ADVERTISEMENT

ಹಾಸನ | ಹೊಗೆಸೊಪ್ಪು ದರ ಇಳಿಕೆ: ರೈತರಿಗೆ ನಷ್ಟದ ಆತಂಕ

ಬಿ.ಪಿ.ಗಂಗೇಶ್‌
Published 22 ಫೆಬ್ರುವರಿ 2026, 23:45 IST
Last Updated 22 ಫೆಬ್ರುವರಿ 2026, 23:45 IST
ರಾಮನಾಥಪುರದ ತಂಬಾಕು ಮಾರುಕಟ್ಟೆಯಲ್ಲಿ ಬೇಲ್‌ಗಳನ್ನು ಇಟ್ಟಿರುವುದು.
ರಾಮನಾಥಪುರದ ತಂಬಾಕು ಮಾರುಕಟ್ಟೆಯಲ್ಲಿ ಬೇಲ್‌ಗಳನ್ನು ಇಟ್ಟಿರುವುದು.   

ಕೊಣನೂರು (ಹಾಸನ ಜಿಲ್ಲೆ): ಹೊಗೆಸೊಪ್ಪು ಬೆಲೆಯಲ್ಲಿನ ದಿಢೀರ್ ಕುಸಿತದಿಂದ ಬೆಳೆಗಾರರು ಅಂತಕಗೊಂಡಿದ್ದಾರೆ. ಮೊದಲೇ ಮಾರಿದ್ದರೆ ನಷ್ಟದ ಪ್ರಮಾಣ ಕಡಿಮೆ ಆಗುತ್ತಿತ್ತು ಎಂದು ಅವರು ಅಂದುಕೊಳ್ಳುತ್ತಿದ್ದಾರೆ.

ಅರಕಲಗೂಡು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿನ ದರವು ಏಕಾಏಕಿ ಇಳಿಕೆ ಆಗಿರುವುದು ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ. ರಾಮನಾಥಪುರದ ತಂಬಾಕು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಪ್ರಾರಂಭದ ದಿನಗಳಲ್ಲಿ ಉತ್ತಮ ಗುಣಮಟ್ಟದ ಒಂದು ಕೆ.ಜಿ. ತಂಬಾಕಿಗೆ ಗರಿಷ್ಠ ₹320 ಬೆಲೆ ದೊರಕುತ್ತಿತ್ತು. ಕೆಲ ದಿನಗಳ ನಂತರ ₹320ರಿಂದ ₹322ಕ್ಕೆ ಏರಿತ್ತು. ಮತ್ತಷ್ಟು ಉತ್ತಮ ದರದ ಆಶಾಭಾವದಲ್ಲಿ ರೈತರಿದ್ದರು.

ಇದೀಗ ಗುಣಮಟ್ಟದ ಒಂದು ಕೆ.ಜಿ. ತಂಬಾಕಿನ ಬೆಲೆ ₹270ಕ್ಕೆ ಇಳಿದಿದೆ. ಗುಣಮಟ್ಟದ ಬೇಲ್‍ಗಳನ್ನು ₹250ಕ್ಕೆ ಕೊಳ್ಳಲಾಗುತ್ತಿದೆ. ಕೆಳ ದರ್ಜೆಯ ತಂಬಾಕಿಗೆ ಕೆ.ಜಿ.ಗೆ ₹200 ನೀಡಲಾಗುತ್ತಿದೆ. ಆರಂಭದಲ್ಲಿ ರೈತರಿಂದ ಉತ್ತಮ ದರ್ಜೆಯ ಹೊಗೆಸೊಪ್ಪು ಮಾತ್ರ ಖರೀದಿಸುತ್ತಿದ್ದ ವರ್ತಕರು, ಬೇಡಿಕೆ ಇಲ್ಲದ ನೆಪವೊಡ್ಡಿ ಕಳೆ ದರ್ಜೆಯ ಹೊಗೆಸೊಪ್ಪು ಕೊಳ್ಳದೇ ತಿರಸ್ಕರಿದ್ದರು. ಕೆಲ ದಿನಗಳ ನಂತರ ಕೆಳ ದರ್ಜೆಯ ಹೊಗೆಸೊಪ್ಪು ಕೊಳ್ಳಲು ಮುಂದಾದರೂ, ಬೆಲೆ ಮಾತ್ರ ಸುಧಾರಣೆ ಕಂಡಿಲ್ಲ. ಕಳಪೆ ಹೊಗೆಸೊಪ್ಪಿನ ಜೊತೆಗೆ ಉತ್ತಮ ದರ್ಜೆ ತಂಬಾಕಿನ ದರವೂ ಇಳಿಮುಖವಾಗಿದೆ.

ADVERTISEMENT

ಕಳೆದ ಸಲ ಆಂಧ್ರಪ್ರದೇಶದಲ್ಲಿ ಕೆ.ಜಿ.ಗೆ ಗರಿಷ್ಠ ದರ ₹412 ದಾಟಿತ್ತು. ಹೀಗಾಗಿ, ಉತ್ಕೃಷ್ಟ ದರ್ಜೆಯ ತಂಬಾಕು ಉತ್ಪಾದನೆಗೆ ಹೆಸರಾದ ಕರ್ನಾಟಕದ ಮಾರುಕಟ್ಟೆಯಲ್ಲೂ ಅದೇ ದರ ಸಿಗುವ ಆಶಾಭಾವ ರೈತರಲ್ಲಿತ್ತು. ಈಗ ಗರಿಷ್ಠ ದರವೂ ಇಳಿಕೆ ಕಂಡಿದೆ.

ಅತಿವೃಷ್ಟಿ ಪರಿಣಾಮ ತಂಬಾಕು ಇಳುವರಿ ಕುಂಠಿತಗೊಂಡಿದೆ. ತಂಬಾಕು ಉತ್ಪಾದನೆ ಅಂದಾಜು 80 ಸಾವಿರ ಟನ್‌ ಆಗಿದೆ. ತಂಬಾಕಿಗೆ ಗರಿಷ್ಠ ದರ ಅಂದಾಜಿಸಿದ್ದ ರೈತರ ನಿರೀಕ್ಷೆ ತಲೆಕೆಳಗಾಗಿದೆ. ಒಂದೆಡೆ ಅತಿವೃಷ್ಟಿ ಸಮಸ್ಯೆಯಾದರೆ, ಮತ್ತೊಂದೆಡೆ ಹರಾಜಿನಲ್ಲಿ ಗರಿಷ್ಠ ದರದ ಲಾಭ ಸಿಗುತ್ತಿಲ್ಲ.

ಕೇಂದ್ರ ಸರ್ಕಾರ ತಂಬಾಕಿನ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ಹಾಕುತ್ತಿದೆ ಎಂದು ವರ್ತಕರು ಹರಾಜು ಪ್ರಕ್ರಿಯೆಯನ್ನು ದಿಢೀರನೆ ನಿಲ್ಲಿಸಿದ್ದರು. ತಂಬಾಕು ಮಂಡಳಿ ಕೂಡ ರೈತರಿಗೆ ಆಗುತ್ತಿರುವ ನಷ್ಟವನ್ನು ಸರಿಪಡಿಸಲು ಮುಂದಾಗಿಲ್ಲ. ಇದುವರೆಗೂ ಹೆಚ್ಚಿನ ಪ್ರಮಾಣದ ತಂಬಾಕನ್ನು ಮಾರದೇ ತಮ್ಮ ಬಳಿ ಇಟ್ಟುಕೊಂಡಿರುವ ರೈತರು, ಸಿಗುವ ಆದಾಯವನ್ನು ಕಳೆದುಕೊಂಡಂತಾಯಿತಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ಮಾರುಕಟ್ಟೆಯಲ್ಲಿ ತಂಬಾಕಿಗೆ ಬೇಡಿಕೆ ತಗ್ಗಿದೆ ಎಂದು ವರ್ತಕರು ಬೆಲೆ ಹೆಚ್ಚಿಸಲು ಮನಸ್ಸು ಮಾಡುತ್ತಿಲ್ಲ. ಕೆಲ ಬೆಳೆಗಾರರು ಮಾರಾಟ ಮಾಡಲು ಮುಂದಾಗಿದ್ದರೆ, ಕೆಲವರು ಬೇಲ್‌ಗಳನ್ನು ಮಾರುಕಟ್ಟೆ ತರಲು ಆಸಕ್ತಿ ವಹಿಸುತ್ತಿಲ್ಲ’ ಎಂದು ಮಾರುಕಟ್ಟೆ ಹರಾಜು ಅಧೀಕ್ಷಕಿ ಸವಿತಾ ತಿಳಿಸಿದರು.

ನೇತ್ರಪಾಲ್ ಗುಡ್ಡೇನಹಳ್ಳಿ
ತಂಬಾಕು ಬೆಳೆಗಾರರ ಬೇಡಿಕೆಗೆ ಕೊಳ್ಳುವ ಕಂಪನಿಗಳು ಸ್ಪಂದಿಸುತ್ತಿಲ್ಲ. ತೆರಿಗೆ ಸಬೂಬು ಹೇಳಿಕೊಂಡು ಏಕಾಏಕಿ ಬೆಲೆ ಇಳಿಕೆ ಮಾಡಿದ್ದಾರೆ. ಪ್ರತಿ ಬೆಳೆಗಾರರಿಗೂ ಸಾವಿರಾರು ರೂಪಾಯಿ ನಷ್ಟವಾಗುತ್ತಿದೆ.
ನೇತ್ರಪಾಲ್ ಗುಡ್ಡೇನಹಳ್ಳಿ ಅಖಿಲ ಭಾರತೀಯ ರೈತ ಸಂಘಟನೆಯ ಸದಸ್ಯ
ಈರೇಗೌಡ ನಿಲುವಾಗಿಲು
ಪ್ರಾರಂಭದಲ್ಲಿ ಸರಾಸರಿ ಬೆಲೆ ₹290 ಸಿಗುತ್ತಿತ್ತು. ತೆರಿಗೆ ನೆಪ ಹೇಳಿ ಮಾರಾಟ ಸ್ಥಗಿತಗೊಳಿಸಿದ್ದು ಈಗ ಎಲ್ಲ ಕಂಪನಿ ವರ್ತಕರು ಬಂದಿದ್ದರೂ ತಂಬಾಕಿನ ಬೆಲೆ ಇಳಿಮುಖವಾಗುತ್ತಿದೆ.
ಈರೇಗೌಡ ನಿಲುವಾಗಿಲು ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷ
ಬೇಡಿಕೆ ಪರಿಗಣಿಸದ ವರ್ತಕರು
ಹೊಗೆಸೊಪ್ಪನ್ನು ದರವನ್ನು ₹320ರಿಂದ ₹270 ₹250ಕ್ಕೆ ಇಳಿಕೆ ಮಾಡಿರುವುದು ರೈತರನ್ನು ಕೆರಳಿಸಿದ್ದು ವರ್ತಕರು ಮತ್ತು ಅಧಿಕಾರಿಗಳ ನಡುವೆ ರೈತರು ಕೆಲ ಮಾತಿನ ಚಕಮಕಿ ನಡೆದಿತ್ತು. ಬೆಲೆ ಏರಿಕೆ ಮಾಡುವಂತೆ ಆಗ್ರಹಿಸಿ ಗುರುವಾರ ಮಾರಾಟ ಪ್ರಕ್ರಿಯೆ ನಿಲ್ಲಿಸುವಂತೆ ರೈತರು ಒತ್ತಾಯಿಸಿದ್ದರು. ಆದರೆ ರೈತರ ಬೇಡಿಕೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ವರ್ತಕರು ಶುಕ್ರವಾರದಿಂದ ಮತ್ತೆ ಹರಾಜು ಪ್ರಕ್ರಿಯೆ ಆರಂಭಿಸಿದ್ದು ರೈತರಿಂದ ತಂಬಾಕು ಕೊಳ್ಳುತ್ತಿದ್ದಾರೆ. ‘ಎಲ್ಲರಿಗೂ ಆದಂತೆ ನಮಗೂ ಆಗುತ್ತದೆ’ ಎನ್ನುತ್ತಲೇ ಬೇಸರದಿಂದ ಬೆಳೆಗಾರರು ತಂಬಾಕು ಮಾರಾಟ ಮಾಡುತ್ತಿದ್ದಾರೆ. ರಾಮನಾಥಪುರ ಮಾರುಕಟ್ಟೆಯಲ್ಲಿ ಶುಕ್ರವಾರ ಕೆ.ಜಿ.ಗೆ ಗರಿಷ್ಠ ₹278 ಕನಿಷ್ಠ ₹252 ದೊರೆತಿದ್ದು ಸರಾಸರಿ ಬೆಲೆ ₹252 ದೊರೆತಿದೆ. ಕೆಲ ದಿನಗಳ ಹಿಂದೆ ಗರಿಷ್ಠ ಬೆಲೆ ₹321 ಕನಿಷ್ಠ ₹220 ಹಾಗೂ ಸರಾಸರಿ ಬೆಲೆ ₹279ರಿಂದ ₹292ರವರೆಗೆ ಸಿಗುತ್ತಿತ್ತು. ಈಗ ಸಿಗುತ್ತಿರುವ ದರದಲ್ಲಿ ಮಾರುಕಟ್ಟೆಗೆ ಸಾಗಿಸಿದಲ್ಲಿ ಸಿಂಗಲ್ ಬ್ಯಾರಲ್ ಪರವಾನಗಿ ಹೊಂದಿರುವ ಬೆಳೆಗಾರರಿಗೆ ಸುಮಾರು ₹1 ಲಕ್ಷ ಮತ್ತು ಡಬಲ್ ಬ್ಯಾರಲ್ ಪರವಾನಗಿ ರೈತರಿಗೆ ₹1.5 ಲಕ್ಷಕ್ಕೂ ಹೆಚ್ಚು ನಷ್ಟವಾಗುತ್ತದೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.