
ಗಜೇಂದ್ರಗಡ: ಸಮೀಪದ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲ್‌ಝರಿ ಗ್ರಾಮದಲ್ಲಿನ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ. ರಸ್ತೆಗಳ ಪಕ್ಕದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಸೊಳ್ಳೆಗಳ ಕಾಟಕ್ಕೆ ಸಾರ್ವಜನಿಕರು ಬೇಸತ್ತಿದ್ದಾರೆ.
ಪಟ್ಟಣದಿಂದ ಸುಮಾರು 5 ಕಿಮೀ. ದೂರದಲ್ಲಿರುವ ಚಿಲ್‌ಝರಿ ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿವೆ. ಗ್ರಾಮದ ಶರಣಬಸವೇಶ್ವರ ದೇವಸ್ಥಾನ, ಮುಧೋಳ ರಸ್ತೆ, ಅಂಬೇಡ್ಕರ್ ನಗರದ ಚರಂಡಿಗಳು ಸಂಪೂರ್ಣ ಹೂಳು ತುಂಬಿಕೊಂಡು ಗಬ್ಬೇದ್ದು ನಾರುತ್ತಿವೆ.
ಗ್ರಾಮದಲ್ಲಿರುವ ಸಿಸಿ ರಸ್ತೆಗಳಲ್ಲಿ ಅಲ್ಲಲ್ಲಿ ಒಡೆದಿದ್ದು, ಕೊಳಚೆ ನೀರು ಸಂಗ್ರಹವಾಗಿ ಜನರ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಗಜೇಂದ್ರಗಡದಿಂದ ಚಿಲ್‌ಝರಿ ಗ್ರಾಮದಿಂದ ಮುಧೋಳ ಪಟ್ಟಣಕ್ಕೆ ಸಂಪರ್ಕಿಸುವ ಡಾಂಬರ್ ರಸ್ತೆಯಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಸಂಪೂರ್ಣ ಹಾಳಾಗಿದೆ.
‘ದೊಡ್ಡ ಚರಂಡಿಗಳು ಸಂಪೂರ್ಣ ಹೂಳು ತುಂಬಿಕೊಂಡು ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಹಲವು ಚರಂಡಿಗಳು ಶಿಥಿಲಗೊಂಡಿವೆ. ಕಳೆದ ಏಪ್ರೀಲ್ ತಿಂಗಳಲ್ಲಿ ಚರಂಡಿ ಸ್ವಚ್ಛಗೊಳಿಸಿದ್ದು ಬಿಟ್ಟರೆ ಈ ವರೆಗೂ ಮತ್ತೆ ಸ್ವಚ್ಛತೆ ಕಾರ್ಯ ನಡೆದಿಲ್ಲ’ ಎಂದು ಸ್ಥಳೀಯ ನಿವಾಸಿಗಳು ಅಲವತ್ತುಕೊಂಡರು.
ಗ್ರಾಮದಲ್ಲಿ ಸ್ವಚ್ಛತೆಗೆ ಸಂಬಂಧಪಟ್ಟ ಕಾಮಗಾರಿಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸಕಾಲದಲ್ಲಿ ಕಾಮಗಾರಿಗಳ ಬಿಲ್ ಪಾವತಿಸುತ್ತಿಲ್ಲ. ಹೀಗಾಗಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲಚಿನ್ನಮ್ಮ ಈಶಪ್ಪ ಉಪ್ಪಾರ ಗ್ರಾಮ ಪಂಚಾಯ್ತಿ ಸದಸ್ಯ ಚಿಲ್‌ಝರಿ
ಈ ಹಿಂದೆ ನಡೆಸಿದ ಕಾಮಗಾರಿಗಳ ಬಿಲ್ ಪಾವತಿಸಲಾಗಿದೆ. ಚಿಲ್‌ಝರಿ ಗ್ರಾಮದಲ್ಲಿ ಸ್ವಚ್ಛತೆ ಕೈಗೊಳ್ಳುವಂತೆ ಸೂಚಿಸಿದಾಗ ಪಂಚಾಯಿತಿ ಸದಸ್ಯರು ಗಮನ ಹರಿಸಲಿಲ್ಲ. ಗ್ರಾಮದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದುಶೇಖವ್ವ ಹನಮಪ್ಪ ಅಬ್ಬಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಮಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.