ADVERTISEMENT

ದುರಾಡಳಿತದಿಂದ ಸರ್ಕಾರ ದಿವಾಳಿ: ಕಾಂಗ್ರೆಸ್ ಮುಖಂಡ ಬಸವರಾಜ ರಾಯರಡ್ಡಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 11:36 IST
Last Updated 19 ಸೆಪ್ಟೆಂಬರ್ 2020, 11:36 IST
ಬಸವರಾಜ ರಾಯರೆಡ್ಡಿ
ಬಸವರಾಜ ರಾಯರೆಡ್ಡಿ   

ಹುಬ್ಬಳ್ಳಿ: ‘ಆಡಳಿತ ವೈಫಲ್ಯ ಹಾಗೂ ದುರಾಡಳಿತದಿಂದಾಗಿ ರಾಜ್ಯದ ಬಿಜೆಪಿ ಸರ್ಕಾರ ದಿವಾಳಿಯಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ರಾಯರಡ್ಡಿ ವಾಗ್ದಾಳಿ ನಡೆಸಿದರು.

‘ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಆರ್ಥಿಕ ಶಿಸ್ತು ಹಳಿ ತಪ್ಪಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಅಂದಾಜು ₹1.26 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗದೆ, ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಆದಾಯ ಸಂಗ್ರಹ ಹಾಗೂ ವಾಣಿಜ್ಯೋದ್ಯಮದ ಚಟುವಟಿಕೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 2009-2010ರಲ್ಲೂ ಬಿಜೆಪಿ ಸರ್ಕಾರ ರಾಜ್ಯದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ಕೊಂಡೊಯ್ದಿತ್ತು. ಅಲ್ಲದೆ, ಕೇಂದ್ರ ಸರ್ಕಾರದಿಂದಲೂ ಯಾವುದೇ ಅನುದಾನ ಬರುತ್ತಿಲ್ಲ. ಇದು ರಾಜ್ಯವನ್ನು ಮತ್ತಷ್ಟು ಸಂಕಷ್ಟಕ್ಕೆ ತಲುಪಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ರಾಜ್ಯಕ್ಕೆ ಕೊಡಬೇಕಾದ ಹಣವನ್ನೂ ಕೊಡುತ್ತಿಲ್ಲ.ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗಾಗಿದೆಹಲಿಗೆ ಹೋಗುತ್ತಾರೆಯೇ ಹೊರತು, ಅಭಿವೃದ್ಧಿ ಬಗ್ಗೆ ಮಾತನಾಡುವುದಕ್ಕಲ್ಲ. ಮುಖ್ಯಮಂತ್ರಿ ಪುತ್ರರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಆದ್ದರಿಂದ ಇವರು ಅಧಿಕಾರ ಬಿಟ್ಟು ಹೋಗುವುದೇ ಒಳ್ಳೆಯದು’ ಎಂದು ಒತ್ತಾಯಿಸಿದರು.

ಪಕ್ಷದಿಂದ ಕಿತ್ತಾಕಿ ಎನ್ನುವೆ

‘ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರು ಕೇಳಿ ಬಂದರೆ, ಅಂತಹವರನ್ನು ಪಕ್ಷದಿಂದ ಕಿತ್ತು ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಹೇಳವೆ. ನಾನೂ ಸೇರಿದಂತೆ, ಯಾರೇ ಮಾಡಿದರೂ ತಪ್ಪು ತಪ್ಪೆ. ಹಾಗಾಗಿ, ಪ್ರಕರಣದ ಬಗ್ಗೆ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ದಂಧೆಯಲ್ಲಿ ಭಾಗಿಯಾದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.