ADVERTISEMENT

ಹಳೇಬೀಡು | ಹೆಚ್ಚು ರಸಗೊಬ್ಬರ ಬಳಕೆ ಸಲ್ಲ: ಸುಭಾಷ್ ಪಾಳೇಕರ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 2:59 IST
Last Updated 6 ಜನವರಿ 2026, 2:59 IST
ಹಳೇಬೀಡು ಸಮೀಪದ ಪುಷ್ಪಗಿರಿಯಲ್ಲಿ ನಡೆದ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಚುಕ್ಕಿ ನಂಜುಂಡಸ್ವಾಮಿ ರೈತರೊಂದಿಗೆ ಮಾತುಕತೆ ನಡೆಸಿದರು
ಹಳೇಬೀಡು ಸಮೀಪದ ಪುಷ್ಪಗಿರಿಯಲ್ಲಿ ನಡೆದ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಚುಕ್ಕಿ ನಂಜುಂಡಸ್ವಾಮಿ ರೈತರೊಂದಿಗೆ ಮಾತುಕತೆ ನಡೆಸಿದರು   

ಹಳೇಬೀಡು: ‘ರೈತರು ಅನ್ನದಾತರಾಗಿ ಉಳಿಯಬೇಕೇ ಹೊರೆತು ವಿಷದಾತರಾಗಬಾರದು. ಭಾರೀ ಪ್ರಮಾಣದಲ್ಲಿ ರಸಗೊಬ್ಬರ, ಕೀಟನಾಶಕ ಮೊದಲಾದ ವಿಷಯುಕ್ತ ಔಷಧಿ ಬಳಸಿ ತರಕಾರಿ ಬೆಳೆಯಲಾಗುತ್ತಿದೆ’ ಎಂದು ರಾಜ್ಯ ರೈತ ಸಂಘದ ಸಾಮೂಹಿಕ ಅಧ್ಯಕ್ಷಿಯ ಮಂಡಳಿ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ ಕಳವಳ ವ್ಯಕ್ತಪಡಿಸಿದರು. 

ಪುಷ್ಪಗಿರಿಯಲ್ಲಿ ನಡೆಯುತ್ತಿರುವ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಾಗಾರದ ಮೂರನೇ ದಿನವಾದ ಸೋಮವಾರ ಅವರು ಮಾತನಾಡಿದರು.

‘ಹಳೇಬೀಡು ಭಾಗದಲ್ಲಿ ಹೆಚ್ಚು ತರಕಾರಿ ಬೆಳೆಯುವುದರಿಂದ ಪುಷ್ಪಗಿರಿಯಲ್ಲಿ ಕಾರ್ಯಾಗಾರ ಆಯೋಜಿಸಿದ್ದೇವೆ’ ಎಂದರು.

ADVERTISEMENT

ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ನೋಂದಣಿ ಮಾಡಿಸಿದ ರೈತರು ಮಾತ್ರವಲ್ಲದೆ, ಸಾಕಷ್ಟು ಜನರು ಕಾರ್ಯಾಗಾರಕ್ಕೆ ಆಗಮಿಸುತ್ತಿದ್ದಾರೆ. ಸಭಾಂಗಣ ಭರ್ತಿಯಾಗುವ ಸೂಚನೆ ಕಂಡು ಬಂದಿದ್ದರಿಂದ ಹೊರ ಆವರಣದಲ್ಲಿ ಎಲ್ಇಡಿ ಪರದೆಯಲ್ಲಿ ಕಾರ್ಯಕ್ರಮ ವೀಕ್ಷಿಸಲು ಅನುಕೂಲ ಕಲ್ಪಿಸಿದ್ದೇವೆ’ ಎಂದು ಹೇಳಿದರು.

‘ಕರ್ನಾಟಕದವರು ಮಾತ್ರವಲ್ಲದೆ ಹೊರ ರಾಜ್ಯ ಹಾಗೂ ಹೊರ ದೇಶದವರು ಭಾಗವಹಿಸಿ, ನೈಸರ್ಗಿಕ ಕೃಷಿ ಅಳವಡಿಸಲು ಮುಂದಾಗಿರುವುದು ಸಂತಸದ ವಿಚಾರ. ರೈತ ಬದುಕಿದರೆ ದೇಶ ಉಳಿಯುತ್ತದೆ.‌ ಹೀಗಾಗಿ ರೈತರು ಸ್ವಾವಲಂಬಿಗಳಾಗಿ ಭೂಮಿಯ ಜೊತೆಯಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದರು.

ಮುಖಂಡರಾದ ಹೊನ್ನೂರು ಪ್ರಕಾಶ್, ಕಣಗಾಲ್ ಮೂರ್ತಿ, ಟಿ.ಬಿ.ಹಾಲಪ್ಪ, ರಾಜಗೆರೆ ಗಂಗಾಧರಪ್ಪ, ಅಡುಗೆ ರಾಜು, ಮುನ್ನಾಭಾಯ್, ಎಲ್.ಈ.ಶಿವಪ್ಪ, ಶ್ರೀನಿವಾಸ, ಮಹೇಶ್, ಶಿವಕುಮಾರ್ ಪಾಲ್ಗೊಂಡಿದ್ದರು.

ಕಾರ್ಖಾನೆ ಬೆಲ್ಲ ಅಪಾಯಕಾರಿ ‘ಕಾರ್ಖಾನೆಯಲ್ಲಿ ತಯಾರಿಸುವ ಬೆಲ್ಲವನ್ನು ಉಪಯೋಗಿಸಬಾರದು ಕೈತೋಟದಲ್ಲಿಯೂ ಕಬ್ಬು ಬೆಳೆದು ಶುದ್ಧವಾದ ಬೆಲ್ಲವನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು’ ಎಂದು ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್ ಹೇಳಿದರು. ‘ಬೆಳೆಯ ಬೇರಿನ ಮಣ್ಣನ್ನು ಬಟ್ಟೆಯಲ್ಲಿ ಕಟ್ಟಿ ನಂತರ ಸಗಣಿ ಸವರಿ ಇಟ್ಟುಕೊಳ್ಳಬೇಕು. ಈ ಮಣ್ಣಿನಲ್ಲಿ ಮುಂದಿನ ಋತುಮಾನದ ಬೆಳೆಗೆ ಜೀವಾಮೃತ ಹಾಗೂ ಬೀಜಾಮೃತ ಮಾಡಲು ಬಳಸಬೇಕು. ಕಾಳಿನ ಹಿಟ್ಟು ಬದುವಿನ ಮಣ್ಣು ಬಳಸಿ ಜೀವಾಮೃತ ಮಾಡಿ ಭೂಮಿಗೆ ಬಳಸಬೇಕು. ಪಾಲಿಹೌಸ್‌ನಲ್ಲಿರುವ ಮಣ್ಣು ಹುತ್ತದ ಮಣ್ಣು ಗೆದ್ದಲು ಹಿಡಿದ ಮಣ್ಣು ಬಳಸಬಾರದು’ ಎಂದು  ಸಲಹೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.