ADVERTISEMENT

ಹಾಸನ ಕ್ಷೇತ್ರದ ಅಭ್ಯರ್ಥಿ ನಾನೇ: ಭವಾನಿ ರೇವಣ್ಣ ಘೋಷಣೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 17:47 IST
Last Updated 24 ಜನವರಿ 2023, 17:47 IST
ಜಿ.ಪಂ. ಮಾಜಿ ಸದಸ್ಯೆ ಭವಾನಿ ರೇವಣ್ಣ
ಜಿ.ಪಂ. ಮಾಜಿ ಸದಸ್ಯೆ ಭವಾನಿ ರೇವಣ್ಣ    

ಹಾಸನ: ತೀವ್ರ ಕುತೂಹಲ ಕೆರಳಿಸಿರುವ ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಗೊಂದಲ ಮುಂದುವರಿದಿರುವಾಗಲೇ, 'ನಾನೇ ಅಭ್ಯರ್ಥಿ' ಎಂದು ಜಿ.ಪಂ. ಮಾಜಿ ಸದಸ್ಯೆ ಭವಾನಿ ರೇವಣ್ಣ ಸಮಾರಂಭ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಹಾಸನ ತಾಲ್ಲೂಕಿನ ಸಾಲಗಾಮೆ ಹೋಬಳಿ ಕಕ್ಕೆಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಣ್ಣಪ್ಪ ಸ್ವಾಮಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಮಾತನಾಡಿರುವ ಅವರು, 'ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕು ಎಂದು ಎಲ್ಲರೂ ಮಾತನಾಡಿಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ. ಸ್ವಲ್ಪ ದಿನಗಳಲ್ಲೇ ನನ್ನ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ' ಎಂದಿದ್ದಾರೆ.

'ಜನರ ಪರಿಚಯ ಇದ್ದರೆ, ಊರಿನ ಪರಿಚಯ ಆಗುತ್ತದೆ. 'ಮುಂದಿನ ದಿನಗಳಲ್ಲಿ ಕೆಲಸ ಮಾಡಲು ನನಗೂ ಒಳ್ಳೆಯದು. ಅನುಕೂಲ ಆಗಲಿದೆ. ಅದಕ್ಕಾಗಿ ಕ್ಷೇತ್ರ ಪ್ರವಾಸ ಮಾಡುತ್ತಿದ್ದೇನೆ' ಎಂದು ಹೇಳಿದ್ದಾರೆ.

ADVERTISEMENT

ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಕೆಲಸ ಮಾಡಲು, ಭಗವಂತ ನನಗೆ ಆಶೀರ್ವಾದ ಮಾಡಲಿ ಎಂದು ಬೇಡುವೆ. ಮತ್ತೊಮ್ಮೆ ಈ ಊರಿಗೆ ಬರುವೆ, ನಿಮ್ಮನ್ನು ಮತ್ತೆ ಭೇಟಿ ಮಾಡುವೆ' ಎಂದು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.

ಮಾತಿನ ಆರಂಭದಲ್ಲಿ ಗ್ರಾಮಕ್ಕೆ ಈ ಹಿಂದೆ ಮಾಜಿ ಸಚಿವ ರೇವಣ್ಣ ಅವರು ಮಾಡಿರುವ ಕೆಲಸ ಕಾರ್ಯಗಳನ್ನು ಪ್ರಸ್ತಾಪಿಸಿರುವ ಭವಾನಿ ಅವರು, 'ಕಳೆದ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ನಮ್ಮ ಕೈತಪ್ಪಿ ಹೋಗಿದ್ದರಿಂದ ಅನೇಕ ಕೆಲಸ ಕಾರ್ಯಗಳು ಹಾಗೆಯೇ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸಬೇಕಿದೆ. ಮುಂದಿನ 90 ದಿನಗಳಲ್ಲಿ ಚುನಾವಣೆ ಮುಗಿದು ಹೋಗಲಿದ್ದು, ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿ' ಎಂದು ಪರೋಕ್ಷವಾಗಿ ಮತಯಾಚನೆ ಆರಂಭಿಸಿದ್ದಾರೆ.

ನನಗೇ ಟಿಕೆಟ್‌: ಸ್ವರೂಪ್‌

ಹಾಸನ: ‘ಕ್ಷೇತ್ರದಲ್ಲಿ ಚುನಾವಣೆ ಸಂಬಂಧ ಸಂಚರಿಸುತ್ತಿದ್ದು, ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಪಕ್ಷದ ಗೆಲುವು ಶತಸಿದ್ಧ. ವರಿಷ್ಠರು ನನಗೇ ಟಿಕೆಟ್ ಕೊಡುವರೆಂಬ ಭರವಸೆ ಇದೆ’ ಎಂದು ಟಿಕೆಟ್‌ ಆಕಾಂಕ್ಷಿ ಎಚ್.ಪಿ ಸ್ವರೂಪ್ ಪ್ರತಿಕ್ರಿಯಿಸಿದ್ದಾರೆ.

‘ಭವಾನಿ ಅವರ ಹೇಳಿಕೆ ಕುರಿತು ಸ್ನೇಹಿತರು, ಹಿತೈಷಿಗಳು ಕರೆ ಮಾಡಿ ಕೇಳುತ್ತಿದ್ದಾರೆ. ಟಿಕೆಟ್‌ ಅಂತಿಮವಾಗಿಲ್ಲ ಎಂದೇ ಹೇಳುತ್ತಿದ್ದೇನೆ. ಕಾರ್ಯಕರ್ತರೂ ಗೊಂದಲಕ್ಕೆ ಒಳಗಾಗಬಾರದು’ ಎಂದು ಕೋರಿದ್ದಾರೆ.

‘ಅಭ್ಯರ್ಥಿ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಜಿಲ್ಲೆಯ ಹಾಲಿ ಶಾಸಕರ ಕ್ಷೇತ್ರಗಳನ್ನು ಹೊರತುಪಡಿಸಿ ಹಾಸನ, ಅರಸೀಕೆರೆ, ಅರಕಲಗೂಡು ಕ್ಷೇತ್ರಗಳ ಟಿಕೆಟ್ ಯಾರಿಗೆ ಎಂಬುದನ್ನು ವರಿಷ್ಠರೇ ನಿರ್ಧರಿಸುತ್ತಾರೆ’ ಎಂದಿದ್ದಾರೆ. ‘ದೇವೇಗೌಡರು ಹಾಗೂ ರೇವಣ್ಣ ಅವರ ಆಶೀರ್ವಾದ ನಮ್ಮ ಕುಟುಂಬದ ಮೇಲಿದೆ. ಆರು ಬಾರಿ ಟಿಕೆಟ್‌ ಪಡೆದಿದ್ದ ನಮ್ಮ ತಂದೆ ಎಚ್‌.ಎಸ್.ಪ್ರಕಾಶ್, ನಾಲ್ಕು ಬಾರಿ ಶಾಸಕರಾಗಿದ್ದರು. ಅವರ ಸಾವಿನ ನಂತರವೂ ರೇವಣ್ಣ ಬೆಂಬಲವಾಗಿ ನಿಂತಿದ್ದು, ಸಕ್ರಿಯವಾಗಿ ರಾಜಕೀಯದಲ್ಲಿ ಮುಂದುವರೆಯುವಂತೆ ಹಲವು ಬಾರಿ ಸಲಹೆ ನೀಡಿದ್ದರು’ ಎಂದಿದ್ದಾರೆ.

‘ಪ್ರತಿಸ್ಪರ್ಧಿ ನೋಡಿ ಪ್ರತಿಕ್ರಿಯೆ’

ಹಾಸನ: ‘ಜೆಡಿಎಸ್‌ನಲ್ಲಿ ಆಕಾಂಕ್ಷಿಗಳಾದ ಭವಾನಿ ರೇವಣ್ಣ, ಬಾಗೂರು ಮಂಜೇಗೌಡ, ಎಚ್‌.ಪಿ ಸ್ವರೂಪ್ ಪೈಕಿ ಯಾರು ಸ್ಪರ್ಧಿಸುತ್ತಾರೆ ಎಂಬುದು ಮೊದಲು ಖಚಿತವಾಗಬೇಕು. ಆಗಷ್ಟೇ ಪ್ರತಿಕ್ರಿಯಿಸುವೆ’ ಎಂದು ಹಾಸನದ ಹಾಲಿ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಹೇಳಿದ್ದಾರೆ.

‘ಈ ಕ್ಷೇತ್ರದಲ್ಲಿ ಪಕ್ಷದಿಂದ ಮತ್ತೆ ನನಗೇ ಟಿಕೆಟ್‌ ನೀಡುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ವರಿಷ್ಠರ ಸೂಚನೆ ಮೇರೆಗೆ ಸ್ಪರ್ಧೆ ನಿರ್ಧಾರವಾಗಲಿದೆ’ ಎಂದಿದ್ದಾರೆ.

***

ಭವಾನಿ ರೇವಣ್ಣ ಹಾಸನದಿಂದ ಸ್ಪರ್ಧಿಸುವ ವಿಚಾರದಲ್ಲಿ ಪಕ್ಷವೇ ತೀರ್ಮಾನ ತೆಗೆದುಕೊಳ್ಳಲಿದೆ ಎಚ್‌.ಡಿ. ಕುಮಾರಸ್ವಾಮಿ

– ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ಭವಾನಿ ರೇವಣ್ಣ ಸ್ಪರ್ಧಿಸುವ ವಿಚಾರ ದೊಡ್ಡವರಿಗೆ ಬಿಟ್ಟದ್ದು. ನಾನು ಶಾಸಕನಾಗಬೇಕೆಂದಿದ್ದೆ. ಆದರೆ, ದೇವೇಗೌಡರು ಹಾಸನದಿಂದ ಸ್ಪರ್ಧಿಸುವಂತೆ ಹೇಳಿದ್ದರಿಂದ ಸಂಸದನಾದೆ.

– ಪ್ರಜ್ವಲ್ ರೇವಣ್ಣ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.