
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಮಕ್ಕಳೊಂದಿಗೆ ಸಂವಾದ ನಡೆಸಿದರು
ನರೇಗಲ್ (ಗದಗ ಜಿಲ್ಲೆ): ‘ನಮ್ ಸಾಲಿ ಪಕ್ಕದಲ್ಲೇ ವೈನ್‌ಶಾಪ್ ಐತಿ ಸರ್. ಅಲ್ಲಿಗ್ ಬರೋರು ಕುಡಿದು ಕಾಂಪೌಂಡ್ ಒಳಗ ಬಾಟ್ಲಿ, ಪ್ಯಾಕೇಟು ವಗೀತಾರ, ನಮ್ಗ ದಿನಾಲು ಕಿರಿಕಿರಿ ಆಗೈತಿ’ ಎಂದು ನರೇಗಲ್ ಹೋಬಳಿಯ ಅಬ್ಬಿಗೇರಿ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಎದುರು ಬುಧವಾರ ಅಳಲು ತೋಡಿಕೊಂಡಳು.
ನರೇಗಲ್ ಪಟ್ಟಣದ ಕೃಷ್ಣಾಜಿ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ವಿವಿಧ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳೊಂದಿಗೆ ಸಂವಾದ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಹೇಳಿಕೊಂಡರು.
‘ರಾತ್ರಿಯಾದರೆ ಸಾಕು ಶಾಲಾ ಆವರಣಕ್ಕೆ ಕುಡಿಯಲು ಬರುತ್ತಾರೆ. ಬಳಿಕ ತ್ಯಾಜ್ಯ ವಸ್ತುಗಳನ್ನೆಲ್ಲಾ ಅಲ್ಲೇ ಬಿಸಾಡಿ ಹೋಗುತ್ತಾರೆ’ ಎಂದು ದೂರಿದಳು.
ಹಾಲಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯೊಬ್ಬಳು, ‘ರಾತ್ರಿಯಾದರೆ ಪುಂಡರು ಶಾಲಾ ಆವರಣದೊಳಗೆ ಬಂದು ಬರ್ತ್ ಡೇ ಪಾರ್ಟಿ, ಗುಂಡು–ತುಂಡಿನ ಪಾರ್ಟಿ ಪಾರ್ಟಿ ಮಾಡುತ್ತಾರೆ’ ಎಂದು ಹೇಳಿದಳು.
ಸ್ಥಳದಲ್ಲಿದ್ದ ನರೇಗಲ್ ಪೊಲೀಸ್ ಠಾಣೆಯ ಎಎಸ್‌ಐ, ‘ಶಾಲೆ ಮೊದಲೇ ಇತ್ತು. ನಂತರ ಮದ್ಯದಂಗಡಿ ಆರಂಭವಾಗಿದೆ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಆಯೋಗದ ಸದಸ್ಯರಿಗೆ ಮಾಹಿತಿ ನೀಡಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಮಾತನಾಡಿ, ‘ಶಾಲೆ ಆರಂಭವಾದ ನಂತರ ಮದ್ಯದ ಅಂಗಡಿ ತೆರೆಯಲಾಗಿದೆ ಎಂದರೆ ಅದಕ್ಕೆ ಅನುಮತಿ ನೀಡಿದ ಅಬಕಾರಿ ಇಲಾಖೆ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಿ. ಇಲ್ಲವಾದರೆ ನಿಮ್ಮ ಮೇಲೆಯೇ ಕ್ರಮ ಕೈಗೊಳ್ಳಲಾಗುವುದು. ಕೆಲವೇ ದಿನಗಳಲ್ಲಿ ವರದಿ ಒಪ್ಪಿಸಬೇಕು’ ಎಂದು ನಿರ್ದೇಶಿಸಿದರು.
ಗಜೇಂದ್ರಗಡ ತಹಶೀಲ್ದಾರ್ ಕಿರಣ್ ಕುಮಾರ ಕುಲಕರ್ಣಿ, ರೋಣ-ಗಜೇಂದ್ರಗಡ ತಾಲ್ಲೂಕು ಇಒ ಚಂದ್ರಶೇಖರ್ ಕಂದಕೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.