
ಗದಗ: ಐತಿಹಾಸಿಕ ಲಕ್ಕುಂಡಿಯ ಗತ ವೈಭವದ ಮರು ಅನ್ವೇಷಣೆಯ ಭಾಗವಾಗಿ ಇಲ್ಲಿನ ಪಂಚ ದೇವಸ್ಥಾನಗಳು ಹಾಗೂ ಪಂಚ ಬಾವಿಗಳ ಅನಾವರಣಗೊಳಿಸುವ ಕಾರ್ಯಕ್ಕೆ ಪುರಾತತ್ವ ಇಲಾಖೆ ಮತ್ತು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದೆ.
ಲಕ್ಕುಂಡಿ ಗ್ರಾಮದಲ್ಲಿ 101 ದೇವಸ್ಥಾನಗಳು, 101 ಬಾವಿಗಳಿದ್ದವು ಎಂಬ ಮಾಹಿತಿ ಇತಿಹಾಸದಲ್ಲಿ ಉಲ್ಲೇಖವಾಗಿದೆ. ಅದರಲ್ಲಿ ಈಗ ಉಳಿದಿರುವುದು ಬೆರಳೆಣಿಕೆಯಷ್ಟು ಮಾತ್ರ. ಪ್ರಾಚ್ಯ ಅವಶೇಷಗಳು, ಸ್ಮಾರಕಗಳ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ಕೊರತೆ, ಸ್ಮಾರಕಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರಗಳಿಂದ ಹಣ ಸಿಗದ ಕಾರಣ ಹಲವು ದೇವಸ್ಥಾನಗಳು ಮತ್ತು ಬಾವಿಗಳು ಹಾಳಾಗಿದ್ದವು. ಅಂತಹವುಗಳ ಪೈಕಿ ಈಗ ಐದು ಬಾವಿ, ಐದು ದೇವಸ್ಥಾನಗಳನ್ನು ಗುರುತಿಸಿ, ಅವುಗಳನ್ನು ಸ್ವಚ್ಛಗೊಳಿಸಿ ಜಗತ್ತಿಗೆ ಪರಿಚಯಿಸುವ ಉದ್ದೇಶವನ್ನು ಪ್ರಾಧಿಕಾರ ಹೊಂದಿದೆ.
ಮೊದಲ ಹಂತದಲ್ಲಿ ಲಕ್ಕುಂಡಿ ಗ್ರಾಮದಲ್ಲಿನ ವಿದ್ಯಾಶಂಕರಲಿಂಗ ದೇವಾಲಯ, ಸೋಮನಕಟ್ಟಿ ಸೋಮಲಿಂಗೇಶ್ವರ ದೇವಾಲಯ, ಚೌಕಿಮಠದ ಈಶ್ವರ ದೇವಾಲಯ, ಅರ್ಧನಾರೀಶ್ವರ ದೇವಾಲಯ, ಕಪ್ಪಚರ ಮಠ ದೇವಾಲಯ ಹಾಗೂ ಛಬ್ಬೇರ ಬಾವಿ, ಸಿದ್ಧರ ಬಾವಿ, ಫಕ್ಕೀರಸ್ವಾಮಿ ಮಠದ ಬಾವಿ, ಸೋಮಲಿಂಗೇಶ್ವರ ಬಾವಿಗಳನ್ನು ಸ್ವಚ್ಛಗೊಳಿಸಲು ಉದ್ದೇಶಿಸಲಾಗಿದೆ.
‘ಪಂಚ ದೇವಸ್ಥಾನ ಮತ್ತು ಪಂಚ ಬಾವಿಗಳ ಅನಾವರಣ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರು ಫೆ.6ರಂದು ಚಾಲನೆ ನೀಡುವರು. ಬಳಿಕ ಬಾವಿ ಮತ್ತು ದೇವಸ್ಥಾನಗಳ ಸುತ್ತ ಇರುವ ಮುಳ್ಳು ಕಂಠಿ ತೆರವು, ಬಾವಿಯಲ್ಲಿ ತುಂಬಿಕೊಂಡಿರುವ ಹೊಲಸು ನೀರನ್ನು ತೆಗೆದು ಸ್ವಚ್ಛಗೊಳಿಸುವ ಕಾರ್ಯ ಪ್ರಾರಂಭ ಆಗಲಿದೆ. ಒಂದು ವಾರದಲ್ಲಿ ಈ ಪ್ರಕ್ರಿಯೆ ಮುಗಿಯಲಿದೆ’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.
‘ಲಕ್ಕುಂಡಿಯ ಗತ ವೈಭವದ ಮರು ಅನ್ವೇಷಣೆ ಕೆಲಸ ಸಚಿವ ಎಚ್.ಕೆ.ಪಾಟೀಲ ಅವರ ಆಸಕ್ತಿ, ಮುತುವರ್ಜಿ ಕಾರಣದಿಂದ ಆರಂಭಗೊಂಡಿದೆ. ಈವರೆಗೆ ಲಕ್ಕುಂಡಿಯಲ್ಲಿನ 16 ದೇವಸ್ಥಾನಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕ ಎಂದು ಘೋಷಣೆ ಮಾಡಲಾಗಿದೆ. ಈ ವರ್ಷದೊಳಗೆ ಅದನ್ನು 50ಕ್ಕೆ ಹೆಚ್ಚಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.
‘ಸ್ವಚ್ಛತಾ ಕೆಲಸ ಪೂರ್ಣಗೊಂಡ ಬಳಿಕ ಎಲ್ಲ ದೇವಸ್ಥಾನ ಮತ್ತು ಬಾವಿಗಳ ತ್ರೀಡಿ ಸ್ಕ್ಯಾನಿಂಗ್ ಮಾಡಿಸಿ, ಕ್ರಿಯಾಯೋಜನೆ ರೂಪಿಸಿ, ಜೀರ್ಣೋದ್ಧಾರಕ್ಕೆ ಕ್ರಮವಹಿಸಲಾಗುವುದು. ಇವು ರಾಜ್ಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಬಂದರೆ ಇವುಗಳ ನಿರ್ವಹಣೆಗೆ ಸರ್ಕಾರದಿಂದ ಹಣ ಸಿಗಲಿದೆ. ಜತೆಗೆ ಯಾರೂ ಅವುಗಳನ್ನು ಅತಿಕ್ರಮಣ ಮಾಡಲು ಸಾಧ್ಯವಾಗುವುದಿಲ್ಲ’ ಎನ್ನುತ್ತಾರೆ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ.
ಈಗ ಆಯ್ಕೆ ಮಾಡಿರುವ ದೇವಸ್ಥಾನ ಮತ್ತು ಬಾವಿಗಳ ಪೈಕಿ ಕೆಲವು ಹೂತಿವೆ. ಇನ್ನು ಕೆಲವು ದುರಸ್ತಿಯ ಸ್ಥಿತಿಯಲ್ಲಿವೆ. ಬಾವಿಗಳ ಸೊಗಸು ಮಾತ್ರ ಅದ್ಭುತವಾಗಿದೆ. ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರ್ಪಡೆಯಾದರೆ ಲಕ್ಕುಂಡಿ ಗತ ವೈಭವ ಮರಳಲಿದೆಸಿದ್ದು ಪಾಟೀಲ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ
ಐದು ದೇವಸ್ಥಾನ ಐದು ಬಾವಿಗಳು ಕಾರಣಾಂತರಗಳಿಂದ ಹೂತು ಹೋಗಿವೆ. ಚೌಕಿಮಠ ಕುಟುಂಬದವರ ಮನೆಯೊಳಗೆ ದೇವಸ್ಥಾನ ಇದ್ದು ಅದನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆ. ನಿಯಮದ ಪ್ರಕಾರ ಅವರಿಗೆ ಸರ್ಕಾರ ಪರಿಹಾರ ನೀಡಲಿದೆಶರಣು ಗೋಗೇರಿ ಪ್ರಾಧಿಕಾರದ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.