ಹಾಸನ: ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಭಾನುವಾರ ಸತ್ಯ ಯಾತ್ರೆ ನಡೆಸಿದರು.
ಹಾಸನದಿಂದ ಧರ್ಮಸ್ಥಳದವರೆಗೆ ನಡೆದ ಯಾತ್ರೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಜೆಡಿಎಸ್ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು. ಹೊರವಲಯದ ಕಂದಲಿ ಬಳಿಯಿಂದ ಸತ್ಯ ಯಾತ್ರೆಗೆ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ಇಂದು ಧರ್ಮಸ್ಥಳಕ್ಕೆ ಸತ್ಯ ಯಾತ್ರೆ ಹೊರಟಿದ್ದೇವೆ. ಮಂಜುನಾಥಸ್ವಾಮಿ, ಅಣ್ಣಪ್ಪ ಸ್ವಾಮಿ ದರ್ಶನ ಪಡೆದು ನೈತಿಕ ಬೆಂಬಲ ಘೋಷಿಸುತ್ತೇವೆ. ಹಲವಾರು ದಿನಗಳಿಂದ ಅಪಪ್ರಚಾರಗಳು, ಧರ್ಮಸ್ಥಳದ ಆವರಣದ ಸುತ್ತಮುತ್ತ ಅನುಮಾನ ಎಡೆಮಾಡಿಕೊಡುವ ಷಡ್ಯಂತ್ರ, ಹುನ್ನಾರ, ಸಂಘಟಿತ ಪಿತೂರಿ ನಡೆದಿದೆ. ಇದೆಲ್ಲದರ ವಿರುದ್ಧವಾಗಿ ಈ ಯಾತ್ರೆ ನಡೆಸಲಾಗುತ್ತಿದೆ ಎಂದರು.
ಇದರಲ್ಲಿ ರಾಜಕೀಯ ಬೆರೆಸುವ ಪ್ರಶ್ನೆ ಇಲ್ಲ. ಪಕ್ಷಾತೀತವಾಗಿ ಅಸಂಖ್ಯಾತ ಭಕ್ತರು, ದೇಶದ , ಹಲವಾರು ಕಡೆಗಳಿಂದ ಆರಾಧ್ಯ ದೈವ ಮಂಜುನಾಥಸ್ವಾಮಿ, ಅಣ್ಣಪ್ಪಸ್ವಾಮಿ ಕಾಣಲು ಬರುತ್ತಿದ್ದಾರೆ ಎಂದರು.
ನಾನು ಬಾಲ್ಯದಿಂದಲೂ ಮಂಜುನಾಥಸ್ವಾಮಿ ಪರಮಭಕ್ತ. ಪ್ರತಿ ವರ್ಷ ನಾನು ಚಾಚೂತಪ್ಪದೇ ಧರ್ಮಸ್ಥಳಕ್ಕೆ ಬರುತ್ತೇನೆ. ದೇವರ ದರ್ಶನ ಪಡೆಯುತ್ತೇನೆ. ಕಳೆದ ಹಲವಾರು ದಿನಗಳಿಂದ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾದ ಸಂಚು, ಷಡ್ಯಂತ್ರ ನಡೆಯುತ್ತಿದೆ. ದೊಡ್ಡ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಈ ಬಗ್ಗೆ ಮಾತನಾಡಿದ್ದಾರೆ. ಆರೋಪದ ಬಗ್ಗೆ ಅನುಮಾನ, ಶಂಕೆಗಳು ವ್ಯಕ್ತವಾಗಿವೆ. ಇದುವರೆಗೂ ಎಳ್ಳಷ್ಟು ಸತ್ಯಾಸತ್ಯತೆ ಹೊರಗೆ ಬಂದಿಲ್ಲ ಎಂದು ಹೇಳಿದರು.
ಧರ್ಮಸ್ಥಳದ ವಿರುದ್ಧ ಸಮಾಜಘಾತುಕ ಶಕ್ತಿಗಳು ಹುನ್ನಾರ ಮಾಡುತ್ತಿವೆ. ತನಿಖೆ ಮೂಲಕ ಇದೆಲ್ಲದರ ಬಗ್ಗೆ ಸಮಾಜದ ಮುಂದೆ ಸತ್ಯಾಂಶ ಹೊರಗೆ ತರಬೇಕಿದೆ. ನಮ್ಮಲ್ಲೆರ ಮೇಲೆ ಕೆಲವು ಜವಾಬ್ದಾರಿ ಇದೆ. ನಮ್ಮ ಧರ್ಮವನ್ನು ರಕ್ಷಣೆ ಮಾಡಬೇಕು. ಅದು ಎಲ್ಲರ ಜವಾಬ್ದಾರಿ. ಮಂಜುನಾಥಸ್ವಾಮಿ ವಿಚಾರದಲ್ಲಿ ರಾಜಕಾರಣ ಬೆರೆಸಬಾರದು. ಬಹಳಷ್ಟು ಭಕ್ತಾದಿಗಳು ಯಾತ್ರೆಯಲ್ಲಿ ಸ್ವಇಚ್ಛೆಯಿಂದ ಬರುತ್ತೇವೆ ಎಂದು ಹಳ್ಳಿಹಳ್ಳಿಗಳಿಂದ ಬಂದಿದ್ದಾರೆ. ಸತ್ಯದ ಪರವಾಗಿ ನಿಲ್ಲುತ್ತೇವೆ, ಧರ್ಮವನ್ನು ರಕ್ಷಣೆ ಮಾಡುತ್ತೇವೆ ಎಂದು ತಿಳಿಸಿದರು.
ಸಾರಿಗೆ ಬಸ್‌ನಲ್ಲಿ ಶಾಸಕರ ಜೊತೆ ನಿಖಿಲ್ ಕುಮಾರಸ್ವಾಮಿ ಯಾತ್ರೆ ನಡೆಸಿದರು. ಶಾಸಕರಾದ ಎ.ಮಂಜು, ಎಚ್.ಪಿ.ಸ್ವರೂಪ್‌ಪ್ರಕಾಶ್, ಹರೀಶ್‌ಗೌಡ, ಸಿ.ಎನ್. ಬಾಲಕೃಷ್ಣ, ಕರಿಯಮ್ಮ, ಎಂ.ಟಿ.ಕೃಷ್ಣಪ್ಪ, ಸುರೇಶ್ ಬಾಬು, ಮಂಜುನಾಥ್, ನೇಮಿರಾಜ್ ನಾಯಕ್, ರಾಜ್ಯ ಕೋರ ಕಮೀಟಿ ಸದಸ್ಯ ವೆಂಕಟರಾವ್ ನಾಡಗೌಡ, ವಿಧಾನಪರಿಷತ್ ಸದಸ್ಯ ಭೋಜೆಗೌಡ, ಮಾಜಿ ಶಾಸಕರಾದ ಸುರೇಶ್ ಗೌಡ, ಎಚ್.ಕೆ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಇಂಚರಾ ಗೋವಿಂದರಾಜು, ಮಹಿಳಾ ವಿಭಾಗದ ರಾಜ್ಯ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಶಾಸಕರು, ಮುಖಂಡರು ಭಾಗವಹಿಸಿದ್ದರು.
ಎನ್‌ಐಎ ತನಿಖೆಗೆ ವಹಿಸಿ
ಯೂಟ್ಯೂಬರ್‌ಗಳಿಗೆ ಉತ್ತೇಜನ ಕೊಡುತ್ತಿದ್ದಾರೆ. ಇದರ ಹಿಂದೆ ದೊಡ್ಡಮಟ್ಟದ ಸಂಘಟನೆ ಇದೆ. ಇದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ವ್ಯವಸ್ಥೆ ಆಗಿದೆ. ಹೀಗಾಗಿ ಈ ಪ್ರಕರಣವನ್ನು ಎನ್‌ಎಐ ತನಿಖೆಗೆ ಒಪ್ಪಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು. ಧರ್ಮಾಧಿಕಾರಿಗಳು ಇಂದು ಇಡೀ ದಿನ ನಮಗೆ ಸಮಯ ನಿಗದಿ ಮಾಡಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಎಷ್ಟೇ ಬೇಜಾರಾದರೂ ಅತ್ಯಂತ ತಾಳ್ಮೆಯಿಂದ ಹೃದಯ ವೈಶಾಲ್ಯದಿಂದ ವರ್ತನೆ ಮಾಡಿದ್ದಾರೆ. ಧರ್ಮಾಧಿಕಾರಿಗೆ ನೈತಿಕ ಬೆಂಬಲ ಸೂಚಿಸುತ್ತೇವೆ. ಇದು ತಾರ್ತಿಕ ಅಂತ್ಯಕ್ಕೆ ತಲುಪಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.