ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾಸನ: ಎತ್ತಿನಹೊಳೆ ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದ್ದು, 24ಟಿಎಂಸಿ ನೀರು ಬೇಕು. 14 ಟಿಎಂಸಿ ಕುಡಿಯುವುದಕ್ಕೆ, 10 ಟಿಎಂಸಿ ಕೆರೆ ತುಂಬಿಸುವುದಕ್ಕೆ ಬೇಕು. ಈ ಯೋಜನೆಯನ್ನು ಪೂರ್ಣಗೊಳಿಸಿ, ಕುಡಿಯುವ ನೀರು ಮತ್ತು 527 ಕೆರೆಗಳನ್ನು ತುಂಬಿಸುವ ಕೆಲಸವನ್ನು ಮಾಡಿಯೇ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಎತ್ತಿನಹೊಳೆ ಯೋಜನೆ ಮಾಡಲು ಸಾಧ್ಯವೇ ಇಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿದ್ದರು. ಇದುವರೆಗೆ ₹17 ಸಾವಿರ ಕೋಟಿ ಖರ್ಚು ಮಾಡಿದ್ದು, ಮೊದಲ ಹಂತದ ಕೆಲಸ ಮುಗಿದಿದೆ. ಎರಡನೇ ಹಂತದ ಕೆಲಸ ಆರಂಭವಾಗಿದೆ. ಇನ್ನೂ ₹6 ಸಾವಿರ ಕೋಟಿ ಬೇಕಿದೆ. ಇನ್ನು ಎರಡು ವರ್ಷಗಳಲ್ಲಿ ಯೋಜನೆ ಸಂಪೂರ್ಣವಾಗಿ ಮುಗಿಸಿ, ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಕೊಡುತ್ತೇವೆ ಎಂದು ಹೇಳಿದರು.
ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತ ಆಗಿಲ್ಲ, ಆಗುವುದೂ ಇಲ್ಲ. ಇಡೀ ದೇಶದಲ್ಲಿಯೇ ತಲಾ ಆದಾಯ ಹೆಚ್ಚಾಗಿದ್ದರೆ, ಅದು ಕರ್ನಾಟಕದಲ್ಲಿ ಮಾತ್ರ. ತಲಾ ಆದಾಯದಲ್ಲಿ ನಾವೇ ನಂಬರ್ ವನ್. ಬಿಜೆಪಿಯವರಿಗೆ ಅರ್ಥಶಾಸ್ತ್ರ ಗೊತ್ತಿಲ್ಲ. ತಲಾ ಆದಾಯ ಹೆಚ್ಚಳವಾಗಲು, ಗ್ಯಾರಂಟಿ ಯೋಜನೆಗಳೇ ಕಾರಣ.
ಗ್ಯಾರಂಟಿಗಳ ನಂತರ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದ್ದು, ಸರ್ಕಾರದ ಆದಾಯ ಹೆಚ್ಚಾಗಿದೆ. ಇದರಿಂದ ತಲಾ ಆದಾಯ ಹೆಚ್ಚಾಗಿದೆ. ಅಭಿವೃದ್ಧಿಗೆ ಹಣ ಇಲ್ಲದೇ ಹೋಗಿದ್ದರೆ, ತಲಾ ಆದಾಯದಲ್ಲಿ ನಂಬರ್ ವನ್ ಆಗಲು ಆಗುತ್ತಿರಲಿಲ್ಲ. ಬಿಜೆಪಿಯವರು ಹೇಳುವ ಮಾತುಗಳು ಶುದ್ಧ ಸುಳ್ಳು. ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸರ್ಕಾರವಿದ್ದರೆ, ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಗ್ಯಾರಂಟಿ ಯೋಜನೆಗಳಿಗೆ ₹52 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ₹1.20 ಲಕ್ಷ ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಖರ್ಚು ಮಾಡುತ್ತಿದ್ದೇವೆ ಎಂದರು.
2013–2018 ರವರೆಗೆ 165 ಭರವಸೆಗಳಲ್ಲಿ, 158 ಭರವಸೆಗಳನ್ನು ಈಡೇರಿಸಿದ್ದೇವು. ಬಿಜೆಪಿಯವರು 600 ರಲ್ಲಿ, ಶೇ 10 ರಷ್ಟೂ ಈಡೇರಿಸಿಲ್ಲ. ಇಂಥವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಯಾವತ್ತೂ ಜನರ ಆಶೀರ್ವಾದ ಪಡೆದು, ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲಿನಿಂದ ಅಧಿಕಾರ ಹಿಡಿದು, ರಾಜ್ಯವನ್ನು ಲೂಟಿ ಮಾಡಿದರು. ಅದಕ್ಕಾಗಿ 2023 ರಲ್ಲಿ ಸೋಲುವಂತಾಯಿತು ಎಂದರು.
136 ಸ್ಥಾನಗಳನ್ನು ಗೆಲ್ಲಿಸಿದ್ದೀರಿ. 2028 ರಲ್ಲೂ ಅದೇ ರೀತಿ ಆಶೀರ್ವಾದ ಮಾಡಬೇಕು. ಕಾಂಗ್ರೆಸ್ ಸರ್ಕಾರ ಮಾತ್ರ ಜನರ ಕಷ್ಟ–ಸುಖಗಳಿಗೆ ಸ್ಪಂದಿಸುವ ಸರ್ಕಾರ. ಇಂದು ₹570 ಕೋಟಿ ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಡಿರುವ ಕಾಮಗಾರಿಗಳಿವು ಎಂದರು.
ಗ್ಯಾರಂಟಿಗಳಿಂದ ಖಜಾನೆ ಖಾಲಿಯಾಗಿದೆ. ಅಭಿವೃದ್ಧಿ ಕಾಮಗಾರಿಗಳು ಆಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತವೆ. ನೀವು ಇಲ್ಲಿಗೆ ಬಂದು ಕಣ್ಣಾರೆ ನೋಡಿ, ಅರಸೀಕೆರೆ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಗಮನಿಸಿ ಎಂದರು.
ಚುನಾವಣಾ ಪ್ರಚಾರ, ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸೇರಿದಂತೆ ನಾನು ಅನೇಕ ಬಾರಿ ಅರಸೀಕೆರೆಗೆ ಬಂದಿದ್ದೇನೆ. ಆದರೆ, ಇಷ್ಟೊಂದು ಜನರು ಸೇರಿರುವುದು ಇತಿಹಾಸ. ಶಿವಲಿಂಗೇಗೌಡರು ಜನಪರ ಶಾಸಕರಾಗದೇ ಇದ್ದರೆ, ಇಷ್ಟು ಜನ ಸೇರಲು ಸಾಧ್ಯ ಆಗುತ್ತಿರಲಿಲ್ಲ. ಶಿವಲಿಂಗೇಗೌಡರ ಜನಪ್ರಿಯತೆಯನ್ನು ಇದು ಸೂಚಿಸುತ್ತದೆ ಎಂದರು.
ಡಿ.ಕೆ. ಶಿವಕುಮಾರ್ ಹಾಗೂ ನನ್ನ ಬಳಿ ಬಂದು, ಇದು ಆಗಲೇಬೇಕು ಎಂದು ಶಿವಲಿಂಗೇಗೌಡರು ಹಟ ಹಿಡಿಯುತ್ತಾರೆ. ವಿಧಾನಸಭೆಯಲ್ಲಿ ಯಾವುದೇ ಚರ್ಚೆ ನಡೆದರೂ, ಅದರಲ್ಲಿ ಭಾಗವಹಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಶಿವಲಿಂಗೇಗೌಡರನ್ನು ಶಾಸಕರನ್ನಾಗಿ ಪಡೆದಿರುವ ನೀವೆಲ್ಲರೂ ಧನ್ಯರು ಎಂದರು.
ನಾನು ಅನೇಕ ಶಾಸಕರನ್ನು ನೋಡಿದ್ದೇನೆ. ಆದರೆ, ಶಿವಲಿಂಗೇಗೌಡರು ಕಚೇರಿಗಳಿಗೆ ಹೋಗಿ, ತಮ್ಮ ಕ್ಷೇತ್ರದ ಕೆಲಸಗಳನ್ನು ಕಾರ್ಯಗತಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ಇವರೇ ಗೆದ್ದು ಬರುತ್ತಾರೆ. ಬೇರೆ ಯಾರೂ ಮಾಡದಷ್ಟು ಕೆಲಸವನ್ನು ಮಾಡಿದ್ದಾರೆ ಎಂದರು.
ರಾಹುಲ್ ಗಾಂಧಿಯವರಿಗೆ ಸಾಮಾಜಿಕ ವ್ಯವಸ್ಥೆಯ ಪೂರ್ಣ ಮಾಹಿತಿ ಸಿಕ್ಕಿದ್ದು, ಸಾಮಾಜಿಕ ನ್ಯಾಯದ ಪರವಾಗಿ ಬದ್ಧತೆಯಿಂದ ಮಾತನಾಡುತ್ತಿದ್ದಾರೆ. ಸಮಾಜದ ಎಲ್ಲ ಬಡಜನರು, ಹಿಂದುಳಿದವರು, ದಲಿತರು, ರೈತರು, ಅಲ್ಪಸಂಖ್ಯಾತರು ಮುಖ್ಯವಾಹನಿಗೆ ಬರಬೇಕು. ಅಸಮಾನತೆಯನ್ನು ತೊಡೆದು ಹಾಕಬೇಕು. ಹೀಗಾಗಿ ಎಲ್ಲ ರಾಜ್ಯಗಳಲ್ಲೂ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಗಣತಿ ಮಾಡಲಾಗುತ್ತಿದೆ ಎಂದರು.
ಎಲ್ಲಿಯವರೆಗೆ ಅಸಮಾನತೆ, ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೆ ಸಮಾನತೆ ತರಲು ಕಷ್ಟವಾಗುತ್ತದೆ. ಸಮಸಮಾಜದ ನಿರ್ಮಾಣಕ್ಕಾಗಿ ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಯೋಜನೆಗಳನ್ನು ಕೊಟ್ಟಿದೆ ಎಂದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.
ಕೂಗಾಟ: ಮಾತು ನಿಲ್ಲಿಸಿದ ಸಿದ್ದರಾಮಯ್ಯ
ಶಿವಲಿಂಗೇಗೌಡರನ್ನು ಸಚಿವರನ್ನಾಗಿ ಮಾಡಬೇಕು ಎಂದು ಜನರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರಿಗೆ ಒಳ್ಳೆಯ ರಾಜಕೀಯ ಭವಿಷ್ಯವಿದೆ ಎಂದು ಹೇಳಿದರು.
ಆದರೂ ಕೂಗಾಟ ಮುಂದುವರಿಸಿದ್ದರಿಂದ ಮಾತು ನಿಲ್ಲಿಸಿದ ಸಿದ್ದರಾಮಯ್ಯ ಕುರ್ಚಿಯತ್ತ ತೆರಳಿದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಶಿವಲಿಂಗೇಗೌಡ, ಜನರನ್ನು ಸುಮ್ಮನೆ ಕೂರಿಸಿದರು.
ನಂತರ ಮಾತು ಮುಂದುವರಿಸಿದ ಸಿದ್ಧರಾಮಯ್ಯ, ಸಚಿವರನ್ನು ಮಾಡುವುದು ಹೈಕಮಾಂಡ್ ಮತ್ತು ನಮ್ಮ ಸರ್ಕಾರ. ಶಿವಲಿಂಗೇಗೌಡರು ಸಚಿವರಾಗಲು ಎಲ್ಲ ಅರ್ಹತೆ ಹೊಂದಿದ್ದಾರೆ. ನಿಮ್ಮ ಅಭಿಮಾನ, ಪ್ರೀತಿ ಅವರ ಮೇಲೆ ಇದೇ ರೀತಿ ಇರಲಿ. ಇದೆಲ್ಲವನ್ನೂ ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.