
ಅರಸೀಕೆರೆ: ಜೆಜೆಎಂ ಸೇರಿದಂತೆ ಹೇಮಾವತಿ ನದಿ ನೀರನ್ನು ಅರಸೀಕೆರೆ ಕ್ಷೇತ್ರಕ್ಕೆ ಸಮರ್ಪಕವಾಗಿ ಒದಗಿಸದಿದ್ದರೆ, ಸಂಬಂಧಪಟ್ಟ ಅಧಿಕಾರಿಗಳು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ. ಶಿವಲಿಂಗೇಗೌಡ ಎಚ್ಚರಿಸಿದರು.
ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಕಾಮಸಮುದ್ರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭೂಮಿಪೂಜೆ ಹಾಗೂ ಕಾಮಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಹಗರಣದಲ್ಲಿ ತೊಡಗಿದ್ದು, ಕೂಡಲೇ ಎಚ್ಚೆತ್ತುಕೊಂಡು ಅರಸೀಕೆರೆ ಕ್ಷೇತ್ರದ ಜನರಿಗೆ ನೀರು ಪೂರೈಸದಿದ್ದರೆ, ಜೈಲು ಗ್ಯಾರಂಟಿ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯ ಪಿಡಿಒಗಳು ಗಮನವಹಿಸಬೇಕು ಎಂದು ತಾಕೀತು ಮಾಡಿದರು.
ಈ ಸಭೆಯಲ್ಲಿ ಸಾಗುವಳಿ ಚೀಟಿ ಸಂಬಂಧ 96 ಅರ್ಜಿಗಳು ಸಲ್ಲಿಕೆಯಾಗಿವೆ. ಬಗರ್ ಹುಕುಂ ಸಾಗುವಳಿ ಚೀಟಿ ಬಗ್ಗೆ ರಾಜ್ಯದಲ್ಲಿ ಸಮಸ್ಯೆ ಇದೆ. ದುರಸ್ತಿ ಸಂಬಂಧ ರೈತರ ಸಮಸ್ಯೆ ಮನಗಂಡಿರುವ ಸಿದ್ದರಾಮಯ್ಯ ಸರ್ಕಾರ ಪರಿಹರಿಸಲು ಬದ್ಧವಾಗಿದೆ. ನೂತನ ತಂತ್ರಜ್ಞಾನದ ಮೂಲಕ ರಾಜ್ಯದ ರೈತರಿಗೆ ಕಾಯಂ ಸಾಗುವಳಿ ಚೀಟಿ ನೀಡಲಾಗುವುದು. ರೈತರು ಅರ್ಜಿ ಸಂಖ್ಯೆ 53 ಅಥವಾ 57 ರಲ್ಲಿ ಅರ್ಜಿ ಹಾಕಿ ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ತಾಲ್ಲೂಕಿನಲ್ಲಿ ಹಂಗಾಮಿ ಸಾಗುವಳಿ ಚೀಟಿ ಹೊಂದಿರುವ ರೈತರನ್ನು ಪತ್ತೆ ಹಚ್ಚಿ ಅವುಗಳ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡಿದ್ದಾರೆ. ಬಗರ್ ಹುಕುಂ ಕಮಿಟಿಗೆ ನಾನೇ ಅಧ್ಯಕ್ಷ. ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಸಿ, ಹಕ್ಕು ಪತ್ರ ನೀಡುವ ಜವಾಬ್ದಾರಿ ನನ್ನದು. ಆದರೆ ಕೆಲವರು ರಾಜಕೀಯ ಗಿಮಿಕ್ ಮಾಡಲು ಹೊರಟಿದ್ದಾರೆ. ಜಾತಿ ಮುಂದಿಟ್ಟು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸುಮ್ಮನೇ ಹಣ ವ್ಯಯ ಮಾಡಿಕೊಳ್ಳಬೇಡಿ ಎಂದರು.
ಬಹುವರ್ಷಗಳಿಂದ ಕಾಮಸಮುದ್ರ ಕೆರೆ ತುಂಬಿಲ್ಲ. ಇದೀಗ ಮುಕ್ಕಾಲು ಕೆರೆ ತುಂಬಿದೆ. ಕೆಲವೇ ದಿನಗಳಲ್ಲಿ ಕೆರೆ ತುಂಬಿಸಿ ಬಾಗಿನ ಅರ್ಪಿಸುವ ಕಾರ್ಯ ಮಾಡಲಾಗುವುದು. ಕ್ಷೇತ್ರಕ್ಕೆ ನೀರಾವರಿ ತರಲು ಶಿವಲಿಂಗೇಗೌಡ ಬೆಳಗಾವಿ ಅಧಿವೇಶನದಲ್ಲಿ ಕಣ್ಣೀರು ಹಾಗೂ ಹೋರಾಟದ ನಾಟಕ ಮಾಡಿದ್ದಾರೆ ಎಂದು ಕೆಲವರು ಒಣ ಭಾಷಣ ಮಾಡಿದ್ದಾರೆ. ಆದರೆ ಮಾಧ್ಯಮ ಸೇರಿದಂತೆ ಎಲ್ಲ ಜನತೆಗೂ ಸತ್ಯ ಏನೆಂದು ಗೊತ್ತಿದೆ ಎಂದರು.
ನೀರಿನ ಸಮಸ್ಯೆ ಬಗ್ಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಹೆಚ್ಚುವರಿ ಟ್ಯಾಂಕ್, ಪೈಪ್ ದುರಸ್ತಿ, ನೀರು ಸರಬರಾಜುಗಳ ಬಗ್ಗೆ ಚರ್ಚೆ ಮಾಡಲಾಯಿತು. ಪಿಡಿಒಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಮುಖಂಡರು ಬಿನ್ನಾಭಿಪ್ರಾಯಗಳು ಮರೆತು ಜನರ ಸೇವೆ ಮಾಡಬೇಕು. ಈ ವಿಚಾರಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕ ಶಿವಲಿಂಗೇಗೌಡ ಸಲಹೆ ನೀಡಿದರು.
ಗ್ರಾ.ಪಂ. ಅಧ್ಯಕ್ಷೆ ರೇಖಾ ಆರಾಧ್ಯ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧೀಕ್ಷಕ ಎಂಜಿನಿಯರ್ ಎ.ವೀರಪ್ಪ, ಕಾರ್ಯಪಾಲಕ ಎಂಜಿನಿಯರ್ ನವ್ಯಶ್ರೀ, ಗ್ರಾಮೀಣ ಸರ್ಕಲ್ ಇನ್‌ಸ್ಪೆಕ್ಟರ್ ಅರುಣ್ ಕುಮಾರ್, ಮುಖಂಡರಾದ ಪಡುವನಹಳ್ಳಿ ಶಿವಣ್ಣ, ರಾಜಶೇಖರ, ತುಂಬಾಪುರ ನವೀನ್, ಕಾಮಸಮುದ್ರ ರವಿ, ರೇಣುಕಪ್ಪ, ಮಹಲಿಂಗಪ್ಪ, ಯರಿಗೇನಹಳ್ಳಿ ಸಿದ್ದಪ್ಪ, ನಾನಾನಾಯ್ಕ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಮಸ್ಯೆ ಪರಿಹರಿಸಲು ಸಭೆ:
ತಹಶೀಲ್ದಾರ್ ತಹಶೀಲ್ದಾರ್ ಎಂ.ಜಿ. ಸಂತೋಷ್‌ಕುಮಾರ್ ಮಾತನಾಡಿ 15 ದಿನಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ಸರಣಿ ಸಭೆ ಮಾಡುವ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಕಾನೂನು ಮಿತಿಯೊಳಗೆ ನಿರ್ದಿಷ್ಟ ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದು. ಭೂ ರಕ್ಷಾ ಯೋಜನೆ ಅಡಿ ಇ– ಪೌತಿ ಖಾತೆ ಪತ್ರಕ್ಕೆ ವಂಶವೃಕ್ಷ ಮರಣಪತ್ರದ ಮೂಲಕ ತಕ್ಷಣವೇ ಪಡೆದುಕೊಳ್ಳಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.