ADVERTISEMENT

ರಾಜಕೀಯ ನಾಟಕ ಮಾಡುತ್ತಿರುವ ಶಿವಲಿಂಗೇಗೌಡ: ಜೆಡಿಎಸ್ ನಾಯಕರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:30 IST
Last Updated 14 ಜನವರಿ 2026, 7:30 IST
<div class="paragraphs"><p>ಶಾಸಕ ಕೆ.ಎಂ. ಶಿವಲಿಂಗೇಗೌಡ</p></div>

ಶಾಸಕ ಕೆ.ಎಂ. ಶಿವಲಿಂಗೇಗೌಡ

   

ಹಾಸನ: ದೇವೇಗೌಡರು, ಎಚ್.ಡಿ. ರೇವಣ್ಣ ಅವರ ನೆರವಿನಿಂದ ರಾಜಕೀಯ ಪ್ರವೇಶ ಮಾಡಿರುವ ಶಾಸಕ ಶಿವಲಿಂಗೇಗೌಡರು, ಇಂದು ಅದೇ ಕುಟುಂಬದ ವಿರುದ್ಧ ಮಾತನಾಡುತ್ತಿರುವುದು ಖಂಡನೀಯ ಎಂದು ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, 2008ರಲ್ಲಿ ಸಿದ್ದರಾಮ ಶೆಟ್ಟಿ ಅವರ ಮನೆಯಲ್ಲಿ ನಗರಸಭೆ ಚುನಾವಣೆ ಸಂಬಂಧ ನಡೆದ ಮಾತುಕತೆಯ ಸಂದರ್ಭದಲ್ಲಿ, ರೇವಣ್ಣ ಕೆಳಗೆ ಕುಳಿತಿದ್ದ ಶಿವಲಿಂಗೇಗೌಡರು, ಇಂದು ಅದೇ ನಾಯಕರ ವಿರುದ್ಧ ಆಧಾರರಹಿತ ಹಾಗೂ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ADVERTISEMENT

15 ವರ್ಷಗಳಿಂದ ರಾಜಕೀಯದಲ್ಲಿದ್ದು, ಹಲವು ಬಾರಿ ಶಾಸಕರಾಗಿರುವ ಶಿವಲಿಂಗೇಗೌಡರು, ಜೆಡಿಎಸ್‌ನಿಂದ ನನಗೆ ಯಾವುದೇ ಲಾಭವಾಗಿಲ್ಲ ಎಂದು ಹೇಳುತ್ತಿರುವುದು ಕ್ಷೇತ್ರದ ಜನರನ್ನು ಅವಮಾನಿಸಿದಂತಾಗಿದೆ. ಇದಕ್ಕೆ ಉತ್ತರವಾಗಿ 2028ರ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಜನರು ಸರಿಯಾದ ಪಾಠ ಕಲಿಸುವುದು ಶತಸಿದ್ಧ ಎಂದು ಸವಾಲು ಹಾಕಿದರು.

ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅರಸೀಕೆರೆಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಕೊಡಲಾಯಿತು. ಆದರೆ ಆ ಕಾಲೇಜಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ಕ್ಷೇತ್ರದ ಶಾಸಕ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದುವೇ ಅವರ ಆಡಳಿತದ ನೈಜ ಚಿತ್ರಣ ಎಂದು ಆರೋಪಿಸಿದರು.

ಶಿವಲಿಂಗೇಗೌಡರ 15 ವರ್ಷಗಳ ಶಾಸಕತ್ವದ ಅವಧಿ ಹಾಗೂ ಕಾಂಗ್ರೆಸ್‌ನಿಂದ ಆಯ್ಕೆಯಾದ ನಂತರದ ಎರಡೂವರೆ ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದ ಅವರು, ಚಿಕ್ಕ ತಿರುಪತಿ ರಾಜಗೋಪುರ ಉದ್ಘಾಟನೆ ಸೇರಿದಂತೆ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರದೇ ಕೇವಲ ಕಾಲಹರಣ ಮಾಡಲಾಗಿದೆ ಎಂದು ದೂರಿದರು.

ಜೆಡಿಎಸ್ ಮುಖಂಡ ಬಾಣಾವರ ಅಶೋಕ್ ಮಾತನಾಡಿ, ಶಿವಲಿಂಗೇಗೌಡರು ಉಂಡ ಮನೆಗೆ ದ್ರೋಹ ಮಾಡುವುದು ಯಾವ ನೈತಿಕತೆ? ಹಿಂದೆ ಹಾಗೂ ಇಂದಿನ ಅವಧಿಯಲ್ಲಿ ಅವರ ಆಸ್ತಿ ಎಷ್ಟು ಹೆಚ್ಚಾಗಿದೆ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಬೇಕು. ರೇವಣ್ಣ ಕುಟುಂಬದ ವಿರುದ್ಧ ಮುಂದಿನ ದಿನಗಳಲ್ಲಿ ಅವಹೇಳನಕಾರಿ ಮಾತುಗಳನ್ನಾಡಿದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶಿವಲಿಂಗೇಗೌಡರು ರಾಜಕೀಯಕ್ಕೆ ಬಂದಾಗ ಮೊದಲ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಜಯಣ್ಣ ಮತ್ತು ರೇವಣ್ಣ ಅವರ ಶಿಫಾರಸಿನ ಮೇರೆಗೆ ಟಿಕೆಟ್ ದೊರೆತದ್ದು ಎಂಬುದನ್ನು ಅವರು ಮರೆತಂತಿದೆ. ಕ್ಷೇತ್ರದ ಪ್ರತಿಯೊಂದು ಸಮುದಾಯ ಭವನಕ್ಕೂ ದೇವೇಗೌಡರ ಅನುದಾನ ಕಾರಣವಾಗಿದೆ. ಶಿವಲಿಂಗೇಗೌಡರ ವ್ಯಕ್ತಿತ್ವದಿಂದ ಅರಸೀಕೆರೆಯಲ್ಲಿ ಮತ ಬಂದಿಲ್ಲ ಎಂದು ಕಿಡಿಕಾರಿದರು.

ಜನವರಿ 24ರಂದು ನಡೆಯಲಿರುವ ಜೆಡಿಎಸ್ ಸಮಾವೇಶಕ್ಕೆ ಅರಸೀಕೆರೆಯಿಂದ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಶೇಖರಪ್ಪ, ಗಂಗಣ್ಣ, ಮಂಜಣ್ಣ, ಕೇಶವ, ಹರ್ಷವರ್ಧನ್, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.