ADVERTISEMENT

ಹಾಸನ: ಸಾಮಾಜಿಕ ಸೇವೆಯಲ್ಲಿ ರೋಟರಿ ಮುಂದೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 11:24 IST
Last Updated 23 ಮೇ 2025, 11:24 IST
ಹಾಸನದ ಕಲಾ ಕಾಲೇಜು ಮೈದಾನದಲ್ಲಿ ನಡೆದ ಸೆಂಟ್ರಲ್‌ ಪ್ರಿಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ಹಾಸನದ ಕಲಾ ಕಾಲೇಜು ಮೈದಾನದಲ್ಲಿ ನಡೆದ ಸೆಂಟ್ರಲ್‌ ಪ್ರಿಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು   

ಹಾಸನ: ರೋಟರಿ ಸಂಸ್ಥೆಯಂತಹ ಸಾಮಾಜಿಕ ಸೇವಾ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಮತ್ತೊಂದಿಲ್ಲ ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಕೆ ಹರೀಶ್‌ ಅಭಿಪ್ರಾಯಪಟ್ಟರು.

ನಗರದ ಕಲಾ ಕಾಲೇಜು ಮೈದಾನದಲ್ಲಿ ರೋಟರಿ ಕ್ಲಬ್ ಆಫ್‌ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ಸೆಂಟ್ರಲ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿ ಸಂಸ್ಥೆಯು ವಿಶ್ವದಲ್ಲಿ ಪೊಲಿಯೋ ನಿರ್ಮೂಲನೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. ಜೊತೆಗೆ ಆಯಾ ಸಂದರ್ಭಕ್ಕೆ ಎದುರಾಗುವ ವಿಪತ್ತುಗಳ ನಿರ್ವಹಣೆಯಲ್ಲಿ ಸ್ಥಳೀಯ ಸರ್ಕಾರಗಳಿಗೆ ರೋಟರಿ ನೀಡುವ ನೆರವು ಬಹುದೊಡ್ಡ ಮಟ್ಟದಲ್ಲಿದ್ದು, ಇಂತಹ ಸಂಸ್ಥೆಗಳ ಕಾರ್ಯಗಳಲ್ಲಿ ಭಾಗವಹಿಸುವುದೇ ಹೆಮ್ಮೆಯ ಸಂಗತಿ ಎಂದರು.

ಕ್ರೀಡೆಯಿಂದ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಉತ್ತಮವಾಗಿರುತ್ತದೆ. ಬಾಲ್ಯದಿಂದಲೇ ಮಕ್ಕಳಿಗೆ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಂದಿಲ್ಲೊಂದು ಕ್ರೀಡೆಯಲ್ಲಿ ತೊಡಗಿಸಿ ಅವರನ್ನು ಆರೋಗ್ಯವಂತ ಪ್ರಜೆಗಳನ್ನಾಗಿ ನಿರ್ಮಾಣ ಮಾಡುವ ಹೊಣೆ ಸಮಾಜದ ಮೇಲಿದೆ ಎಂದು ತಿಳಿಸಿದರು.

ADVERTISEMENT

ಅಂತರರಾಷ್ಟ್ರೀಯ ಕ್ರೀಡಾಪಟು ಶಾಂತಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜದಲ್ಲಿ ಹತ್ತಾರು ಕಾರ್ಯಗಳನ್ನು ರೂಪಿಸಿ, ನೊಂದವರ ಪರ ನಿಲ್ಲುತ್ತಿದೆ. ರೋಟರಿ ಸಂಸ್ಥೆಯ ಆಯೋಜಿಸುವ ಕಾರ್ಯಕ್ರಮಗಳಿಂದ ಸಮಾಜಕ್ಕೆ ಬಹಳಷ್ಟು ಅನುಕೂಲವಿದ್ದು, ಅರ್ಹರು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಆಫ್ ಸೆಂಟ್ರಲ್‌ ಅಧ್ಯಕ್ಷ ನಾಗೇಶ್ ಎಂ.ಡಿ. ಮಾತನಾಡಿ, ರೋಟರಿ ಕ್ಲಬ್ ಆಫ್ ಸೆಂಟ್ರಲ್ ನೂತನ ಕ್ಲಬ್ ಆಗಿದ್ದು, ವಿವಿಧ ಯೋಜನೆ ರೂಪಿಸುತ್ತಿದೆ. ಮುಂದಿನ ದಿನಗಳಲ್ಲೂ ಕ್ಲಬ್‌ನ ಎಲ್ಲರ ಸಹಕಾರ ಪಡೆದು ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಮಾಡುವುದಾಗಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಚನ್ನರಾಯಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ರೋಟರಿ ಮಾಜಿ ವಲಯ ಪಾಲಕ ಮೋಹನ್, ಮಾಜಿ ಜಿಲ್ಲಾ ಗವರ್ನರ್‌ಗಳಾದ ಎಂ.ಕೆ ಗೋವರ್ಧನ್ ಕುಮಾರ್, ಬಿ.ಎನ್. ರಮೇಶ್, ವಲಯ ಪಾಲಕ ಸಂತೋ಼ಷ್, ನಿರ್ಮಲ್ ಕುಮಾರ್ ಜೈನ್ ಮಾತನಾಡಿದರು.

ಭಾಗವಹಿಸಿದ್ದ ತಂಡಗಳ ಪೈಕಿ ರೋಟರಿ ಕ್ಲಬ್ ಆಫ್ ಮಿಡ್ ಟೌನ್ ಪ್ರಥಮ ಬಹುಮಾನ ಪಡೆದರೆ, ರೋಟರಿ ಕ್ಲಬ್ ಆಫ್ ಸೆಂಟ್ರಲ್ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಚನ್ನರಾಯಪಟ್ಟಣ ವಿಷನ್ ರೋಟರಿ ತಂಡವು ಮೂರನೇ ಸ್ಥಾನ ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ ವಿವಿಧ ಕ್ಲಬ್‌ಗಳ ರೋಟರಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.