ಹೊಳೆನರಸೀಪುರ: ಶತಮಾನಗಳ ಇತಿಹಾಸವನ್ನು ಹೊಂದಿರುವ ಇಲ್ಲಿನ ವಾಣಿವಿಲಾಸ ಸೇತುವೆ, ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಗಿಡಗಂಟಿಗಳು ಬೆಳೆಯುತ್ತಿದ್ದು, ಸೇತುವೆ ಶಿಥಿಲವಾಗುವ ಆತಂಕ ಎದುರಾಗಿದೆ.
ಆಧುನಿಕ ತಂತ್ರಜ್ಞಾನವೂ ಇಲ್ಲದ ಕಾಲದಲ್ಲಿ ನಿರ್ಮಾಣವಾಗಿರುವ ಈ ಸೇತುವೆ ಗಟ್ಟಿಯಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ಇದೇ ರೀತಿ ನಿರ್ವಹಣೆಯ ಕೊರತೆ ಎದುರಾದರೆ, ಕೆಲವೇ ವರ್ಷಗಳಲ್ಲಿ ಸೇತುವೆಗೆ ಧಕ್ಕೆಯಾಗಲಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಪಟ್ಟಣದಿಂದ ಹಾಸನಕ್ಕೆ ಹೋಗುವ ಮಾರ್ಗದಲ್ಲಿ ಹೇಮಾವತಿ ನದಿಗೆ ಅಂದಿನ ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. 1897ರಲ್ಲಿ ಪ್ರಾರಂಭವಾದ ಸೇತುವೆ ಕಾಮಗಾರಿ 1898 ಮುಗಿದಿದ್ದು, ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಲಾಯಿತು. ಅಂದಿನಿಂದ ಈ ಸೇತುವೆಗೆ ವಾಣಿವಿಲಾಸ ಸೇತುವೆ ಎಂದು ಹೆಸರಿಡಲಾಗಿದೆ.
ಅಂದಿನಿಂದ ಇಲ್ಲಿಯವರೆಗೆ ಕೋಟ್ಯಂತರ ವಾಹನಗಳು, ಭಾರಿ ಭಾರಹೊತ್ತ 20 ಚಕ್ರದ ಲಾರಿಗಳು ಈ ಸೇತುವೆ ಮೇಲೆ ತಿರುಗಾಡಿವೆ. ದಿವಂಗತ ಜಿ. ಪುಟ್ಟಸ್ವಾಮಿಗೌಡರು ನೀರಾವರಿ ಸಚಿವರಾಗಿದ್ದಾಗ ಪಕ್ಕದಲ್ಲೇ ಒಂದು ಹೊಸ ಸೇತುವೆ ನಿರ್ಮಾಣ ಮಾಡಿಸಿದ್ದು, ನಂತರ ಈ ಸೇತುವೆಯ ಬಳಕೆ ಕಡಿಮೆ ಆಗಿದೆ. ಹೊಸ ಸೇತುವೆ ಬಂದು ಹಳೆ ಸೇತುವೆ ಪಾಳುಬಿತ್ತು ಎನ್ನುವಂತಾಗಿದೆ.
ಸೇತುವೆ ಒಳಗಿಂದ ಗಿಡಗಂಟಿಗಳು ಬೆಳೆದು ಸೇತುವೆ ದುರ್ಬಲವಾಗುತ್ತಿದೆಯೇ ಎನ್ನುವ ಆತಂಕ ಜನರದ್ದು. ಸಂಬಂಧಪಟ್ಟ ಅಧಿಕಾರಿಗಳು ಈ ಗಿಡಗಂಟಿಗಳನ್ನು ತೆಗೆದು ಸ್ವಲ್ಪ ನಿರ್ವಹಣೆ ಮಾಡಿದರೆ, ಈ ಸೇತುವೆ ಇನ್ನೂ 100 ವರ್ಷ ಬಳಸಬಹುದು ಎಂದು ನಿವೃತ್ತ ಎಂಜಿನಿಯರ್ ಒಬ್ಬರು ಹೇಳುತ್ತಾರೆ.
ಈ ಸೇತುವೆಯ ನಿರ್ವಹಣೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬರುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಾಧಿಕಾರದ ಎಂಜಿನಿಯರ್‌ಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.
ಈ ಮೊದಲು ವಾಣಿವಿಲಾಸ ಸೇತುವೆಯನ್ನು ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸಲಾಗುತಿತ್ತು. ಈಗ ರಾಷ್ಟ್ರೀಯ ಹೆದ್ದಾರಿ 370 ಕ್ಕೆ ಸೇರಿದ ನಂತರ ಅವರೇ ನಿರ್ವಹಿಸಬೇಕು.– ವಿನೂತನ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್
ವಾಣಿ ವಿಲಾಸ ಸೇತುವೆ ಅನುಪಯುಕ್ತ ಎಂದು ನಿರ್ಧರಿಸಿಲ್ಲ. ಅದನ್ನು ನಿರ್ವಹಿಸಬೇಕಾದದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜವಾಬ್ದಾರಿ. ಹಳೆಯ ಕಾಲದ ಸೇತುವೆಯ ರಕ್ಷಣೆ ಮಾಡುವುದು ಅಗತ್ಯ.– ನರೇಂದ್ರ, ಸೇತುವೆಯನ್ನು ನಿರ್ವಹಣೆ ಮಾಡಿದ್ದ ಎಂಜಿನಿಯರ್
ನಾನು ಹುಟ್ಟಿದಾಗಿನಿಂದ ವಾಣಿವಿಲಾಸ ಸೇತುವೆ ಮೇಲೆ ಓಡಾಡುತ್ತಿದ್ದೇನೆ. ಈಗಲೂ ಅದೇ ಸೇತುವೆ ಮೇಲೆ ಓಡಾಡುತ್ತೇನೆ. ಈ ಸೇತುವೆ ಇನ್ನೂ ಗಟ್ಟಿಮುಟ್ಟಾಗಿದೆ. ಇದನ್ನು ನಿರ್ವಹಿಸಿ ಸಾರ್ವಜನಿಕರ ಬಳಕೆಗೆ ನೀಡಬೇಕು.– ಜಗದೀಶ್, ನಿವೃತ್ತ ಯೋಧ ಕಡುವಿನಕೋಟೆ
ಸೇತುವೆ ಉಳಿಸಲು ಮನವಿ
ಯೂಟ್ಯೂಬ್‌ನಲ್ಲಿ ಸ್ವರೂಪ್ ಎನ್ನುವವರು ಈ ಸೇತುವೆಯ ವಿಡಿಯೋ ಮಾಡಿ ವಿವರಿಸಿದ್ದು ಇದನ್ನು 1.5 ಲಕ್ಷ ಜನರು ವೀಕ್ಷಿಸಿದ್ದಾರೆ. ಅದರಲ್ಲಿ 70 ಸಾವಿರಕ್ಕೂ ಹೆಚ್ಚು ಜನರು ಈ ಸೇತುವೆ ನಿರ್ವಹಣೆ ಮಾಡುವಂತೆ ಹಾಗೂ ಆ ಮೂಲಕ ಮೈಸೂರು ಮಹಾರಾಜರಿಗೆ ಗೌರವ ಸಲ್ಲಿಸಿ ಎಂದು ವಿನಂತಿಸಿದ್ದಾರೆ.
ವಾಣಿವಿಲಾಸ ಸೇತುವೆ ನಿರ್ವಹಿಸಿ ಲಘುವಾಹನ ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ನೀಡಿದರೆ ಹೊಸ ಸೇತುವೆ ಮೇಲೆ ವಾಹನ ದಟ್ಟಣೆ ಕಡಿಮೆ ಆಗಿ ಅಪಘಾತಗಳು ತಪ್ಪುತ್ತದೆ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.