕಲೆ, ಫೋಟೊಗ್ರಾಫಿ ಮುಂತಾದ ಇನ್ನೂ ಹಲವು ಸ್ಪರ್ಧೆಗಳಿರುತ್ತವೆ.

ಅತಿಥಿಗಳ ಆಯ್ಕೆ, ಕಾರ್ಯಕ್ರಮದ ರೂಪುರೇಷೆ ಸಂಘದ ವಿದ್ಯಾರ್ಥಿಗಳು ಹಾಗೂ ನಿರ್ದೇಶಕರಿಂದ ನಡೆಯುತ್ತದೆ. ವಿದ್ಯಾರ್ಥಿಗಳು ಸಂಗ್ರಹಿಸಿಡುವ ಸಂಘದ ಹಣವನ್ನೇ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ. ಸಂಜೆಯ ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಕನ್ನಡ ಹಬ್ಬದ ಆಕರ್ಷಣೆ. ನಾಡಿನ ಖ್ಯಾತ ಗಾಯಕರು, ನಟರು, ಸಾಹಿತಿಗಳು, ಜಾನಪದ ಹಾಡುಗಾರರನ್ನು ಅತಿಥಿಗಳಾಗಿ ಆಹ್ವಾನಿಸಿ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎನ್ನುತ್ತಾರೆ ಕನ್ನಡ ಸಂಘದ ಸಹ ಕಾರ್ಯದರ್ಶಿ ಟಿ.ಪಿ.ನಿರಂಜನ ಕುಮಾರ್‌

ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿರುವ ಕನ್ನಡ ಹಬ್ಬ, ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೂ ಒಡ್ಡಿಕೊಂಡು ಮುಂದೆ ಸಾಗುತ್ತಿದೆ. ‘ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು, ಕೊನೆಯನೆಂದೂ ಮುಟ್ಟದಿರು’ ಎನ್ನುವ ಕುವೆಂಪು ಅವರ ‘ಅನಿಕೇತನ’ದ ಸಾಲುಗಳಂತೆ ‘ಕನ್ನಡ ಹಬ್ಬ’ದ ಹೆಜ್ಜೆಗುರುತು ಮೂಡುತ್ತ ಬಂದಿರುವುದು ವಿಶೇಷ.

ಕನ್ನಡ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಸಭಾಂಗಣದ ಹೊರಗಡೆ ಅಲಂಕಾರ ಮಾಡಿರುವುದು
ಕೆಂಎಸಿಆರ್‌ಐ ಕನ್ನಡ ಸಂಘದ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆಯಾಗಿದೆ. ಮಾತೃಭಾಷೆಯ ಬೆಗಗಿನ ಅಭಿಮಾನ ಇದ್ದಾಗ ಇಂತಹ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಸಿಬ್ಬಂದಿ ವಿದ್ಯಾರ್ಥಿಗಳ ಶ್ರಮ ಇದರ ಹಿಂದಿದೆ
ಡಾ.ಎಸ್‌.ಎಫ್‌.ಕಮ್ಮಾರ ನಿರ್ದೇಶಕ ಕೆಂಎಸಿಆರ್‌ಐ.
ಕನ್ನಡ ಮಾತನಾಡುವವರ ಸಂಖ್ಯೆ ನಮ್ಮ ನಾಡಿನಲ್ಲಿ ಕ್ಷೀಣಿಸುತ್ತಿರುವುದು ಬೇಸರದ ಸಂಗತಿ. ಹುಬ್ಬಳ್ಳಿಯಲ್ಲಿ ಹೋಟೆಲ್‌ಗಳಿಗೆ ಕಾಲಿಟ್ಟರೆ ಸಾಕು ನಮ್ಮವರೇ ಹಿಂದಿಯಲ್ಲಿ ಮಾತು ಶುರು ಮಾಡುತ್ತಾರೆ. ಇಂತಹ ಸ್ಥಿತಿಯ ನಡುವೆ ನಮ್ಮ ಕಾರ್ಯಕ್ರಮದ ಕನ್ನಡ ಉಳಿಸುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಖುಷಿಯಿದೆ
–ಡಾ.ಶ್ಯಾಮಸುಂದರ್‌ ಅಧ್ಯಕ್ಷ ಕೆಂಎಸಿಆರ್‌ಐ ಕನ್ನಡ ಸಂಘ
‘ಹೊರರಾಜ್ಯದವರ ಒಳಗೊಳ್ಳುವಿಕೆ’
ಕನ್ನಡ ಹಬ್ಬದ ವಿಶೇಷ ಎಂದರೆ ಈ ಕಾರ್ಯಕ್ರಮದಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇಡೀ ಸಂಸ್ಥೆ ಹಬ್ಬದಂತೆ ಆಚರಿಸುವುದರಿಂದ ದೆಹಲಿ ರಾಜಸ್ತಾನ ಮಧ್ಯ‍ಪ್ರದೇಶ ಕೇರಳ ಮುಂತಾದ ರಾಜ್ಯಗಳ ವಿದ್ಯಾರ್ಥಿಗಳನ್ನು ಒಳಗೊಂಡು ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಪರಭಾಷಿಕರಿಗಾಗಿ ಆಯೋಜಿಸುವ ‘ನೀನ್ ಎಷ್ಟು ಕನ್ನಡವ ಬಲ್ಲೆ?’ ಎಂಬ ಸ್ಪರ್ಧೆ ಇಲ್ಲಿನ ಇನ್ನೊಂದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.