
ಬೇಲೂರು: ವಿಧಾನಸಭೆ ಅಧಿವೇಶನದಲ್ಲಿ ಬಜೆಟ್ ಮೇಲೆ ಶಾಸಕ ಎಚ್.ಕೆ.ಸುರೇಶ್ ಶುಕ್ರವಾರ ಮಾತನಾಡಿ, ತಾಲ್ಲೂಕಿನ ಸಮಗ್ರ ಅಭಿವೃದ್ದಿಗಾಗಿ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.
ಹೊಯ್ಸಳೋತ್ಸವವನ್ನು ಬೇಲೂರು- ಹಳೇಬೀಡಿನಲ್ಲಿ ಪ್ರತಿವರ್ಷ ಆಚರಿಸಬೇಕು. ತಾಲ್ಲೂಕಿನಲ್ಲಿ ಕಾಡಾನೆ ದಾಳಿಯಿಂದ ಇದುವರೆಗೆ 10ಜನ ಮೃತಪಟ್ಟಿದ್ದು, ಶಾಶ್ವತ ಪರಿಹಾರಕ್ಕಾಗಿ ಆನೆ ಕಾರಿಡಾರ್ ನಿರ್ಮಾಣ ಮಾಡಲು ₹1000 ಕೋಟಿ ಅನುದಾನ ಬಿಡುಗಡೆ ಮಾಡಬೇಕು . ಬೇಲೂರು ಘಟಕಕ್ಕೆ ಹೆಚ್ಚುವರಿ 30 ಬಸ್,ಹೆಚ್ಚಿನ ಸಿಬ್ಬಂದಿ ಒದಗಿಸುವಂತೆ ಮನವಿ ಮಾಡಿದರು.
ಬೇಲೂರಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಸಂಚಾರ ಪೋಲಿಸ್ ಠಾಣೆಯನ್ನು ಮಂಜೂರು ಮಾಡಬೇಕು. ಬಿಕ್ಕೋಡು ಗ್ರಾಮದಲ್ಲಿ 66/11 ಕೆ.ವಿ.ಎ, ಚನ್ನಾಪುರ (ಹನಿಕೆ) ಗ್ರಾಮದಲ್ಲಿ 66/11ಕೆ.ವಿ.ಎ, ಅಡಗೂರು ಗ್ರಾಮದಲ್ಲಿ 220/11 ಕೆ.ವಿ.ಎ, ಕೋಳಗುಂದ ಗ್ರಾಮದಲ್ಲಿ 110/11 ಕೆ.ವಿ.ಎ ವಿದ್ಯುತ್ ವಿತರಣಾ ಉಪಕೇಂದ್ರಗಳನ್ನು ಪ್ರಾರಂಭಿಸಬೇಕು. ಪ್ರಗತಿಪಥ ರಸ್ತೆ ಅಭಿವೃದ್ದಿ ಯೋಜನೆಯಲ್ಲಿ ಬೇಲೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಒತ್ತಾಯಿಸಿದರು.
ಜಾವಗಲ್, ಅರೇಹಳ್ಳಿ, ಹಗರೆ ಗ್ರಾಮಗಳಲ್ಲಿ ಕೆ.ಪಿ.ಎಸ್ ಶಾಲೆಗಳನ್ನು ಕೂಡಲೇ ಪ್ರಾರಂಭಿಸಬೇಕು. ಜಾವಗಲ್, ಬಿಕ್ಕೋಡು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೇಗೇರಿಸಬೇಕು. ಬೇಲೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸುಸಜ್ಜಿತವಾದ ಹೊಸ ಕಟ್ಟಡ ನಿರ್ಮಾಣ ಮಾಡಬೇಕು.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ಕನಿಷ್ಠ ₹10,000 ವೇತನ ಹೆಚ್ಚಿಸಬೇಕು. ಅಡುಗೆ ಮಾಡುವವರಿಗೆ 5,000ರೂ ವೇತನ ಹೆಚ್ಚಿಸಬೇಕು. ಕ್ಷೇತ್ರದಲ್ಲಿ ನೂರಾರು ಅಂಗನವಾಡಿಗಳ ದುರಸ್ತಿ, ಕಾರ್ಯಕರ್ತೆಯರಿಗೆ ಕನಿಷ್ಡ ₹5,000ಕ್ಕೆ ಗೌರವಧನ ಹೆಚ್ಚಿಸಬೇಕು ಎಂದು ಕೇಳಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.