ADVERTISEMENT

ಹಾಸನ: ಗುಂಡಿಕ್ಕಿ ಸೆಸ್ಕ್ ನೌಕರನ ಹತ್ಯೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 14:57 IST
Last Updated 16 ಜನವರಿ 2021, 14:57 IST
ಸಂತೋ‌ಷ್‌
ಸಂತೋ‌ಷ್‌   

ಹಾಸನ: ತಾಲ್ಲೂಕಿನ ಹೂವಿನಹಳ್ಳಿ ಕಾವಲು ಬಳಿ ಶುಕ್ರವಾರ ರಾತ್ರಿ ಸೆಸ್ಕ್ ನೌಕರನನ್ನು ಗುಂಡಿಕ್ಕಿ ಹತ್ಯೆ
ಮಾಡಲಾಗಿದೆ.

ಕಿರಿಯ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ (35) ಕೊಲೆಯಾದ ವ್ಯಕ್ತಿ. ಘಟನಾ ಸ್ಥಳದಲ್ಲಿ
ಆಹಾರದ ಪೊಟ್ಟಣ, ಮದ್ಯದ ಬಾಟಲ್‌ಗಳು ಪತ್ತೆಯಾಗಿದ್ದು, ಮದ್ಯದ ಪಾರ್ಟಿ ನಂತರ ಶೂಟೌಟ್ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆರೋಪಿಗಳ ಪತ್ತೆಗೆ ಶೋಧ ಆರಂಭಿಸಿದ್ದಾರೆ.

ಮೃತನ ತಂದೆ ರಂಗೇಗೌಡ ಅವರು ಕರ್ತವ್ಯದ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಅನುಕಂಪದ
ಆಧಾರದ ಮೇಲೆ ಸಂತೋಷ್‍ಗೆ ಸರ್ಕಾರಿ ನೌಕರಿ ದೊರಕಿತ್ತು.

13 ವರ್ಷಗಳ ಹಿಂದೆ ಜಯಶ್ರೀ ಎಂಬಾಕೆಯನ್ನು ಮದುವೆಯಾಗಿದ್ದ ಸಂತೋಷ್‍ಗೆ ಇಬ್ಬರು ಹೆಣ್ಣು
ಮಕ್ಕಳಿದ್ದಾರೆ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದರು. ಆಗಾಗ್ಗೆ ಸ್ವಗ್ರಾಮ ಅರೇಕಲ್ಲು ಹೊಸಳ್ಳಿಗೆ ಬಂದು ತಾಯಿ ಹಾಗೂ ಸಂಬಂಧಿಕರನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು.

ಪಾರ್ಟಿ ಇದೆ ಎಂದು ಹೇಳಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮನೆಯಿಂದ ಹೊರ ಹೋದ
ಸಂತೋಷ್‌ ತಡರಾತ್ರಿಯಾದರೂ ಬಾರದೇ ಇದ್ದಾಗ ಗಾಬರಿಗೊಂಡ ಪತ್ನಿ ಅವರ ಮೊಬೈಲ್‌ಗೆ ಕರೆ
ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸಲಿಲ್ಲ. ಶನಿವಾರ ಸಂತೋಷ್ ಶವ ಹೊಲದಲ್ಲಿ ಪತ್ತೆಯಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ ಗೌಡ, ಗ್ರಾಮಾಂತರ ಸಿಪಿಐ ಪಿ.ಸುರೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ
ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಸಂತೋಷ್‌ಗೆ ಪರಿಚಯ ಇದ್ದವರೇ ಪಾರ್ಟಿ ನೆಪದಲ್ಲಿ ಹೊರಗಡೆ ಕರೆದುಕೊಂಡು ಹೋಗಿ ಶೂಟೌಟ್ ಮಾಡಿರಬಹುದು. ಪ್ರಾಥಮಿಕ ಮಾಹಿತಿ ಪ್ರಕಾರ ಮೂವರು ಭಾಗಿಯಾಗಿರುವ ಶಂಕೆ ಇದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಎಸ್‌ಪಿ ಶ್ರೀನಿವಾಸ್‍ಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.