ADVERTISEMENT

ಬೈಲಹಳ್ಳಿಯಲ್ಲಿ ಗಿರಿಜನ ಉತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 1:19 IST
Last Updated 25 ಜನವರಿ 2021, 1:19 IST
ಹಾಸನ ತಾಲ್ಲೂಕಿನ ಬೈಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗಿರಿಜನ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಉದ್ಘಾಟಿಸಿದರು
ಹಾಸನ ತಾಲ್ಲೂಕಿನ ಬೈಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗಿರಿಜನ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಉದ್ಘಾಟಿಸಿದರು   

ಹಾಸನ: ತಾಲ್ಲೂಕಿನ ಬೈಲಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಭಾನುವಾರ ನಡೆದ ಗಿರಿಜನ ಉತ್ಸವದಲ್ಲಿ ಕಲಾವಿದರು ಕಲಾ ಪ್ರದರ್ಶನ ನೀಡಿದರು.

ಪೂಜಾ ಕುಣಿತ, ಪಟಕುಣಿತ, ವೀರಗಾಸೆ, ಡೊಳ್ಳು ಕುಣಿತ, ನಾಸಿಕ್ ಡೋಲು, ಕೋಲಾಟ, ಗಾರುಡಿ ಗೊಂಬೆ ಹಾಗೂ ಹಲವಾರು ಕಲಾತಂಡಗಳನ್ನೊಳಗೊಂಡು ಸರ್ಕಾರಿ ಪ್ರೌಢಶಾಲಾ ಆವರಣದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಆಂಜನೇಯಸ್ವಾಮಿ ದೇವಾಲಯ ಬಳಿ ಕೊನೆಗೊಂಡಿತು. ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡರು.

ಸುಗಮ ಸಂಗೀತ, ವಚನ ಗಾಯನ, ತತ್ವಪದ ಗಾಯನ, ಜನಪದ ಗಾಯನ, ಭರತನಾಟ್ಯ, ರಂಗಗೀತೆ, ದಾಸರ ಪದಗಳು ಹಾಗೂ ಸಮೂಹ ನೃತ್ಯಗಳು ಪ್ರೇಕ್ಷಕರ ಮನ ರಂಜಿಸಿದವು. ಸುತ್ತಮುತ್ತಲಿನ ಹಳ್ಳಿಗಳಿಂದಲೂ ಬಂದಿದ್ದ ಅಪಾರ ಸಂಖ್ಯೆಯ ಜನರು ಕಾರ್ಯಕ್ರಮ ವೀಕ್ಷಿಸಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ಆರ್. ಸತ್ಯನಾರಾಯಣ, ‘ಕೋವಿಡ್ 19ರ ಕಾರಣದಿಂದ ಸಾಂಸ್ಕೃತಿಕ ಚಟುವಟಿಕೆಗಳಿಲ್ಲದೆ ಮೌನಕ್ಕೆ ಸರಿದಿದ್ದ ಗ್ರಾಮದಲ್ಲಿ ಸಾಂಸ್ಕೃತಿಕ ಕಲಾತಂಡಗಳು ಹೊಸ ಜೀವ ತರಿಸಿವೆ’ ಎಂದು ಹೇಳಿದರು.

ಶ್ರೀರಾಮ ಸೇವಾ ಸಮಿತಿಯ ಕಾರ್ಯದರ್ಶಿ ಜನಾರ್ದನ ಮಾತನಾಡಿ, ‘ಗಿರಿಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಬೈಲಹಳ್ಳಿ ಗ್ರಾಮದಲ್ಲಿ ಉತ್ಸವ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಾಲ್ಮೀಕಿ ಸಮುದಾಯದ ಮುಖಂಡರಾದ ಶೇಖರಪ್ಪ, ಧರ್ಮಪ್ಪ ನಾಯಕ, ಜನಕನಾಯಕ ಹಾಗೂ ಗ್ರಾಮದ ಮುಖಂಡರಾದ ರಾಜು, ಪ್ರೇಮಶೇಖರ್, ನೀಲಮ್ಮ ನಾಗರಾಜು, ಪ್ರಸಾದ್, ಶ್ರೀನಿವಾಸ, ಜನಾರ್ಧನ, ಯೋಗೀಶ್, ಟಿ.ಪಿ.ರಮೇಶ್, ಸೀತಮ್ಮ ಈರನಾಯಕ, ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಜನಪದ ಕಲಾವಿದರಾದ ಕುಮಾರ್ ಕಟ್ಟೇಬೆಳಗುಲಿ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.