ADVERTISEMENT

ಶಾಂತಿಗಿರಿಯಲ್ಲಿ ಮುನಿ ಮಹಾರಾಜರ ಪ್ರತಿಮೆ: ಹರಿದು ಬಂದ ಸಹಸ್ರಾರು ಭಕ್ತರು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 0:15 IST
Last Updated 10 ನವೆಂಬರ್ 2025, 0:15 IST
ಶ್ರವಣಬೆಳಗೊಳದ ನೂತನ ಶಾಂತಿಗಿರಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಆಚಾರ್ಯ ಶಾಂತಿಸಾಗರ ಮಹಾರಾಜರ ಲೋಹದ ಪ್ರತಿಮೆ ಪ್ರತಿಷ್ಠಾಪಿಸಲಾಯಿತು.
ಶ್ರವಣಬೆಳಗೊಳದ ನೂತನ ಶಾಂತಿಗಿರಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಆಚಾರ್ಯ ಶಾಂತಿಸಾಗರ ಮಹಾರಾಜರ ಲೋಹದ ಪ್ರತಿಮೆ ಪ್ರತಿಷ್ಠಾಪಿಸಲಾಯಿತು.   

ಶ್ರವಣಬೆಳಗೊಳ: ಇಲ್ಲಿಯ ನೂತನ ಗಿರಿಯಾಗಿ ಶಾಂತಿಗಿರಿಯಲ್ಲಿ ಶಾಂತಿಸಾಗರ ಮಹಾರಾಜರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು.

ಭಾನುವಾರ ಬೆಳಿಗ್ಗೆ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಅವರು ವೇದಿಕೆ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಪ್ರತಿಮೆ ಅನಾವರಣ ಮಾಡಿದ್ದರು. ನಂತರ 4ನೇ ಬೆಟ್ಟದ ಶಾಂತಿಗಿರಿಯಲ್ಲಿ ಶಾಂತಿಸಾಗರ ಮಹಾರಾಜರ 10 ಅಡಿಯ ಲೋಹದ ಪ್ರತಿಮೆಯನ್ನು ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸಲಾಯಿತು. 20ನೇ ಶತಮಾನದ ಪ್ರಥಮಾಚಾರ್ಯ ಶಾಂತಿಸಾಗರ ಮಹಾರಾಜರು ಬಲಗೈನಲ್ಲಿ ಪಿಂಛಿ, ಎಡಗೈನಲ್ಲಿ ಕಮಂಡಲ ಹಿಡಿದು ನೋಡುತ್ತಿರುವ ಅಪರೂಪದ ಪ್ರತಿಮೆ ಇದಾಗಿದೆ.

ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶಾಂತಿಸಾಗರ ಮಹಾರಾಜರ ಪ್ರತಿಮೆಗೆ ಮಹಾಶಾಂತಿ ಮಂತ್ರಗಳೊಂದಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ಗಂಧಾಭಿಷೇಕದೊಂದಿಗೆ ಪುಷ್ಪವೃಷ್ಟಿ ಮಾಡಿ, ಅಷ್ಟವಿಧಾರ್ಚನೆಯೊಂದಿಗೆ ಮಹಾ ಶಾಂತಿಧಾರ, ಮಹಾಮಂಗಳಾರತಿ ಮಾಡಲಾಯಿತು.

ADVERTISEMENT

ನೆರೆದಿದ್ದ ಸಾವಿರಾರು ಸಂಖ್ಯೆಯ ಭಕ್ತರ ಹರ್ಷೋದ್ಘಾರಗಳ ಮಧ್ಯೆ ಆಚಾರ್ಯ ಶಾಂತಿಸಾಗರ ಮಹಾರಾಜರ ಪಾದುಕೆಗಳನ್ನು ಪ್ರತಿಷ್ಠಾಪಿಸಿ, ಸಕಲ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ಅಲ್ಲದೇ ಶಾಂತಿಸಾಗರ ಮಹಾರಾಜರ ಸಂದೇಶ, ಜೀವನ ಚರಿತ್ರೆಯ ಶಿಲಾಶಾಸನವನ್ನು ಅನಾವರಣ ಮಾಡಲಾಯಿತು.

ದೇಶದ ಅನೇಕ ರಾಜ್ಯಗಳಿಂದ ಮತ್ತು ರಾಜ್ಯದ ಅನೇಕ ಜಿಲ್ಲೆಗಳಿಂದ ಹರಿದು ಬಂದ ಭಕ್ತ ಸಾಗರ, ಬಾಹುಬಲಿಯ ವಿಂಧ್ಯಗಿರಿ, ಚಂದ್ರಗಿರಿಯ ಚಿಕ್ಕಬೆಟ್ಟ, ಚಾರುಕೀರ್ತಿ ಶ್ರೀಗಳ ಚಾರುಗಿರಿಯ ನಿಷಧಿ ಮಂಟಪಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಇದಕ್ಕೂ ಮೊದಲು ಅಲಂಕರಿಸಿದ ವಾಹನದಲ್ಲಿ ಆಚಾರ್ಯ ಶಾಂತಿ ಸಾಗರ ಮಹಾರಾಜರ ಮೂರ್ತಿಯನ್ನು ಇರಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಂಗಲವಾಧ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ಆಚಾರ್ಯರಿಗೆ ಆರತಿ ಮಾಡಿ, ಭಕ್ತಿ ಸಮರ್ಪಿಸಿದರು. ಕ್ಷೇತ್ರದ ವತಿಯಿಂದ ಅಭಿನವ ಚಾರುಕೀರ್ತಿ ಶ್ರೀಗಳು, ಬಾಹುಬಲಿಯ ಪ್ರತಿಮೆ ನೀಡಿ ಗಣ್ಯರನ್ನು ಗೌರವಿಸಿದರು.

ಸಮಾರಂಭದಲ್ಲಿ 10 ಸಾವಿರಕ್ಕೂ ಅಧಿಕ ಜನರಿಗೆ ಕ್ಷೇತ್ರದ ವತಿಯಿಂದ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಸಾನಿಧ್ಯವನ್ನು ಆಚಾರ್ಯ ಸುವಿಧಿಸಾಗರ ಮಹಾರಾಜ, ಆಚಾರ್ಯ ವರ್ಧಮಾನಸಾಗರ ಮಹಾರಾಜ, ವಿದ್ಯಾಸಾಗರ ಮಹಾರಾಜ, ಧರ್ಮಸಾಗರ ಮಹಾರಾಜರು ಹಾಗೂ ಸಂಘಸ್ಥ ತ್ಯಾಗಿಗಳು ವಹಿಸಿದ್ದರು. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷಾ, ಸದಸ್ಯರು ಪಾಲ್ಗೊಂಡಿದ್ದರು.

ಆಚಾರ್ಯ ಶಾಂತಿಸಾಗರ ಮಹಾರಾಜರ ಪಾದುಕೆಗಳನ್ನು ಪ್ರತಿಷ್ಠಾಪಿಸಲಾಯಿತು 
ನೂತನ ಗಿರಿಯಲ್ಲಿ ರಾರಾಜಿಸಿದ ಧರ್ಮ ಧ್ವಜಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.