ADVERTISEMENT

ಹೊಳೆನರಸೀಪುರ: ಸೌಲಭ್ಯಗಳಿಲ್ಲದ ಸೊರಗುತ್ತಿದೆ ಶತಮಾನದ ಶಾಲೆ

ಹಳ್ಳಿಮೈಸೂರಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯಗಳ ಕೊರತೆ

ಎಚ್.ವಿ.ಸುರೇಶ್ ಕುಮಾರ್‌
Published 2 ಜೂನ್ 2023, 23:30 IST
Last Updated 2 ಜೂನ್ 2023, 23:30 IST
ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರಿನ ಶತಮಾನದ ಶಾಲೆ ಸೌಲಭ್ಯ ವಂಚಿತವಾಗಿದೆ
ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರಿನ ಶತಮಾನದ ಶಾಲೆ ಸೌಲಭ್ಯ ವಂಚಿತವಾಗಿದೆ   

ಹೊಳೆನರಸೀಪುರ: ತಾಲ್ಲೂಕಿನ ಹಳ್ಳಿಮೈಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನ ತುಂಬಿದ್ದು, ಇದೀಗ ಸೌಲಭ್ಯಗಳಿಲ್ಲದೇ ಸೊರಗುತ್ತಿದೆ.

ಈ ಶಾಲೆ 1899 ರಲ್ಲಿ ಪ್ರಾರಂಭಗೊಂಡಿದ್ದು, 1992ರಲ್ಲಿ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಉನ್ನತೀಕರಿಸಿ ಇಂಗ್ಲಿಷ್‌ ಬೋಧನೆಯನ್ನೂ ಪ್ರಾರಂಭಿಸಲಾಯಿತು. ಶತಮಾನ ತುಂಬಿದ ಶಾಲೆಗೆ ರೈಲ್ವೆ ಬೋಗಿಯ ಮಾದರಿಯಲ್ಲಿ ಬಣ್ಣ ಹೊಡೆದು ಸಿಂಗರಿಸಿದರೂ, ಯಾವುದೇ ಸೌಲಭ್ಯಗಳನ್ನು ಒದಗಿಸಲಿಲ್ಲ.

1 ರಿಂದ 7 ನೇ ತರಗತಿವರೆಗೆ 187 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಬಾಗಿಲುಗಳಿಲ್ಲದ ಮೂರು ಶೌಚಾಲಯಗಳಿದ್ದು, ಶೌಚಾಲಯದಲ್ಲಿ ನೀರಿನ ಸೌಲಭ್ಯ ಇಲ್ಲದ ಕಾರಣ, ಮಕ್ಕಳು ಶಾಲೆಯ ಮೈದಾನವನ್ನೇ ಶೌಚಾಲಯವನ್ನಾಗಿ ಬಳಸುತ್ತಿದ್ದಾರೆ.

ADVERTISEMENT

ಶಾಲೆಯು ಮಂಗಳೂರು ಹಂಚಿನ ಕಟ್ಟಡದಲ್ಲಿ ನಡೆಯುತ್ತಿದೆ. ಕೆಲವು ಕೊಠಡಿಗಳಲ್ಲಿ ಹೆಂಚು ಹಾರಿ ಹೋಗಿವೆ. ಶಾಲೆಯ ಆವರಣದಲ್ಲಿ ಎಲ್ಲಿಯೂ ಚರಂಡಿ ಇಲ್ಲದೇ ಮಳೆ ಹಾಗೂ ಚರಂಡಿ ನೀರು ಶಾಲೆಯ ಆವರಣಕ್ಕೆ ಹರಿಯುತ್ತಿದೆ. ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಿದೆ.

ಶಾಲೆಯಲ್ಲಿ ಮಕ್ಕಳಿಗೆ ಬಿಸಿಊಟ ನೀಡಲಾಗುತ್ತಿದ್ದು, ಊಟ ಮಾಡಿದ ತಟ್ಟೆ ತೊಳೆಯಲು ನೀರಿನ ಸೌಲಭ್ಯ ಇಲ್ಲ. ಶಾಲೆಯ ನೀರಿನ ಸೌಲಭ್ಯಕ್ಕಾಗಿ ಶಾಲೆಯ ಮುಂಭಾಗದಲ್ಲಿ ಒಂದು ಕೊಳವೆಬಾವಿ ಇದ್ದು, ನಾಲ್ಕೈದು ವರ್ಷಗಳಾಗಿದ್ದರೂ ದುರಸ್ತಿ ಆಗಿಲ್ಲ.

ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ. ಈ ಶಾಲೆಯ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಹೆಚ್ಚಿನ ಬೇಡಿಕೆ ಇದೆ. ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಶೈಲಜಾ, ಶಾಲೆಯ ದುರಸ್ತಿಗಾಗಿ ಇಲಾಖೆಗೆ ಪತ್ರ ಬರೆದಿದ್ದು, ಸೌಲಭ್ಯಗಳು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಶಾಲೆಯ ಮಕ್ಕಳಿಗಾಗಿ ಸಾರ್ವಜನಿಕರು ಈ ಹಿಂದೆ ನೋಟ್ ಪುಸ್ತಕ ಹಾಗೂ ಕುಡಿಯುವ ನೀರಿನ ಫಿಲ್ಟರ್‌ಗಳನ್ನು ನೀಡಿದ್ದರು. ಈ ವರ್ಷವೂ ದಾನಿಗಳು ನಮ್ಮ ಶಾಲೆಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿ ಎಂದು ಮುಖ್ಯ ಶಿಕ್ಷಕಿ ಶೈಲಜಾ ಮನವಿ ಮಾಡಿದ್ದಾರೆ.

ಶಾಲೆಯ ಆವರಣದಲ್ಲಿರುವ ಬಾಗಿಲು ಇಲ್ಲದ ಶೌಚಾಲಯ

ಕಟ್ಟಡಕ್ಕೆ ಬಣ್ಣ ಬಳಿದಿದ್ದರೂ, ಮೂಲಸೌಕರ್ಯ ಮರೀಚಿಕೆ ಶಾಲೆಯ ಮೈದಾನವೇ ಶೌಚಾಲಯವಾಗಿ ಪರಿವರ್ತನೆ ನಾಲ್ಕು ವರ್ಷಗಳಿಂದ ದುರಸ್ತಿಗೆ ಕಾದಿರುವ ಕೊಳವೆಬಾವಿ

ಈ ಶಾಲೆಗೆ ಸೌಲಭ್ಯ ಒದಗಿಸಬೇಕು. ಹೆಂಚಿನ ಕಟ್ಟಡ ಕೆಡವಿ ಆರ್‌ಸಿಸಿ ಕಟ್ಟಡ ನಿರ್ಮಿಸಬೇಕು. ತಾಲ್ಲೂಕಿನ ದೊಡ್ಡಹೋಬಳಿ ಕೇಂದ್ರವಾಗಿರುವ ಹಳ್ಳಿಮೈಸೂರಿನ ಶಾಲೆಗಳಿಗೆ ಸುಸಜ್ಜಿತ ಕಟ್ಟಡ ಮೂಲಸೌಕರ್ಯ ಒದಗಿಸಬೇಕು. ಓಹಿಲೇಶ್ವರ ಗ್ರಾಮದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.