ADVERTISEMENT

ಗದಗ | ಸಮಾಜದ ಪ್ರಗತಿಗೆ ವಿಜ್ಞಾನ ತಳಪಾಯ: ಪ್ರೊ. ಸುರೇಶ ವಿ. ನಾಡಗೌಡ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 4:09 IST
Last Updated 27 ಡಿಸೆಂಬರ್ 2025, 4:09 IST
ಗದುಗಿನ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ವಿಜ್ಞಾನ ಕಾರ್ಯಕ್ರಮವನ್ನು ಪ್ರಭಾರ ಕುಲಪತಿ ಪ್ರೊ. ಸುರೇಶ ವಿ.ನಾಡಗೌಡ ಉದ್ಘಾಟಿಸಿದರು
ಗದುಗಿನ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ವಿಜ್ಞಾನ ಕಾರ್ಯಕ್ರಮವನ್ನು ಪ್ರಭಾರ ಕುಲಪತಿ ಪ್ರೊ. ಸುರೇಶ ವಿ.ನಾಡಗೌಡ ಉದ್ಘಾಟಿಸಿದರು   

ಗದಗ: ‘ವಿಜ್ಞಾನ ಮತ್ತು ಆವಿಷ್ಕಾರಗಳು ಸಮಾಜದ ಪ್ರಗತಿಗೆ ಅಡಿಪಾಯವಾಗಿವೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ವಿಶ್ಲೇಷಣಾತ್ಮಕ ಚಿಂತನೆ ಮತ್ತು ಸೃಜನಶೀಲತೆ ಬೆಳೆಸುವಂತಹ ವೇದಿಕೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಅಗತ್ಯ’ ಎಂದು ಪ್ರಭಾರ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡ ಹೇಳಿದರು.

ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ‘ಆವಿಷ್ಕಾರ–ವಿಜ್ಞಾನ ಪ್ರತಿಭಾ ಉತ್ಸವ’ ಒಂದು ದಿನದ ವಿಜ್ಞಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ವಿಶ್ವವಿದ್ಯಾಲಯದಲ್ಲಿರುವ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಬಳಸಲು ಮುಂದಾಗಬೇಕು’ ಎಂದರು.

ADVERTISEMENT

ವಿಜ್ಞಾನ ಪ್ರತಿಭಾ ಉತ್ಸವದ ಅಂಗವಾಗಿ ಭಿನ್ನವಾದುದನ್ನು ಗುರುತಿಸುವುದು, ಆಯ್ಕೆ ಮಾಡಿ ಮಾತನಾಡುವುದು ಹಾಗೂ ರಿಬಸ್ ಪಜಲ್ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.

ಗಿರೀಶ್ ದೀಕ್ಷಿತ್, ಸಾವಿತ್ರಿ ಬ್ಯಾಡಗಿ, ದೀಪಾ ಎಸ್. ಪಾಟೀಲ, ವಿಶಾಲಾಕ್ಷಿ ಹಿರೇಮಠ, ಯೋಗೇಶ್ ಕರಿಕಟ್ಟಿ, ಸ್ನೇಹಾ ಲಾಹೋರ್ಕರ್ ಸೇರಿದಂತೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಗದಗ ಜಿಲ್ಲೆಯ ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು  ಭಾಗವಹಿಸಿದ್ದರು. ಸ್ನೇಹಾ ಲಾಹೋರ್ಕರ್ ವಂದಿಸಿದರು. ಕೀರ್ತಿ ಮತ್ತು ಅಕ್ಷತಾ ನಿರೂಪಿಸಿದರು.

‘ವೈಜ್ಞಾನಿಕ ಚಿಂತನೆ ಬೆಳೆಸಿ’

‘ವೈಜ್ಞಾನಿಕ ಚಿಂತನೆ ರೂಪುಗೊಳಿಸುವಲ್ಲಿ ಮಾರ್ಗದರ್ಶಕರು ಶಿಕ್ಷಕರು ಹಾಗೂ ಪುಸ್ತಕಗಳ ಪಾತ್ರ ಮಹತ್ವದ್ದಾಗಿದೆ’ ಎಂದು ಸಂಪನ್ಮೂಲ ವ್ಯಕ್ತಿಗಿರೀಶ್ ರೇವಡಿಗರ್ ಹೇಳಿದರು. ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜೀವನ ಆಶಯಗಳು ಮತ್ತು ಗಣಿತಶಾಸ್ತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಆಧುನಿಕ ವಿಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್‌ಗಳ  ಪ್ರಭಾವ ಉದಯೋನ್ಮುಖ ತಂತ್ರಜ್ಞಾನಗಳ ನೈತಿಕ ಹಾಗೂ ಜವಾಬ್ದಾರಿಯುತ ಬಳಕೆಯ ಅಗತ್ಯತೆ ಹಾಗೂ ವಿಜ್ಞಾನ ಶಿಕ್ಷಣ ಪಡೆದವರಿಗೆ ಲಭ್ಯವಿರುವ ವಿವಿಧ ವೃತ್ತಿ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.