ಹಾಸನ: ಹಾಸನಾಂಬೆ ದರ್ಶನೋತ್ಸವದ 3ನೇ ದಿನವಾದ ಶನಿವಾರ ಮುಸ್ಲಿಮರು ದರ್ಶನ ಪಡೆದರು. ಈ ಮೂಲಕ ಉತ್ಸವವು ಸೌಹಾರ್ದದ ಸಂದೇಶ ಸಾರಿತು.
ವಿಜಯಪುರದ ಅನ್ವರ್ ಹುಸೇನ್ ಹಾಗೂ ಸಕಲೇಶಪುರ ತಾಲ್ಲೂಕಿನ ಹುರುಡಿ ಗ್ರಾಮದ ಹಸೀನಾ ಲತೀಫ್ ದರ್ಶನ ಪಡೆದರು. ವಿಜಯಪುರ ಜಿಲ್ಲೆಯಿಂದ ಸ್ನೇಹಿತರ ಜೊತೆ ಬಂದಿದ್ದ ಅನ್ವರ್ ವಕೀಲರು. ₹ 300 ಟಿಕೆಟ್ ಪಡೆದು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
‘ಸೃಷ್ಟಿಕರ್ತ ಎಲ್ಲರಿಗೂ ಒಂದೇ. ದೇವರು, ದೈವ ಭಕ್ತಿಗೆ ಭೇದವಿಲ್ಲ. ದಯೆ, ಕರುಣೆಯಲ್ಲಿ ಇಲ್ಲದ ಭಿನ್ನತೆ ನಮ್ಮಲ್ಲಿ ಏಕೆ? ಎಲ್ಲರೂ ಒಂದೇ. ಹಾಗಾಗಿ ನಾನು ದರ್ಶನಕ್ಕೆ ಬಂದೆ’ ಎಂದು ಅನ್ವರ್ ಹೇಳಿದರು.
‘3 ವರ್ಷಗಳಿಂದ ದರ್ಶನ ಪಡೆಯುತ್ತಿದ್ದೇನೆ. ಸ್ನೇಹಿತರು ದರ್ಗಾಕ್ಕೆ ಬರುತ್ತಾರೆ. ನಾವು ಅವರೊಟ್ಟಿಗೆ ದೇವರ ದರ್ಶನಕ್ಕೆ ಬರುತ್ತೇವೆ’ ಎಂದರು.
ಸ್ನೇಹಿತೆ ಜೊತೆ ದರ್ಶನ ಪಡೆದ ಹಸೀನಾ: ಸಕಲೇಶಪುರ ತಾಲ್ಲೂಕಿನ ಹುರುಡಿ ಗ್ರಾಮದ ಹಸೀನಾ ಲತೀಫ್, ಸ್ನೇಹಿತೆ ದೀಪಾ ಹಾಗೂ ಕುಟುಂಬದೊಂದಿಗೆ ದರ್ಶನ ಪಡೆದರು.
ನಂತರ ಮಾತನಾಡಿ, ‘ಮೂರು ವರ್ಷಗಳಿಂದ ದರ್ಶನ ಪಡೆಯುತ್ತಿದ್ದೇನೆ. ನನಗೆ ಯಾವುದೇ ಧರ್ಮದ ಭೇದವಿಲ್ಲ. ಸಾಮಾನ್ಯ ಸಾಲಿನಲ್ಲಿ ನಿಂತೇ ದರ್ಶನ ಪಡೆದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.