ADVERTISEMENT

ಸಕಲೇಶಪುರ | ಪಕ್ಷ ಗಟ್ಟಿಗೊಳಿಸಿ: ವೈ.ಸಂಪಂಗಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 6:07 IST
Last Updated 6 ಫೆಬ್ರುವರಿ 2026, 6:07 IST
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ಗುರುವಾರ ಬೆಳಗೋಡು ಹೋಬಳಿ ಮಟ್ಟದ ಕಾಂಗ್ರೆಸ್ ಸಭೆಯಲ್ಲಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ವೈ. ಸಂಪಂಗಿ ಮಾತನಾಡಿದರು
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ಗುರುವಾರ ಬೆಳಗೋಡು ಹೋಬಳಿ ಮಟ್ಟದ ಕಾಂಗ್ರೆಸ್ ಸಭೆಯಲ್ಲಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ವೈ. ಸಂಪಂಗಿ ಮಾತನಾಡಿದರು   

ಸಕಲೇಶಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲೇಬೇಕು. ಸ್ಥಳೀಯ ಸಂಸ್ಥೆಗಳಲ್ಲೂ ಉತ್ತಮ ಫಲಿತಾಂಶ ಬರುವಂತೆ ಕಾರ್ಯಕರ್ತರು ಶ್ರಮ ವಹಿಸಿ, ಯಾವುದೇ ಗೊಂದಲಕ್ಕೆ ಒಳಗಾಗದೆ ಪಕ್ಷ ಕಟ್ಟುವ ಕೆಲಸದಲ್ಲಿ ಮುಂದಾಗಬೇಕು ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ವೈ. ಸಂಪಂಗಿ ಹೇಳಿದರು.

ಬಾಳ್ಳುಪೇಟೆಯ ಕೆಂಚಮ್ಮ ಮಲ್ಲೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ಬೆಳಗೋಡು ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಕಟ್ಟುವ ಕೆಲಸವನ್ನು ಶಿಸ್ತಿನಿಂದ ಮಾಡಿ, ತಾಲ್ಲೂಕು ಅಧ್ಯಕ್ಷರ ಮಾರ್ಗದರ್ಶನದಲ್ಲಿ ಕಾರ್ಯಚಟುವಟಿಕೆ ನಡೆಸಿ ಎಂದರು. ಮುರಳಿ ಮೋಹನ್ ಪಕ್ಷ ಸಂಘಟನೆ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡುವ ವ್ಯಕ್ತಿಗಳನ್ನು ಗುರುತಿಸಿ ಪಕ್ಷದ ವರಿಷ್ಠರು ಇವರಿಗೆ ಮುಂದಿನ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿ ಮಾಡಲಿದೆ. ಅಭ್ಯರ್ಥಿಗೂ ಜನರಿಗೂ ಸಂಪರ್ಕ ಇಲ್ಲದಿದ್ದರೆ, ಪಕ್ಷಕ್ಕೆ ಹಾನಿಯಾಗುತ್ತಿದ್ದರೆ, ಪಕ್ಷ ವಿರೋಧಿಯಾಗಿ ಕೆಲಸ ಮಾಡುತ್ತಿದ್ದರೆ ಅಭ್ಯರ್ಥಿಯನ್ನು ಬದಲಾಯಿಸಲಾಗುತ್ತದೆ. ಆದರೆ ಇಂತಹ ಯಾವುದೇ ಬೆಳವಣಿಗೆಗಳು ಇಲ್ಲಿ ನಡೆಯುತ್ತಿಲ್ಲ ಎಂದರು.


ಪಕ್ಷ ವಿರೋಧಿ ಚಟುವಟಿಕೆಗಳು ಹಾಗೂ ಪಕ್ಷಕ್ಕೆ ವಿರುದ್ಧವಾಗಿ ಸಭೆ ಮಾಡುವುದು, ತಾಲ್ಲೂಕು ಅಧ್ಯಕ್ಷರ ಗಮನಕ್ಕೆ ಬಾರದೆ ಸಭೆ ನಡೆಸುವುದು, ಪಕ್ಷದ ಮುಖಂಡರ ವರ್ಚಸ್ಸಿಗೆ ಧಕ್ಕೆ ಆಗುವ ರೀತಿಯಲ್ಲಿ ಹೇಳಿಕೆ ನೀಡುವುದು ಸರಿಯಾದುದಲ್ಲ ಪಕ್ಷದ ನಿಷ್ಠಾವಂತರು ಈ ರೀತಿ ಮಾಡಬೇಡಿ. ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.

ADVERTISEMENT

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಕೆಲವು ವ್ಯಕ್ತಿಗಳು ವಿಧಾನಸಭಾ ಕ್ಷೇತ್ರವನ್ನು ಟೂರಿಂಗ್ ಪ್ಲೇಸ್ ಮಾಡಿಕೊಂಡಿದ್ದಾರೆ. ಆದರೆ ಇಲ್ಲೇ ನಿಂತು ಕೆಲಸ ಮಾಡುವ ಧೈರ್ಯವನ್ನು ಯಾರೂ ತೋರಲಿಲ್ಲ. ಇದನ್ನು ಮುರಳಿ ಮೋಹನ್ ಮಾಡಿ ತೋರಿಸಿದ್ದಾರೆ ಎಂದರು. ಮುಂದೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಪುರಸಭೆ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳಿವೆ. ಈ ಚುನಾವಣೆಗಳಲ್ಲಿ ಪಕ್ಷ ಗೆಲ್ಲಲು ಸಂಘಟಿತರಾಗಿ ದುಡಿಯಬೇಕಾಗಿದೆ ಎಂದರು .


ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು ಮಾತನಾಡಿ, ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಮುಂದೆಯೂ ಸಹ ಮಾಡುತ್ತೇವೆ. ಕಾರ್ಯಕರ್ತರು ಯಾವುದೇ ಇಲ್ಲಸಲ್ಲದ ವಿಚಾರಗಳಿಗೆ ತಲೆಕೆಡಿಸಿಕೊಳ್ಳದೆ, ಪಕ್ಷ ಕಟ್ಟುವ ಕೆಲಸಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮುರಳಿ ಮೋಹನ್ ಮಾತನಾಡಿ, ಪಕ್ಷದ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಪಕ್ಷವನ್ನು ಬಲಪಡಿಸುವುದೇ ನನ್ನ ಮುಖ್ಯ ಗುರಿ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗೆಲ್ಲಬೇಕು ಎಂದರು. ಹೇಳಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ, ತಾಲ್ಲೂಕು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಮುಫೀಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.