ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಬಗರ್‌ಹುಕುಂ ರೈತರು ಜಿಲ್ಲಾಡಳಿತ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ 14 ದಿನಗಳನ್ನು ಪೂರ್ಣಗೊಳಿಸಿದ್ದು, ಹೋರಾಟಕ್ಕೆ ಸ್ಪಂದಿಸದ ಸರ್ಕಾರದ ಧೋರಣೆ ಖಂಡಿಸಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ರೈತರು ಸೋಮವಾರ ನಿರ್ಣಯಿಸಿದರು.
ಉತ್ತರ ಕರ್ನಾಟಕ ಮಹಾಸಭಾದ ನೇತೃತ್ವದಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಸೋಮವಾರ ನಡೆದ ರೈತರ ಸಭೆಯಲ್ಲಿ ಸರ್ಕಾರದ ರೈತ ವಿರೋಧಿ ಧೋರಣೆಗೆ ಖಂಡನೆ ವ್ಯಕ್ತಪಡಿಸಲಾಯಿತು.
‘ಜಿಲ್ಲೆಯ ಬಗರ್‌ಹುಕುಂ ಸಾಗುವಳಿದಾರರು ಹಾಗೂ ನಾಗಾವಿ ಬಳಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯಕ್ಕಾಗಿ ತಮ್ಮ ಜಮೀನುಗಳನ್ನು ಕಳೆದುಕೊಂಡಿದ್ದು, ಅವರಿಗೆ ತಕ್ಷಣ ನ್ಯಾಯ ಒದಗಿಸಬೇಕು. 2023ರಲ್ಲಿ ಇದೇರೀತಿಯ ಅಹೋರಾತ್ರಿ ಧರಣಿ ನಡೆದಾಗ ಸಚಿವ ಎಚ್.ಕೆ.ಪಾಟೀಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ ಇಂದಿಗೂ ಆ ಭರವಸೆ ಕಾಗದದಲ್ಲೇ ಉಳಿದಿದೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
‘ರೈತರ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು. ಇಲ್ಲದಿದ್ದರೆ ರಸ್ತೆ ರೋಖೊ, ಅರೆಬೆತ್ತಲೆ ಚಳವಳಿ, ದೀಢ್ ನಮಸ್ಕಾರ ಮತ್ತು ಕೊನೆಯದಾಗಿ ದಯಾಮರಣದ ಮನವಿ ಸೇರಿದಂತೆ ಹಲವು ಹೋರಾಟಗಳನ್ನು ಕೈಗೊಳ್ಳುತ್ತೇವೆ. ಅಗತ್ಯವಿದ್ದರೆ ಉಸ್ತುವಾರಿ ಸಚಿವರ ಮನೆಗೆ ಮುತ್ತಿಗೆ ಹಾಕುವ ನಿರ್ಧಾರವನ್ನೂ ಕೈಗೊಳ್ಳಬಹುದು’ ಎಂದು ರೈತರು ಘೋಷಿಸಿದರು.
ಇನ್ನು ಎರಡು ದಿನಗಳ ಕಾಲ ಶಾಂತಿಯುತ ಹೋರಾಟ ಮುಂದುವರಿಸಿ, ಗುರುವಾರ ಜಿಲ್ಲಾಧಿಕಾರಿಗೆ ದಯಾಮರಣಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ರೈತ ಮುಖಂಡರಾದ ಎನ್.ಟಿ. ಪೂಜಾರ, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ್, ಫಿರೋಜ್ ನದಾಫ್ ಸೇರಿದಂತೆ ಜಿಲ್ಲೆಯ ಅನೇಕ ರೈತರು, ಮಹಿಳೆಯರು ಹಾಗೂ ಹೋರಾಟಗಾರರು ಇದ್ದರು.
ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಮಾತಿನಂತೆ ನಡೆದುಕೊಳ್ಳಬೇಕು. ನಮ್ಮ ನ್ಯಾಯಸಮ್ಮತ ಬೇಡಿಕೆಗಳಿಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟದ ರೂಪರೇಷೆ ಬದಲಾಗುತ್ತದೆರವಿಕಾಂತ ಅಂಗಡಿ ಉತ್ತರ ಕರ್ನಾಟಕ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ
ರೈತವಿರೋಧಿ ನಿಲುವು: ಆರೋಪ
‘ರೈತರ ಹೋರಾಟ ಸಂಪೂರ್ಣ ನ್ಯಾಯಯುತವಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ರೈತರ ಪರವಾಗಿಲ್ಲದ ನಿಲುವು ತಾಳುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ಚಿಂಚಲಿ ಆರೋಪ ಮಾಡಿದರು. ‘14 ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸಚಿವರು ತಿರುಗಿ ನೋಡಿಲ್ಲ. ಇದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ. ನಾವು ಯಾವುದಕ್ಕೂ ಜಗ್ಗಲ್ಲ ಬಗ್ಗಲ್ಲ. ಇನ್ನು ಎರಡು ದಿನ ಶಾಂತಿಯುತ ಹೋರಾಟ ನಡೆಸುತ್ತೇವೆ. ನಂತರ ಸರ್ಕಾರ ಸ್ಪಂದಿಸದಿದ್ದರೆ ದಯಾಮರಣಕ್ಕೆ ಮನವಿ ಸಲ್ಲಿಸುತ್ತೇವೆ’ ಎಂದು ಎಚ್ಚರಿಸಿದರು. ‘ಎಚ್.ಕೆ. ಪಾಟೀಲರು ತಮ್ಮ ಪ್ರಭಾವ ಬಳಸಿ ರೈತರಿಗೆ ನೀಡಿದ ಭರವಸೆಯನ್ನು ತಕ್ಷಣ ಈಡೇರಿಸಬೇಕು. ಸರ್ಕಾರದ ಮಟ್ಟದಲ್ಲಿ ಬಗೆಹರಿಸುವ ಸಾಧ್ಯತೆ ಇಲ್ಲದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಿ’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.