ADVERTISEMENT

ನರೇಗಲ್: | ಅನಧಿಕೃತ ನಳಗಳ ಹಾವಳಿ: ಆದಾಯಕ್ಕೂ ಕೊಕ್ಕೆ

17 ವಾರ್ಡ್‌ಗಳಲ್ಲಿ ಸಾವಿರಕ್ಕೂ ಹೆಚ್ಚು ತೆರಿಗೆ ತುಂಬದ ನಳಗಳು: ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ

ಪ್ರಜಾವಾಣಿ ವಿಶೇಷ
Published 17 ನವೆಂಬರ್ 2025, 5:06 IST
Last Updated 17 ನವೆಂಬರ್ 2025, 5:06 IST
ನರೇಗಲ್ ಪಟ್ಟಣದ ಸಾಯಿಬಾಬಾ ದೇವಸ್ಥಾನದ ಎದುರಲ್ಲಿ ನಿರ್ಮಿಸಲಾಗಿರುವ ಕುಡಿಯುವ ನೀರಿನ ಟ್ಯಾಂಕ್ ಬಳಕೆಯಾಗದೆ ಪಾಳು ಬಿದ್ದಿರುವುದು
ನರೇಗಲ್ ಪಟ್ಟಣದ ಸಾಯಿಬಾಬಾ ದೇವಸ್ಥಾನದ ಎದುರಲ್ಲಿ ನಿರ್ಮಿಸಲಾಗಿರುವ ಕುಡಿಯುವ ನೀರಿನ ಟ್ಯಾಂಕ್ ಬಳಕೆಯಾಗದೆ ಪಾಳು ಬಿದ್ದಿರುವುದು   

ನರೇಗಲ್:‌ ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ 17 ವಾರ್ಡ್‌ಗಳಲ್ಲಿ ಅನಧಿಕೃತ ನಳಗಳ ಹಾವಳಿ ಮಿತಿಮೀರಿದ್ದು, ಸ್ಥಳೀಯ ಆಡಳಿತದ ಆದಾಯಕ್ಕೂ ಕೊಕ್ಕೆ ಬಿದ್ದಿದೆ. ಇಲ್ಲಿನ ಬಹುತೇಕ ಮನೆಗಳ ನೀರು ಪೂರೈಕೆಯ ನಳಗಳು, ದೇವಸ್ಥಾನ, ಮಸೀದಿ, ಸಂಘ ಸಂಸ್ಥೆಯ ನಳಗಳು ಅನಧಿಕೃತವಾಗಿವೆ.  

ಅದೇರೀತಿ, ನರೇಗಲ್‌ ಪಟ್ಟಣ ಮತ್ತು ಮಜರೇ ಹಳ್ಳಿಗಳಾದ ಕೋಚಲಾಪುರ, ಕೋಡಿಕೊಪ್ಪ, ತೋಟಗಂಟಿ, ಮಲ್ಲಾಪುರ, ದ್ಯಾಂಪುರಗಳಲ್ಲಿ ಅಂದಾಜು ಸಾವಿರಕ್ಕೂ ಹೆಚ್ಚು ಅನಧಿಕೃತ ನಳಗಳಿವೆ. 

ಪಟ್ಟಣ ಪಂಚಾಯಿತಿಯಲ್ಲಿ ಈವರೆಗೆ ಅಧಿಕಾರ ನಡೆಸಿದ ಚುನಾಯಿತ ಜನಪ್ರತಿನಿಧಿಗಳು ಹಾಗೂ ಕೆಲಸ ನಿರ್ವಹಿಸಿದ ಅಧಿಕಾರಿಗಳು ಅನಧಿಕೃತ ನಳಗಳನ್ನು ಅಧಿಕೃತ ಮಾಡಿಕೊಂಡು ಆದಾಯ ಹೆಚ್ಚಿಸಿಕೊಳ್ಳುವ ಹಾಗೂ ಅವುಗಳಿಗೆ ಕಡಿವಾಣ ಹಾಕುವ ಗೋಜಿಗೆ ಹೋಗಿಲ್ಲ ಎನ್ನುವುದು ವಿಪರ್ಯಾಸವಾಗಿದೆ.

ADVERTISEMENT

ಜನರು ಮನೆ ಬಳಕೆಗೆ ಕುಡಿಯಲು ಬಳಕೆ ಮಾಡುವ ಹಾಗೂ ವ್ಯಾಪರಸ್ಥರು ವ್ಯವಹಾರಕ್ಕಾಗಿ ಬಳಕೆ ಮಾಡುವ ವಾಣಿಜ್ಯ ಉದ್ದೇಶದ ನಳಗಳ ಸಂಖ್ಯೆ ಮತ್ತು ಅದರ ಮಾಹಿತಿಯನ್ನು ಪಟ್ಟಣ ಪಂಚಾಯಿತಿಯವರು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಇದರಿಂದ ಸಂಗ್ರಹವಾಗಿರುವ ಆದಾಯದ ಬಗ್ಗೆಯೂ ಮಾಹಿತಿ ಇಲ್ಲವಾಗಿದೆ. ಜನರಿಗೆ ದುಡ್ಡು ಕಟ್ಟದೆ ನೀರು ಸಿಗುತ್ತಿರುವ ಕಾರಣ ಬೇಕಾಬಿಟ್ಟಿಯಾಗಿ ಬಳಕೆ ಮಾಡುತ್ತಿದ್ದಾರೆ.

ಮೂರನೇ ವಾರ್ಡ್‌ ಆಶ್ರಯ ಕಾಲೊನಿ, ಬುಲ್ಡೋಜರ್‌ ನಗರ, ಏಳನೇ ವಾರ್ಡ್‌ ದ್ಯಾಂಪುರ, ಭಾಗ್ಯನಗರ, ಗ್ರಾಮದ ಹೃದಯ ಭಾಗದ ಕಾಲೊನಿಯ ಬಹುತೇಕ ನಳಗಳಿಗೆ ಇಂದಿಗೂ ಮುಚ್ಚಳವನ್ನು (ಕ್ಯಾಪ್) ಅಳವಡಿಸಿಲ್ಲ. ಇದರಿಂದ ಅನವಶ್ಯಕವಾಗಿ ನೀರು ಪೋಲಾಗಿ, ಚರಂಡಿ ಸೇರುತ್ತಿದೆ. ಇಂತಹ ಅವ್ಯವಸ್ಥೆಗಳು ಕಂಡರೂ ಕಾಣದಂತೆ ಪಟ್ಟಣ ಪಂಚಾಯಿತಿಯವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ನೀರು ಹರಿದು ಪೋಲಾಗುವುದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವಂತೆ ಜನರು ಮುಚ್ಚಳ ಅಳವಡಿಸದೇ ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಇದರಿಂದಾಗಿ ಅಮೂಲ್ಯವಾದ ನೀರು ಅಪಾರ ಪ್ರಮಾಣದಲ್ಲಿ ಪೋಲಾಗುತ್ತಿದೆ.

ಸೋರುತಿದೆ ನೀರಿನ ಟ್ಯಾಂಕ್: 2012–13ನೇ ಸಾಲಿನಲ್ಲಿ ಕರ್ನಾಟಕ ನಿರಾವರಿ ನಿಗಮದ ಕೆಡಬ್ಲ್ಯುಎಸ್ ವತಿಯಿಂದ ಅಂದಾಜು ₹50 ಲಕ್ಷ ವೆಚ್ಚದಲ್ಲಿ ದೊಡ್ಡದಾದ ನೀರಿನ ಟ್ಯಾಂಕ್‌ನ್ನು ಪಟ್ಟಣದ ಏಳನೇ ವಾರ್ಡ್‌ ಸರ್ಕಾರಿ ಆಸ್ಪತ್ರೆಯ ಸಮೀಪದಲ್ಲಿ ನಿರ್ಮಿಸಲಾಗಿದೆ. ಆದರೆ ಇಂದಿಗೂ ಉಪಯೋಗವಾಗದೆ ಪಾಳಬಿದ್ದಿದೆ.

ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ 9 ಕಡೆಗಳಲ್ಲಿ ಬಿರುಕು ಬಿಟ್ಟಿದ್ದು, ನೀರು ಸೋರುತ್ತಿದೆ. ಈಗಾಗಲೇ ಜಿಗಳೂರು ಕೆರೆ ನೀರು ತರುವ ಕಾರ್ಯ ಪೂರ್ಣಗೊಂಡಿದ್ದು ಪೈಪ್‌ಗಳನ್ನು ಅಳವಡಿಸಲಾಗಿದೆ. ಇದೇರೀತಿ ಪಟ್ಟಣದ ಏಳನೇ ವಾರ್ಡ್‌ನಲ್ಲಿ ಸಾಯಿಬಾಬಾ ದೇವಸ್ಥಾನದ ಎದುರು ದೊಡ್ಡದಾದ ಕುಡಿಯುವ ನೀರಿನ ಜಲ ಸಂಗ್ರಹಗಾರ (ನೀರಿನ ಟ್ಯಾಂಕ್) ಇಂದಿಗೂ ಉಪಯೋಗವಾಗದೆ ಪಾಳು ಬಿದ್ದಿದೆ. ಜಿಗಳೂರು ಕೆರೆಯಿಂದ ಸರಬರಾಜಾಗುವ ನೀರನ್ನು ಇಲ್ಲಿನ ಟ್ಯಾಂಕರ್‌ಗಳಲ್ಲಿ ಸಂಗ್ರಹಿಸಿದಾಗ ಕುಸಿದು ಬಿದ್ದು ತೊಂದರೆಗಳು ಸಂಭವಿಸಿದರೆ ಯಾರು ಹೊಣೆ ಎಂದು ಪ್ರಜ್ಞಾವಂತ ಸಾರ್ವಜನಿಕರು ಪ್ರಶ್ನಿಸುತ್ತಾರೆ.

ಒಂದೆಡೆ ನಳಗಳು ಅಧಿಕೃತವಿಲ್ಲ; ಇನ್ನೊಂದೆಡೆ ನೀರು ಸಂಗ್ರಹಿಸುವ ಟ್ಯಾಂಕರ್‌ಗಳು ಬಿರುಕು ಬಿಟ್ಟಿವೆ. ಇವುಗಳ ಸರಿಯಾದ ನಿರ್ವಹಣೆ ಯಾವಾಗ ಎಂದು ಜನರು ಕೇಳುತ್ತಾರೆ.

ಪಟ್ಟಣಕ್ಕೆ ಯಾವುದೇ ನೀರಿನ ಮೂಲಗಳಲ್ಲಿದ ಕಾರಣ ಜನರು ಟ್ಯಾಂಕರ್‌ ಹಾಗೂ ನಳಗಳ ಮೇಲೆ ಅವಲಂಬನೆಯಾಗಿದ್ದಾರೆ. ಬೇಸಿಗೆಯಲ್ಲಿ ಸಮಸ್ಯೆ ಉದ್ಭವಿಸಿದರೆ ಹೇಗೆ ಎಂಬುದರ ಕುರಿತು ಅಧಿಕಾರಿಗಳು ಕುರಿತು ಯೋಚಿಸದೇ ಇರುವುದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು ಪ್ರಜ್ಞಾವಂತರು ಆರೋಪಿಸಿದ್ದಾರೆ.

ಬಳಕೆಯ ನೀರು ಹಾಗೂ ಕುಡಿಯುವ ನೀರಿಗಾಗಿ ಜನ ಅಲ್ಲಿ ಇಲ್ಲಿ ಅಂತ ಸುತ್ತಾಡುತ್ತಿದ್ದಾರೆ. ಅದೇರೀತಿ ಬೇಸಿಗೆಯಲ್ಲಿ ಪಟ್ಟಣ ಪಂಚಾಯಿತಿಯಿಂದಲೂ ಸಹ ನೀರು ಪೂರೈಕೆ ಮಾಡಲು ಹರಸಾಹಸ ಪಡುತ್ತಾರೆ. ಇಷ್ಟೆಲ್ಲಾ ಸಮಸ್ಯೆಗಳು ಕಣ್ಮುಂದೆ ಇದ್ದರೂ ಕಾಮಗಾರಿ ಮುಗಿದು 12 ವರ್ಷಗಳು ಕಳೆದರೂ ಈವರೆಗೆ ನೀರಿನ ಟ್ಯಾಂಕ್ ಬಳಕೆಗೆ ಬಂದಿಲ್ಲ. ಇದರ ಸುತ್ತಲೂ ಜಾಲಿಯ ಗಿಡಗಂಟಿಗಳು ಬೆಳೆದು ನಿಂತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಪರಿಸ್ಥಿತಿಯನ್ನು ಅರಿತು ಅನಧಿಕೃತ ನಳಗಳಿಗೆ ಕಡಿವಾಣ ಹಾಕಬೇಕು. ಅವುಗಳನ್ನು ಅಧಿಕೃತಗೊಳಿಸಿ  ಮೀಟರ್‌ ಅಳವಡಿಸಿ, ಕರ ಸಂಗ್ರಹಿಸಬೇಕು. ನೀರಿನ ಟ್ಯಾಂಕ್‌ಗಳ ದುರಸ್ತಿ ಕೈಗೊಂಡು ಬಳೆಕೆಗೆ ಮುಂದಾಗಿ ಬೇಸಿಗೆಯಲ್ಲಿ ಉಂಟಾಗುವ ನೀರಿನ ದಾಹವನ್ನು ನೀಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ನರೇಗಲ್‌ ಪಟ್ಟಣದ ಜಕ್ಕಲಿ ಕ್ರಾಸ್‌ ಬಳಿ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಪೋಲಾಗಿ ಹರಿಯುತ್ತಿರುವ ನಳದ ನೀರು
ನರೇಗಲ್‌ ಮಜರೆ ದ್ಯಾಂಪುರ್‌ ನಲ್ಲಿ ಪೋಲಾಗಿ ಹರಿಯುತ್ತಿರುವ ನಳದ ನೀರು
ಅಧಿಕೃತಗೊಳಿಸಲು ಕ್ರಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2150ಕ್ಕೂ ಹೆಚ್ಚು ನಳಗಳ ಸಂಪರ್ಕ ನೀಡಲಾಗಿದೆ. ಅಧಿಕ ಸಂಖ್ಯೆಯಲ್ಲಿರುವ ಅನಧಿಕೃತ ನಳಗಳನ್ನು ಅಧಿಕೃತಗೊಳಿಸುವ ಪ್ರಕ್ರಿಯೆ ನಡೆದಿದೆ. ನಮ್ಮಲ್ಲಿ ನೀರಿನ ತೆರಿಗೆ ಸಂಗ್ರಹ ಕಡಿಮೆಯಿದೆ. ಸದ್ಯ ಪಟ್ಟಣದಲ್ಲಿ ನಡೆದಿರುವ ಮೊದಲ ಹಂತದ ಅಮೃತ 2.0 ಯೋಜನೆಯಡಿ 24/7 ನೀರು ಪೂರೈಸುವ ಕಾಮಗಾರಿ 3 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆಗ ಪ್ರತಿ ಮನೆಗೂ ಮೀಟರ್‌ ಅಳವಡಿಸಲಿದ್ದೇವೆ. ಧಾರ್ಮಿಕ ಕೇಂದ್ರ ಸಂಘ ಸಂಸ್ಥೆಗಳಿಗೆ ಅಧಿಕೃತಗೊಳಿಸಿಕೊಳ್ಳಲು ಪಟ್ಟಣ ಪಂಚಾಯಿತಿಗೆ ಬಂದು ಮನವಿ ಸಲ್ಲಿಸಲು ಈಗಾಗಲೇ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ನಳಗಳ ಕಡಿವಾಣಕ್ಕೆ ಹಾಗೂ ತೆರಿಗೆ ಸಂಗ್ರಹಕ್ಕೆ ಕ್ರಮವಹಿಸಲಾಗುವುದು.
–ಮಹೇಶ ಬಿ. ನಿಡಶೇಶಿ ಮುಖ್ಯಾಧಿಕಾರಿ
ನರೇಗಲ್‌ ಪಟ್ಟಣ ಪಂಚಾಯಿತಿ ಹಸ್ತಾಂತರವಾಗುವುದಕ್ಕೂ ಮುನ್ನವೇ ಹಾಳು ಕೆಡಬ್ಲ್ಯುಎಸ್ ವತಿಯಿಂದ ನಿರ್ಮಿಸಲಾದ ಟ್ಯಾಂಕ್‌ಗಳು ಒಂಬತ್ತು ಕಡೆಗಳಲ್ಲಿ ಸೋರುತ್ತಿವೆ. ಈ ಕುರಿತು ಈಗಾಗಲೇ ಪತ್ರ ಬರೆಯಲಾಗಿದೆ. ಇವರೆಡು ಟ್ಯಾಂಕ್‌ಗಳು ಪಟ್ಟಣ ಪಂಚಾಯಿತಿಗೆ ಈವರೆಗೆ ಹಸ್ತಾಂತರವಾಗಿಲ್ಲ. ಕಟ್ಟಡ ಪರಿಶೀಲನೆ ದುರಸ್ತಿ ಕಾರ್ಯಗಳ ನಂತರ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ನಮ್ಮ ವ್ಯಾಪ್ತಿಗೆ ಪಡೆದುಕೊಳ್ಳಲಾಗುವುದು
–ಶಂಕ್ರಪ್ಪ ದೊಡ್ಡಣ್ಣವರ, ನೀರು ಪೂರೈಕೆ ವಿಭಾಗದ ಸಿಬ್ಬಂದಿ ನರೇಗಲ್‌ ಪಟ್ಟಣ ಪಂಚಾಯ್ತಿ
12 ವರ್ಷಗಳಿಂದ ಪಾಳು ಬಿದ್ದಿರುವ ನೀರು ಸಂಗ್ರಹಿಸುವ ಎರಡೂ ಟ್ಯಾಂಕ್‌ಗಳು ಸೋರುತ್ತಿವೆ. ಅವುಗಳನ್ನು ಬಳಕೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಬಳಕೆ ಮಾಡುವ ಮೊದಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು
–ಸೋಮಪ್ಪ ಹನಮಸಾಗರ, ದಲಿತ ಮುಖಂಡ ನರೇಗಲ್
ಆಕ್ರೋಶ ಪ್ರತಿ ಟ್ಯಾಂಕ್‌ಗೂ ₹50 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಿದರೂ ಉಪಯೋಗಿಸಿಲ್ಲ. ಅದೇರೀತಿ 2010ರಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ದ್ಯಾಂಪೂರನಲ್ಲೂ 0.25 ಲಕ್ಷ ಲೀಟರ್‌ ಸಾಮರ್ಥ್ಯದ ಜಲ ಸಂಗ್ರಹಗಾರ ನಿರ್ಮಿಸಲಾಗಿದೆ. ಅದು ಸಹ ಬೀಳುವ ಹಂತಕ್ಕೆ ಬಂದಿದೆ. ಅಧಿಕಾರಿಗಳು ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ
–ಶರಣಪ್ಪ ಧರ್ಮಾಯತ, ರೈತ ಮುಖಂಡ ನರೇಗಲ್
ಮೀಟರ್‌ ಅಳವಡಿಸಲು ಕ್ರಮವಹಿಸಿ ಜನರು ಪ್ರತಿ ಹನಿ ನೀರಿಗೂ ತೆರಿಗೆ ಪಾವತಿ ಮಾಡುವವರೆಗೂ ನೀರು ಪೋಲು ತಡೆಯಲು ಮುಂದಾಗುವುದಿಲ್ಲ. ಆದ್ದರಿಂದ ಅಧಿಕಾರಿಗಳು ಎಲ್ಲಾ ಅನಧಿಕೃತ ನಳಗಳನ್ನು ಬಂದ್‌ ಮಾಡಿ‌ ಅಧಿಕೃತಗೊಳಿಸಬೇಕು ಹಾಗೂ ಮೀಟರ್‌ ಅಳವಡಿಸಲು ಮುಂದಾಗಬೇಕು.
–ಜಗದೀಶ ಸಂಕನಗೌಡ್ರ, ರೈತ ಸಮೃದ್ದಿ ಕೇಂದ್ರದ ಅಧ್ಯಕ್ಷ
ನಳಗಳನ್ನು ಅಧಿಕೃತ ಮಾಡುವ ಯೋಜನೆ ರೂಪಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ನೀರಿನ ಸಮಸ್ಯೆಯಾಗದಂತೆ ಆಯಾ ಓಣಿಗಳಿಗೆ ಪೂರೈಕೆ ಮಾಡಬೇಕು. ಆಗ ತೆರಿಗೆ ಸಂಗ್ರಹ ಸುಲಭವಾಗುತ್ತದೆ
–ರಾಜೇಂದ್ರ ಜಕ್ಕಲಿ ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.