
ಗದುಗಿನ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಮಕ್ಕಳ ದಿನಾಚರಣೆ ಹಾಗೂ ಪೋಷಕ– ಶಿಕ್ಷಕರ ಮಹಾಸಭೆಯನ್ನು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಉದ್ಘಾಟಿಸಿದರು
ಗದಗ: ‘ಸರ್ಕಾರಿ ಶಾಲೆಗಳಲ್ಲಿ ಓದಿದವರು ವೈವಿಧ್ಯ ಯೋಚನಾಶಕ್ತಿ ಹೊಂದಿದವರಾಗಿರುತ್ತಾರೆ. ಆ ಪ್ರವೃತ್ತಿ ಜೀವನದಲ್ಲಿ ಅವರನ್ನು ಬಲಿಷ್ಠವಾಗಿ ನಿಲ್ಲುವ ಹಾಗೂ ದೃಢನಿರ್ಧಾರ ತೆಗೆದುಗೊಳ್ಳುವ ಶಕ್ತಿ ಮೈಗೂಡಿಸುತ್ತದೆ. ವಿದ್ಯೆ ಮಕ್ಕಳಿಗೆ ಪುಸ್ತಕದ ಜ್ಞಾನ ನೀಡಿದರೆ; ಬುದ್ಧಿವಂತಿಕೆ ಜೀವನದಲ್ಲಿ ಎಡವದಂತೆ ಮುನ್ನಡೆಸುತ್ತದೆ. ಹಾಗಾಗಿ, ಮಕ್ಕಳು ವಿದ್ಯಾವಂತರಾಗುವುದರ ಜತೆಗೆ ಬುದ್ಧಿವಂತರೂ ಆಗಬೇಕು’ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಶಹರ ವಲಯದ ಸಹಯೋಗದಲ್ಲಿ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಮಕ್ಕಳ ದಿನಾಚರಣೆ ಹಾಗೂ ಪೋಷಕ– ಶಿಕ್ಷಕರ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
‘ಶಿಕ್ಷಕ ಮಕ್ಕಳನ್ನು ತಿದ್ದುವ ಮಾಂತ್ರಿಕನಿದ್ದಂತೆ. ಶಾಲೆಗಳಲ್ಲಿ ನಾಳೆಯನ್ನು ಕಾಣುವವರು ನಾವುಗಳಾದರೆ; ಮಕ್ಕಳ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾರೆ ಜಮೀನ್ ಪರ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ಕಿಟ್ ವಿತರಿಸಲಾಯಿತು.
ಅವ್ವ ಟ್ರಸ್ಟ್ ರಾಜ್ಯ ಸಂಚಾಲಕ ಬಸವರಾಜ ಧಾರವಾಡ, ಎಸ್‌ಡಿಎಂಸಿ ಅಧ್ಯಕ್ಷೆ ನಂದಾ ಕಟವಟಿ, ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ವಯಸ್ಕರ ಶಿಕ್ಷಣಾಧಿಕಾರಿ ಶಿವಕುಮಾರ ಕುರಿಯವರ, ಬಿಇಒ ರವಿಂದ್ರ ಶೆಟ್ಟೆಪ್ಪನವರ, ವಾರ್ತಾಧಿಕಾರಿ ವಸಂತ ಮಡ್ಲೂರ, ರವಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಜೆ.ಬಿ.ಅಣ್ಣಿಗೇರಿ, ನಗರಸಭೆಯ ಪರಿಸರ ಅಧಿಕಾರಿ ಆನಂದ ಬದಿ, ಶಾಲಾ ವಿದ್ಯಾರ್ಥಿ ಸಂಘಗಳ ಪ್ರಧಾನಿ ರುತ್ತೂರ ಗೌಡ, ಉಪಪ್ರಧಾನಿ ತೇಜಸ್ವಿನಿ ಕಟಗಿ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.
ಮಕ್ಕಳು ಶ್ರದ್ಧೆಯಿಂದ ಅಭ್ಯಾಸ ಮಾಡುವ ದೃಢ ನಿರ್ಧಾರ ಕೈಗೊಂಡರೆ; ಮುಂದಿನ ಜೀವನ ಉತ್ತಮವಾಗಿ ಇರಲಿದೆ–ಸಿ.ಎನ್.ಶ್ರೀಧರ್ ಜಿಲ್ಲಾಧಿಕಾರಿ
ಮಕ್ಕಳ ಹಕ್ಕುಗಳು ವಿವಿಧ ಕಾಯ್ದೆಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವುದು ಆರ್‌ಟಿಐ ಪೊಸ್ಕೋ ಮಕ್ಕಳ ರಕ್ಷಣಾ ನೀತಿ ಬಾಲ್ಯ ವಿವಾಹ ನಿಷೇಧ ಬಾಲ ಕಾರ್ಮಿಕ ಪದ್ಧತಿ ಕುರಿತು ತಿಳಿಸಿಕೊಡುವ ಸಂಗಮವೇ ಈ ಮಹಾಸಭೆ.ಆರ್.ಎಸ್.ಬುರುಡಿ ಡಿಡಿಪಿಐ
‘ಮಕ್ಕಳ ಕನಸುಗಳಿಗೆ ಗೌರವ ನೀಡುದ ದಿನ’
‘ಮಕ್ಕಳ ಹಕ್ಕುಗಳಿಗೆ ಹಾಗೂ ಅವರ ಕನಸುಗಳಿಗೆ ಗೌರವ ನೀಡುವ ದಿನ ಇದಾಗಿದೆ. ಈ ವಿಶೇಷ ದಿನವನ್ನು ಭಾರತದ ಪ್ರಥಮ ಪ್ರಧಾನಿ ನೆಹರೂ ಅವರ ಜನ್ಮದಿನಾಚರಣೆ ಅಂಗವಾಗಿ ಆಚರಿಸುತ್ತೇವೆ’ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್.ಬುರುಡಿ ಹೇಳಿದರು. ‘ನೆಹರೂ ಮಕ್ಕಳನ್ನು ಮನಸಾರೆ ಪ್ರೀತಿಸುತ್ತಿದ್ದರು. ಮಕ್ಕಳ ಖುಷಿಯಲ್ಲಿ ರಾಷ್ಟ್ರದ ಭವಿಷ್ಯ ಅಡಗಿದೆ ಎಂದು ಪದೇಪದೇ ಹೇಳುತ್ತಿದ್ದರು’ ಎಂದರು. ‘ಮಕ್ಕಳ ದಿನಾಚರಣೆ ಅಂಗವಾಗಿ ಪಾಲಕ– ಶಿಕ್ಷಕರ ಮಹಾಸಭೆಯನ್ನು ಈ ವರ್ಷ ಎಲ್ಲ ಶಾಲೆಗಳಲ್ಲಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪ್ರಗತಿಯನ್ನು ಪೋಷಕರಿಗೆ ತಿಳಿಸುವುದು ಇದರ ಮುಖ್ಯ ಉದ್ದೇಶ. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.