ADVERTISEMENT

ಹಳೇಬೀಡು | ಅಧಿಕ ಆವಕ: ಕ್ವಿಂಟಲ್ ಈರುಳ್ಳಿಗೆ ಕೇವಲ ₹700!

ಸಾಗಣೆ ವೆಚ್ಚವೂ ಸಿಗುತ್ತಿಲ್ಲ ಎಂದು ಬೆಳೆಗಾರರ ಅಳಲು

ಎಚ್.ಎಸ್.ಅನಿಲ್ ಕುಮಾರ್
Published 20 ಅಕ್ಟೋಬರ್ 2025, 7:24 IST
Last Updated 20 ಅಕ್ಟೋಬರ್ 2025, 7:24 IST
ಹಳೇಬೀಡು ಬಳಿಯ ಬಸ್ತಿಹಳ್ಳಿಯಲ್ಲಿ ರಸ್ತೆ ಬದಿ ಕೊಳೆಯುತ್ತಿರುವ ಈರುಳ್ಳಿ
ಹಳೇಬೀಡು ಬಳಿಯ ಬಸ್ತಿಹಳ್ಳಿಯಲ್ಲಿ ರಸ್ತೆ ಬದಿ ಕೊಳೆಯುತ್ತಿರುವ ಈರುಳ್ಳಿ   

ಹಳೇಬೀಡು: ಈರುಳ್ಳಿ ಕೇಳುವವರಿಲ್ಲದೆ ಹಳೇಬೀಡು ಭಾಗದ ಬೆಳೆಗಾರರು ಕಣ್ಣೀರು ಸುರಿಸುವಂತಾಗಿದೆ. ಟನ್‌ಗಟ್ಟಲೆ ಈರುಳ್ಳಿ ಹೊಲದಲ್ಲಿಯೇ ಕೊಳೆಯುತ್ತಿದ್ದು, ಬಸ್ತಿಹಳ್ಳಿಯ ರಸ್ತೆ ಬದಿಯಲ್ಲಿ ರಾಶಿ ಬಿದ್ದಿದೆ. ಇಂದಲ್ಲ ನಾಳೆ ಬೆಲೆ ಬರಬಹುದು ಎಂದು ಇನ್ನೂ ಹಲವು ರೈತರು ಈರುಳ್ಳಿ ಸಂರಕ್ಷಿಸಿಕೊಂಡು ಕಾಯುತ್ತಿದ್ದಾರೆ.

‘ಈ ವರ್ಷ ರೈತರು ವ್ಯಾಪಕವಾಗಿ ಈರುಳ್ಳಿ ಬೆಳೆದಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಆವಕಗೊಂಡಿದೆ. ಇದರಿಂದಾಗಿ ಈರುಳ್ಳಿ ಕೇಳುವವರಿಲ್ಲದಂತಾಗಿದೆ’ ಎಂದು ಬೆಳೆಗಾರ ಶಂಕರಲಿಂಗಪ್ಪ ಅಳಲು ತೋಡಿಕೊಂಡರು.

‘ಗುಣಮಟ್ಟದ 40 ಕ್ವಿಂಟಲ್ ಈರುಳ್ಳಿ ದಾಸ್ತಾನು ಮಾಡಿದ್ದೇವೆ. ಸದ್ಯದ ದರವನ್ನು ನೋಡಿದರೆ, ಹಾಸನ ಮಾರುಕಟ್ಟೆಗೆ ಸಾಗಿಸುವ ಹಣವೂ ಬರದಂತಾಗಿದೆ. ತೆಗೆದುಕೊಂಡು ಹೋದ ಈರುಳ್ಳಿಯನ್ನು ವರ್ತಕರು ಖರೀದಿಸದಿದ್ದರೆ, ಪುನಃ ಈರುಳ್ಳಿ ಮನೆಗೆ ತರಲು ವಾಹನಕ್ಕೆ ಬಾಡಿಗೆ ಕೊಡಬೇಕು. ನಷ್ಟದ ಬದುಕಿನಲ್ಲಿ ಈರುಳ್ಳಿ ಮಾರಾಟಕ್ಕೆ ಹೊರಟರೆ, ಖರ್ಚು–ವೆಚ್ಚ ಸುಧಾರಿಸಿಕೊಳ್ಳಲು ಕಷ್ಟವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಮಾರುಕಟ್ಟೆಯಲ್ಲಿ ರೈತರಿಂದ ₹700ಕ್ಕೆ ಈರುಳ್ಳಿ ಖರೀದಿ ಮಾಡುತ್ತಿದ್ದಾರೆ. ಕನಿಷ್ಠ ₹ 2ಸಾವಿರಕ್ಕೆ ಮಾರಾಟವಾಗಿದ್ದರೂ, ಖರ್ಚು ವೆಚ್ಚ ನಿಭಾಯಿಸಿಕೊಂಡು, ಸ್ವಲ್ಪ ಲಾಭ ಕಾಣಬಹುದಾಗಿತ್ತು’ ಎಂದು ರೈತ ದೇವರಾಜು ಹೇಳಿದರು.

‘ಹಳೇಬೀಡು ಭಾಗದಲ್ಲಿ ಅಂದಾಜು 30 ಎಕರೆ ಈರುಳ್ಳಿ ಬೆಳೆದಿದ್ದಾರೆ. ಬೇಲೂರು ತಾಲ್ಲೂಕಿನಲ್ಲಿ 70 ಎಕರೆ ಈರುಳ್ಳಿ ಬೆಳೆದಿರಬಹುದು. ಈರುಳ್ಳಿ ಹಳೇಬೀಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಲ್ಲ. ಆದರೂ 100ಕ್ಕೂ ಹೆಚ್ಚು ಬೆಳೆಗಾರರಿಗೆ ನಷ್ಟವಾಗಿದೆ. ಚಿಕ್ಕಮಗಳೂರು ಜಿಲ್ಲೆಯ‌ ಅಜ್ಜಂಪುರ ಮೊದಲಾದ ಬಯಲು ಸೀಮೆಯಲ್ಲಿ ಈ ವರ್ಷ ಈರುಳ್ಳಿ ಹೆಚ್ಚಾಗಿ ಬೆಳೆದಿದ್ದಾರೆ. ಹೊರ ರಾಜ್ಯದಿಂದಲೂ ಈರುಳ್ಳಿ ಬಂದಿದೆ. ಹೀಗಾಗಿ ಈರುಳ್ಳಿಗೆ ಬೇಡಿಕೆ ಇಲ್ಲದಂತಾಗಿದೆ’ ಎಂದು ಯೋಗೀಶ್ ಹೇಳಿದರು.

ಮಳೆಯಿಂದ ಈರುಳ್ಳಿ ಸಂರಕ್ಷಿಸಲು ಹಳೇಬೀಡಿನ ಕೇದಾರೇಶ್ವರ ದೇವಾಲಯ ಬಳಿ ಟಾರ್ಪಾಲ್ ಹಾಕಿರುವುದು

ಈರುಳ್ಳಿ ಒಣಗಿಸಲು ಮಳೆ ಕಾಟ

ನಿರಂತರ‌ ಮಳೆ ಬರುತ್ತಿರುವುದರಿಂದ ಈರುಳ್ಳಿ ಸಂರಕ್ಷಿಸಲು ಹರಸಾಹಸ ಮಾಡುವಂತಾಗಿದೆ. ಮನೆ ಅಂಗಳ ಇಲ್ಲವೇ ಕಣದಲ್ಲಿ ಹರಡಿದ ಈರುಳ್ಳಿಗೆ ಟಾರ್ಪಾಲ್ ಹಾಸಿಕೊಂಡು ಬಿಸಿಲಿಗಾಗಿ ರೈತರು ಕಾಯುತ್ತಿದ್ದಾರೆ. ‘ಮೋಡದ ವಾತಾವರಣ ಆಗಾಗ್ಗೆ ಬೀಳುತ್ತಿರುವ ಮಳೆಯಿಂದ ಟಾರ್ಪಾಲ್‌ ತೆಗೆಯಲು ಸಾಧ್ಯವಾಗುತ್ತಿಲ್ಲ. ಮಳೆಯಲ್ಲಿ ನೆನೆದರೆ ಈರುಳ್ಳಿ ಕೊಳೆತು ಹೋಗುತ್ತದೆ. ಗಾಳಿ ಆಡದಂತೆ ಟಾರ್ಪಾಲ್‌ನಿಂದ ಮುಚ್ಚಿಟ್ಟರೂ ಹಾಳಾಗುತ್ತದೆ. ಈರುಳ್ಳಿ ಬೆಳೆಗಾರರ ಸ್ಥಿತಿ ಅಡಿಕೆ ಕತ್ತರಿಯಲ್ಲಿ ಸಿಕ್ಕಿದಂತಾಗಿದೆ’ ಎಂದು ರೈತ ಬಸ್ತಿಹಳ್ಳಿ ಈಶ್ವರಪ್ಪ ತಿಳಿಸಿದರು.

ಹಣ ಸಂಪಾದಿಸಬಹುದು ಎಂದು ಈರುಳ್ಳಿ ಬೆಳೆಗೆ ಕೈಹಾಕಿ ನಷ್ಟ ಅನುಭವಿಸುತ್ತಿದ್ದೇವೆ. ಕೈಯಲ್ಲಿದ್ದ ₹40ಸಾವಿರ ಬಂಡವಾಳ ಹಾಕಿ ಕೈಸುಟ್ಟುಕೊಂಡೆವು.
–ಶಂಕರಲಿಂಗಪ್ಪ, ಈರುಳ್ಳಿ ಬೆಳೆಗಾರ
ಕೃಷಿ ಉತ್ಪನ್ನ ಯಾವುದಕ್ಕೂ ಬೆಲೆ ಇಲ್ಲ. ಬೆಲೆ ಇಳಿಕೆಯಾದ ಹಾಗೂ ಪ್ರಕೃತಿ ವಿಕೋಪಕ್ಕೆ ತುತ್ತಾದ ಕೃಷಿ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ಬೆಲೆ ಕೊಡಬೇಕು.
–ಎಂ.ಕೆ.ಹುಲಿಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.